ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್‌ಗಳ ಮೇಲೆ ದಾಳಿ: 87 ಯುವತಿಯರ ರಕ್ಷಣೆ

ಕಾನೂನು ಉಲ್ಲಂಘಿಸಿದ ಪಬ್ ಮಾಲೀಕರ ವಿರುದ್ಧ ಎಫ್‌ಐಆರ್‌
Published 18 ಜೂನ್ 2023, 15:00 IST
Last Updated 18 ಜೂನ್ 2023, 15:00 IST
ಅಕ್ಷರ ಗಾತ್ರ

ಬೆಂಗಳೂರು: ಅಶೋಕ ನಗರ, ಹಲಸೂರು ಹಾಗೂ ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಪಬ್‌ ನಡೆಸುತ್ತಿದ್ದ ಸ್ಥಳಗಳ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 87 ಯುವತಿಯರನ್ನು ರಕ್ಷಿಸಿದ್ದಾರೆ.

‘ರಿಚ್ಮಂಡ್‌ ರಸ್ತೆಯ ನಂ.93ರ ದಿ ಪ್ರೈಡ್‌ ಹೋಟೆಲ್‌ನ 1ನೇ ಮಹಡಿಯಲ್ಲಿ ಫ್ಯೂಯಲ್‌ ರೆಸ್ಟೋ ಬಾರ್‌ನಲ್ಲಿ ಹೊರರಾಜ್ಯದಿಂದ ಹುಡುಗಿಯರನ್ನು ಕರೆಸಿ ಬಾರ್‌ಗೆ ಬರುವ ಗ್ರಾಹಕರಿಗೆ ಲೈಂಗಿಕವಾಗಿ ಪ್ರಚೋದನೆ ಬರುವಂತೆ ಉಡುಪು ತೊಡಿಸಲಾಗಿತ್ತು. ದಾಳಿ ನಡೆಸಿದ ವೇಳೆ ಅಸಭ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಆ ಬಾರ್‌ನಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, 19 ಯುವತಿಯರನ್ನು ರಕ್ಷಿಸಲಾಗಿದೆ. ದಾಳಿ ವೇಳೆ 54 ಗ್ರಾಹಕರಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು. ಆರೋಪಿಗಳ ವಿರುದ್ಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಮ್ಮಲೂರು ಅಮರಜ್ಯೋತಿ ಎಚ್‌ಬಿಸಿಎಸ್‌ ಲೇಔಟ್‌ನ ಕ್ಲಬ್‌–7 ಪಬ್‌ನಲ್ಲಿ ಕಾನೂನು ಉಲ್ಲಂಘಿಸಿರುವುದು ಕಂಡುಬಂದಿದೆ. ಪಬ್‌ನ ಮಾಲೀಕರು ಹಾಗೂ ವ್ಯವಸ್ಥಾಪಕರು ಹುಡುಗ ಹಾಗೂ ಹುಡುಗಿಯರನ್ನು ಕರೆಸಿಕೊಂಡು ರಾತ್ರಿ ವೇಳೆ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅಬ್ಬರದ ಸಂಗೀತಕ್ಕೆ ಗ್ರಾಹಕರು, ಹುಡುಗಿಯರು ನೃತ್ಯ ಮಾಡುತ್ತಿದ್ದರು. ಅವಧಿ ಮೀರಿ ಪಬ್‌ ನಡೆಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. 55 ಯುವತಿಯರನ್ನು ರಕ್ಷಿಸಿ, 118 ಯುವಕರನ್ನು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಹಾಜರು ಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

ಹೆಣ್ಣೂರು ಮುಖ್ಯರಸ್ತೆಯ ಕೊತ್ತನೂರು ಪಟೇಲ್‌ ರಾಮಯ್ಯ ಗಾರ್ಡನ್‌ನ ಶಿಗನ್‌ ಬಾರ್ ಅಂಡ್‌ ಕಿಚನ್‌ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ದಾಳಿ ವೇಳೆ ಪಬ್‌ನಲ್ಲಿ ಸೂಡನ್‌ ದೇಶದ ಆರು ಮಂದಿ, ಕಾಂಗೋದ ಒಬ್ಬ ಹಾಗೂ ಯಮನ್‌ ರಾಷ್ಟ್ರದ ಒಬ್ಬ ಹುಡುಗ ಪತ್ತೆಯಾಗಿದ್ದಾರೆ. ಪಬ್‌ನಲ್ಲಿದ್ದ ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT