ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ರಾಮನವಮಿ ಎಲ್ಲೆಡೆ ರಾಮನ ಜಪ

ದೇಗುಲಗಳ ಬಳಿ ಭಕ್ತರ ದಂಡು: ಪಾನಕ, ಕೋಸಂಬರಿ ವಿತರಣೆ
Last Updated 30 ಮಾರ್ಚ್ 2023, 21:03 IST
ಅಕ್ಷರ ಗಾತ್ರ

ಬೆಂಗಳೂರು: ಭಕ್ತಿ, ಸಡಗರ-ಸಂಭ್ರಮದೊಂದಿಗ ನಗರದಲ್ಲಿ ಶ್ರೀರಾಮನವಮಿಯನ್ನು ಗುರುವಾರ ಆಚರಿಸಲಾಯಿತು. ದೇವಾಲಯಗಳಲ್ಲಿ ಶ್ರೀರಾಮ ಸ್ಮರಣೆಯೊಂದಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆದವು.

ಆಂಜನೇಯ ಹಾಗೂ ಶ್ರೀರಾಮ ದೇವಾಲಯಗಳನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು.

ಭಕ್ತಾದಿಗಳಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ರಾಮನ ವೇಷಧಾರಿಗಳು ಸಹ ಪಾನಕ ವಿತರಿಸಿ ಗಮನಸೆಳೆದರು. ಹಲವು ಸಂಘಟನೆಗಳು ನಗರದ ವಿವಿಧೆಡೆ ಆಯೋಜಿಸಿದ್ದ ಶ್ರೀರಾಮನ ಶೋಭಾಯಾತ್ರೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಶ್ರೀರಾಮನ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ಕಡೆಗಳಲ್ಲಿ ರಾಮಭಕ್ತರು ರಾಮನಾಮ ಸಂಕೀರ್ತನೆ, ಭಜನೆ ಮಾಡಿದರು. ಮಲ್ಲೇಶ್ವರದ ಕೋದಂಡರಾಮಪುರದ ಕೋದಂಡರಾಮ ಭಜನಾ ಮಂದಿರ, ಯಶವಂತಪುರ ವೃತ್ತದಲ್ಲಿರುವ ದಾರಿ ಆಂಜನೇಯಸ್ವಾಮಿ ದೇವಸ್ಥಾನ, ರಂಗನಾಥಪುರದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಶ್ವತ್ಥನಗರದಲ್ಲಿರುವ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆಯ ಆಂಜನೇಯ ದೇವಸ್ಥಾನ, ರಾಗಿಗುಡ್ಡದ ಆಂಜನೇಯ ದೇವಾಲಯ, ರಾಜಾಜಿನಗರದ ಶ್ರೀರಾಮಮಂದಿರ ಸೇರಿದಂತೆ ನಗರದ ವಿವಿಧ ಆಂಜನೇಯ ಹಾಗೂ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಜರುಗಿದವು.

ವಿವಿಧ ದೇವಾಲಯಗಳಲ್ಲಿ ಸಂಗೀತೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು. ನರಸಿಂಹರಾಜ ಕಾಲೊನಿಯ ಶ್ರೀರಾಮಮಂದಿರಂ ಟ್ರಸ್ಟ್‌ನಿಂದ ಸುಂದರಕಾಂಡ ನೃತ್ಯರೂಪಕವನ್ನು ಪ್ರಸ್ತುತ ಪಡಿಸಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಗುಟ್ಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಮಾಡಲಾಯಿತು. ಹೆಸರುಬೇಳೆ, ಮಜ್ಜಿಗೆ ಪಾನಕವನ್ನು ವಿಶ್ವವಿದ್ಯಾಲಯದ ಶಿಕ್ಷಕರು, ಶಿಕ್ಷಕೇತರ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT