ಬೆಂಗಳೂರು: ಆಡುಗೋಡಿ ಠಾಣೆ ವ್ಯಾಪ್ತಿಯ ಮಾಲ್‌ವೊಂದರಲ್ಲಿ ರಂಪಾಟ ಮಾಡಿ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ರೊಬ್ಬರ ಕೈಗೆ ಕಚ್ಚಿದ್ದ ಆರೋಪದಡಿ ಯುವತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ದಾವಣಗೆರೆಯ 28 ವರ್ಷದ ಯುವತಿ, ನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ವಾಸವಿದ್ದರು. ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಯುವತಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ. ಅವರಿಂದಲೂ ಹೇಳಿಕೆ ಪಡೆಯಲಾಗುವುದು’ ಎಂದು ತಿಳಿಸಿವೆ.
ಘಟನೆ ವಿವರ
‘ಯುವತಿಯು ಶುಕ್ರವಾರ ರಾತ್ರಿ ಸಿನಿಮಾ ನೋಡಲು ಮಾಲ್‌ಗೆ ಬಂದಿದ್ದರು. ಸಿನಿಮಾ ಮುಗಿದ ಬಳಿಕವೂ ಯುವತಿ ಸ್ಥಳದಿಂದ ಹೋಗಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಸಿಬ್ಬಂದಿ, ‘ಮಾಲ್ ಅವಧಿ ಮುಗಿದಿದೆ. ಹೊರಟು ಹೋಗಿ’ ಎಂದಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಯುವತಿ, ಸಿಬ್ಬಂದಿಗೆ ಬೈದಿದ್ದರು. ಹಲ್ಲೆಗೂ ಯತ್ನಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘112ಕ್ಕೆ ಮಾಹಿತಿ ಬರುತ್ತಿದ್ದಂತೆ ಮಹಿಳಾ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಅವರ ಜೊತೆಯಲ್ಲಿಯೂ ಯುವತಿ ಗಲಾಟೆ ಮಾಡಿದ್ದರು. ವಶಕ್ಕೆ ಪಡೆದು ಜೀಪಿನಲ್ಲಿ ಕೂರಿಸುವಾಗ ಮಹಿಳಾ ಪಿಎಸ್‌ಐ ಕೈಗೆ ಯುವತಿ ಕಚ್ಚಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಠಾಣೆಗೆ ಕರೆತಂದಾಗಲೂ ಯುವತಿ ರಂಪಾಟ ಮುಂದುವರಿಸಿದ್ದರು. ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿದ್ದರು’ ಎಂದು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.