ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ರೈಲು ಪ್ರಯಾಣಿಕರ ಪ್ರಜ್ಞೆ ತಪ್ಪಿಸಿ ಕಳ್ಳತನ; ಮೂವರ ಬಂಧನ

ಬಾದಾಮಿ ಹಾಲಿನಲ್ಲಿ ಮತ್ತು ಬರುವ ಔಷಧಿ
Published 26 ಮಾರ್ಚ್ 2024, 14:29 IST
Last Updated 26 ಮಾರ್ಚ್ 2024, 14:29 IST
ಅಕ್ಷರ ಗಾತ್ರ

ಬೆಂಗಳೂರು: ಮತ್ತು ಬರುವ ಔಷಧಿ ಬೆರೆಸಿರುತ್ತಿದ್ದ ಬಾದಾಮಿ ಹಾಲು ಕುಡಿಸಿ ರೈಲು ಪ್ರಯಾಣಿಕರ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

‘ಕೊಲ್ಕತ್ತಾದ ಮೊಹಮ್ಮದ್ ಶೌಕತ್ ಅಲಿ (55), ಮೊಹಮ್ಮದ್ ಸತ್ತಾರ್ ಅಲಿಯಾಸ್ ಅಜಾದ್ (51) ಹಾಗೂ ಉತ್ತರ ಪ್ರದೇಶದ ಮೊಹಮ್ಮದ್ ಅವದ್ (58) ಬಂಧಿತರು. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಮೂವರನ್ನು ಸೆರೆ ಹಿಡಿಯಲಾಗಿದೆ. ಇವರಿಂದ 120 ಗ್ರಾಂ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ’ ಎಂದು ರೈಲ್ವೆ ಎಸ್ಪಿ ಸೌಮ್ಯಲತಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜಸ್ಥಾನದ ವೃದ್ಧ ದಂಪತಿ, ಜೋಧಪುರದಿಂದ ಬೆಂಗಳೂರಿಗೆ ರೈಲಿನಲ್ಲಿ 2023ರ ಡಿಸೆಂಬರ್ 16ರಂದು ಬರುತ್ತಿದ್ದರು. ಇದೇ ರೈಲು ಹತ್ತಿದ್ದ ಆರೋಪಿಗಳು, ದಂಪತಿಯನ್ನು ಪರಿಚಯ ಮಾಡಿಕೊಂಡಿದ್ದರು. ಆತ್ಮಿಯವಾಗಿ ಮಾತನಾಡಿದ್ದರು. ಪ್ರಯಾಣದ ವೇಳೆಯಲ್ಲಿ, ಮತ್ತು ಬರುವ ಔಷಧಿ ಬೆರೆಸಿದ್ದ ಬಾದಾಮಿ ಹಾಲನ್ನು ದಂಪತಿಗೆ ಕುಡಿಸಿದ್ದರು.’

‘ಹಾಲು ಕುಡಿದಿದ್ದ ದಂಪತಿ ಪ್ರಜ್ಞೆ ತಪ್ಪಿದ್ದರು. ನಂತರ, ದಂಪತಿ ಬಳಿಯ ₹ 20 ಸಾವಿರ ನಗದು ಹಾಗೂ 120 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ದಂಪತಿ ದೂರು ನೀಡಿದ್ದರು’ ಎಂದು ಹೇಳಿದರು.

ತತ್ಕಾಲ್ ಟಿಕೆಟ್, ನಕಲಿ ದಾಖಲೆ ಬಳಕೆ: ‘ಬಂಧಿತ ಮೊಹಮ್ಮದ್ ಶೌಕತ್ ಅಲಿ ವಿರುದ್ಧ ಕೊಲ್ಕತ್ತಾ ಹಾಗೂ ಕೇರಳ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈತ ಜೈಲಿಗೂ ಹೋಗಿ ಬಂದಿದ್ದ. ಸಂಬಂಧಿಕರೇ ಆಗಿದ್ದ ಆಟೊ ಚಾಲಕ ಮೊಹಮ್ಮದ್ ಸತ್ತಾರ್ ಹಾಗೂ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅವದ್ ಜೊತೆ ಸೇರಿ ರೈಲಿನಲ್ಲಿ ಕಳ್ಳತನ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಉತ್ತರ ಭಾರತದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಸಲು ಆರೋಪಿಗಳು ತತ್ಕಾಲ್ ಮೂಲಕ ಟಿಕೆಟ್ ಕಾಯ್ದಿರಿಸುತ್ತಿದ್ದರು. ನಕಲಿ ದಾಖಲೆ ಬಳಸಿ ಖರೀದಿಸಿದ್ದ ಮೊಬೈಲ್ ಸಂಖ್ಯೆ ಹಾಗೂ ನಕಲಿ ಆಧಾರ್ ನೀಡುತ್ತಿದ್ದರು’ ಎಂದರು.

ರೈಲಿನಲ್ಲಿ ಪರಿಚಯ: ‘ರೈಲು ಬೋಗಿಯಲ್ಲಿ ಸಹ ಪ್ರಯಾಣಿಕರನ್ನು ಆರೋಪಿಗಳು ಪರಿಚಯ ಮಾಡಿಕೊಳ್ಳುತ್ತಿದ್ದರು. ಯಾರ ಬಳಿ ಹಣವಿದೆ ? ಚಿನ್ನಾಭರಣವಿದೆ ? ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ನಂತರ, ಅವರ ಜೊತೆ ಆತ್ಮಿಯವಾಗಿ ಮಾತನಾಡಿ ವಿಶ್ವಾಸ ಗಳಿಸುತ್ತಿದ್ದರು. ತಿಂಡಿ–ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮತ್ತು ಬರುವ ಔಷಧಿ ಬೆರೆಸಿಟ್ಟುಕೊಂಡಿದ್ದ ಬಾದಾಮಿ ಹಾಲನ್ನು ಪ್ರಯಾಣಿಕರಿಗೆ ನೀಡುತ್ತಿದ್ದರು. ಅದನ್ನು ಕುಡಿದ ನಂತರ ಪ್ರಯಾಣಿಕರು ಪ್ರಜ್ಞೆ ತಪ್ಪಿ ಬೀಳುತ್ತಿದ್ದರು. ಆರೋಪಿಗಳು, ಕಳ್ಳತನ ಮಾಡಿ ನಿಲ್ದಾಣದಲ್ಲಿ ಇಳಿದು ಪರಾರಿಯಾಗುತ್ತಿದ್ದರು’ ಎಂದು ತಿಳಿಸಿದರು.

‘ಇದೊಂದು ಅಂತರ ರಾಜ್ಯಗಳ ತಂಡ. ಬೆಂಗಳೂರಿನಲ್ಲಿ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ. ಹಲವು ರಾಜ್ಯಗಳಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಹೇಳಿದರು.

ಆರೋಪಿಗಳು ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸುತ್ತಿದ್ದರು. ನಕಲಿ ವಿಳಾಸದ ಗುರುತಿನ ಚೀಟಿ ನೀಡುತ್ತಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದ್ದ ಪೊಲೀಸರ ವಿಶೇಷ ತಂಡ ಮೊಬೈಲ್ ಜಾಡು ಹಿಡಿದು ರೈಲಿನಲ್ಲಿಯೇ ಆರೋಪಿಗಳನ್ನು ಬಂಧಿಸಿದೆ.
ಸೌಮ್ಯಲತಾ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT