ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗುಂಡಿ ಮುಚ್ಚುವ ಕಾಮಗಾರಿ; ಮತ್ತೆ ರಸ್ತೆಗಿಳಿದ ಪೈಥಾನ್‌

ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಮುಖ್ಯ ಆಯುಕ್ತ
Last Updated 22 ಫೆಬ್ರುವರಿ 2022, 17:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್‌ನಿಂದ ಪದೇ ಪದೇ ಛೀಮಾರಿ ಹಾಕಿಸಿಕೊಂಡ ಬಿಬಿಎಂಪಿ, ಈ ಕಾಮಗಾರಿಗೆ ಮತ್ತೆ ಪೈಥಾನ್‌ ಯಂತ್ರ ಬಳಸಲು ನಿರ್ಧರಿಸಿದೆ.

ನಗರದ ಪೂರ್ವ ವಲಯದಲ್ಲಿ 17 ರಸ್ತೆಗಳು, ಪಶ್ಚಿಮ ವಲಯದಲ್ಲಿ 37 ರಸ್ತೆಗಳು, ದಕ್ಷಿಣ ವಲಯದಲ್ಲಿ 32 ರಸ್ತೆಗಳು, ಆರ್.ಆರ್.ನಗರ ವಲಯದಲ್ಲಿ 8 ರಸ್ತೆಗಳು ಹಾಗೂ 28 ಉಪಮುಖ್ಯ ರಸ್ತೆಗಳು ಸೇರಿದಂತೆ 180 ಕಿ.ಮೀ ಉದ್ದದ 122 ರಸ್ತೆಗಳ ಗುಂಡಿಗಳನ್ನು ವಿಶೇಷ ತಾಂತ್ರಿಕತೆ ಅಳವಡಿಸಿರುವ ಪೈಥಾನ್ ಯಂತ್ರದ ಮೂಲಕ ಮುಚ್ಚಲು ಬಿಬಿಎಂಪಿ ಕ್ರಮಕೈಗೊಂಡಿದೆ. ಪೂರ್ವ ವಲಯದ ಕೆಲವು ರಸ್ತೆಗಳಲ್ಲಿನ ಗುಂಡಿಗಳನ್ನು ಪೈಥಾನ್‌ ಯಂತ್ರ ಬಳಸಿ ಮುಚ್ಚುವ ಕಾರ್ಯವನ್ನು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಮಂಗಳವಾರ ಪರಿಶೀಲಿಸಿದರು.

ಮುಖ್ಯ ಆಯುಕ್ತರು ನಗರದ ಮಹಾತ್ಮ ಗಾಂಧಿ ರಸ್ತೆ ಮತ್ತು ಕಬ್ಬನ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಮುಖ್ಯ ಆಯುಕ್ತರು ವೀಕ್ಷಿಸಿದರು. ಪೈಥಾನ್ ಯಂತ್ರ ಬಳಸಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ಣಗೊಂಡ ಬಳಿಕ ಆ ರಸ್ತೆಗಳಲ್ಲಿ ಮತ್ತೆ ರಸ್ತೆ ಗುಂಡಿ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯರಸ್ತೆಗಳು, ಉಪಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ ಎಂದು ಬಿಬಿಎಂಪಿ ತಿಳಿಸಿದೆ. ಪೂರ್ವ ವಿಭಾಗದ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗೀತಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ರಸ್ತೆ ಗುಂಡಿ ಮುಚ್ಚಲು ನಾವು ಹೊಸ ಪೈಥಾನ್ ಯಂತ್ರ ಖರೀದಿಸಿಲ್ಲ. ಬಿಬಿಎಂಪಿ ಈ ಹಿಂದೆ ಖರೀದಿಸಿದ್ದ ಪೈಥಾನ್ ಯಂತ್ರಗಳನ್ನೇ ಬಳಸಿ ಗುಂಡಿ ಮುಚ್ಚುತ್ತಿದ್ದೇವೆ. ವಾಹನ ದಟ್ಟಣೆ ಇಲ್ಲದ ರಸ್ತೆಯಲ್ಲಿ ಈ ಯಂತ್ರ ಬಳಸಿ ದಿನದಲ್ಲಿ ಗರಿಷ್ಠ 30 ಕಿ.ಮೀ ಉದ್ದದಷ್ಟು ದೂರದವರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬಹುದು’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2013ರಲ್ಲಿ ಖರೀದಿ:

ನಗರದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳ ಗುಂಡಿಗಳನ್ನು ಎರಡು ಪೈಥಾನ್‌ ಯಂತ್ರಗಳನ್ನು ಬಳಸಿ ಮುಚ್ಚಲು ಬಿಬಿಎಂಪಿ 2013ರಲ್ಲಿ ಎರಡು ‘ಪೈಥಾನ್‌–5000’ ಯಂತ್ರಗಳನ್ನು ಖರೀದಿಸಿತ್ತು. ಇವುಗಳನ್ನು ಬಳಸಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಸಂಬಂಧಿಸಿ ಎರಡು ವರ್ಷಗಳ ಗುತ್ತಿಗೆಯನ್ನು ಬಿಬಿಎಂಪಿಯು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಆ್ಯಂಡ್‌ ಸಲ್ಯೂಷನ್‌ ಸಂಸ್ಥೆಗೆ ವಹಿಸಲಾಗಿತ್ತು. ಗುತ್ತಿಗೆ ಅವಧಿಯನ್ನು ಮತ್ತೆ ಒಂದು ವರ್ಷ ಮುಂದುವರಿಸಲಾಗಿತ್ತು. ಆ ಬಳಿಕ ಆ ಯಂತ್ರಗಳು ಬಳಕೆಯಾಗದೆ ಉಳಿದಿವೆ. ಈ ಕಂಪನಿಗೆ ಗುತ್ತಿಗೆ ಮೊತ್ತಕ್ಕಿಂತ ₹ 5.36 ಕೋಟಿಯನ್ನು ಹೆಚ್ಚುವರಿ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

‘ನಗರದ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು 2015ರಲ್ಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು ಈ ಪಿಐಎಲ್‌ನ ವಿಚಾರಣೆಯ ಸಂದರ್ಭದಲ್ಲಿ ಇತ್ತೀಚೆಗೆ, ‘ಪಾಲಿಕೆಯ 182.38 ಕಿ.ಮೀ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡಲಾಗಿದೆ. ಇದೇ 14ರಂದು ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಪೈಥಾನ್ ಯಂತ್ರ ಬಳಸಲು ಟೆಂಡರ್ ಕರೆದಿದ್ದೇವೆ. 20 ವರ್ಷ ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಲಾಗುತ್ತದೆ’ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT