ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಎಐಡಿವೈಒ ನೇತೃತ್ವದಲ್ಲಿ ಪ್ರತಿಭಟನೆ

Published 18 ಜನವರಿ 2024, 15:49 IST
Last Updated 18 ಜನವರಿ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಉದ್ಯೋಗ ಆಕಾಂಕ್ಷಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಹಿಂದೆ ನಡೆದಿರುವ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

‘ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ನಡೆಸುತ್ತಿಲ್ಲ. ನೇಮಕಾತಿ ನಡೆಸಿದರೆ ನಮಗೇನು ಲಾಭ ಎಂಬ ಧೋರಣೆ ಖಂಡನೀಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.

‘ರಾಜಕೀಯ ಕ್ಷೇತ್ರವು ಸಮಾಜ ಸೇವೆಗೆ ಬದಲಾಗಿ ಹಣ ಮಾಡುವ ದಂಧೆಯಾಗಿದೆ. ನ್ಯಾಯಾಧೀಶರು, ಐಪಿಎಸ್, ಐಎಎಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಸೇರುತ್ತಿದ್ದಾರೆ. ದುರಾಸೆಯು ರಾಜಕಾರಣಿಗಳನ್ನು ಯಾವ ಹಂತಕ್ಕಾದರೂ ದೂಡುತ್ತದೆ’ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್ ಮಾತನಾಡಿ, ‘ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ 125 ದೇಶಗಳಲ್ಲಿ 111ನೇ ಸ್ಥಾನದಲ್ಲಿದೆ. ಆಳುವ ಸರ್ಕಾರಗಳ ಆರ್ಥಿಕ ನೀತಿಗಳು ಕಾರ್ಪೊರೇಟ್ ಪರ, ಖಾಸಗೀಕರಣದ ಪರವಾಗಿವೆ. ಗರಿಷ್ಠ ಲಾಭ ಮಾಡುವುದು ಖಾಸಗಿಯವರ ಉದ್ದೇಶವಾಗಿರುವುದರಿಂದ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿ ಯಾಂತ್ರೀಕರಣದ ಮೊರೆ ಹೋಗುತ್ತಾರೆ. ಹೀಗಾಗಿ, ಸರ್ಕಾರದ ನೀತಿಗಳು ಉದ್ಯೋಗದ ಪರವಾಗಿ ರೂಪುಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಡಿವೈಒನ ಅಖಿಲ ಭಾರತ ಉಪಾಧ್ಯಕ್ಷರಾದ ಜಿ.ಎಸ್.ಕುಮಾರ್‌, ರಾಜಗೋಪಾಲ್, ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್‍, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹಾಗೂ ನಾ.ದಿವಾಕರ್‌ ಪಾಲ್ಗೊಂಡಿದ್ದರು.

ನಿರುದ್ಯೋಗ ಹೆಚ್ಚಾದಂತೆ ಆರ್ಥಿಕ ಸಾಮಾಜಿಕ ಸಮಸ್ಯೆಗಳೂ ಹೆಚ್ಚಲಿವೆ. ನ್ಯಾಯಾಂಗದ ಮೂಲಕವೂ ನ್ಯಾಯ ಸಿಗಲು ಸಾಧ್ಯವಾಗುತ್ತಿಲ್ಲ. ಯುವಜನರೇ ಸಮಸ್ಯೆಗಳ ವಿರುದ್ಧ ಹೋರಾಡಬೇಕು
ಎನ್‌.ಸಂತೋಷ್‌ ಹೆಗ್ಡೆ ನಿವೃತ್ತ ಲೋಕಾಯುಕ್ತ

ಹಕ್ಕೊತ್ತಾಯಗಳು * ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 9.64 ಲಕ್ಷ ಹುದ್ದೆ ಮತ್ತು ರಾಜ್ಯದ 43 ಇಲಾಖೆಗಳಲ್ಲಿ ಖಾಲಿಯಿರುವ ಸುಮಾರು 2.58 ಲಕ್ಷ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು‌ * ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವರ್ಷದಲ್ಲಿ ಕನಿಷ್ಠ 200 ದಿನಗಳ ಕಾಲ ಕೆಲಸ ನೀಡಬೇಕು. ದಿನಗೂಲಿಯನ್ನು ₹600ಕ್ಕೆ ಹೆಚ್ಚಿಸಬೇಕು * ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು * ಸ್ವಿಗ್ಗಿ ಜೊಮಾಟೊ ಓಲಾ ಉಬರ್‌ನಲ್ಲಿ ಕೆಲಸ ಮಾಡುತ್ತಿರುವವರನ್ನು ಕಾರ್ಮಿಕರೆಂದು ಪರಿಗಣಿಸಬೇಕು * ಯುವಜನರ ಪರವಾದ ಉದ್ಯೋಗ ನೀತಿ ಜಾರಿಗೆ ತರಬೇಕು * ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು. ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಕಾಯಂ ಉದ್ಯೋಗ ನೀಡಬೇಕು * ಕೆಪಿಎಸ್‍ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹೋಟಾ ಸಮಿತಿಯ ಶಿಫಾರಸು ಜಾರಿಗೊಳಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT