ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕ್ಟರ್‌ ಥಾಮಸ್‌ ಕೊಲೆ ಪ್ರಕರಣ: ಎಸ್‌ಪಿಪಿ ಸದಾಶಿವಮೂರ್ತಿ ಮುಂದುವರಿಕೆಗೆ ತಡೆ

Published 19 ಫೆಬ್ರುವರಿ 2024, 15:49 IST
Last Updated 19 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ ಕೊಲೆ ಪ್ರಕರಣದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಆಗಿ ಸದಾಶಿವಮೂರ್ತಿ ಅವರನ್ನು ಮುಂದುವರಿಸುವುದಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಸದಾಶಿವ ಮೂರ್ತಿ ಮುಂದುವರಿಕೆ ಪ್ರಶ್ನಿಸಿ ಕೊತ್ತನೂರು ಪೋಸ್ಟ್‌ ಗೆದ್ದಲಹಳ್ಳಿಯಲ್ಲಿರುವ ಫಾದರ್ ಇಲಿಯಾಸ್‌ ಡೇನಿಯಲ್‌, ಕೆಂಗೇರಿ ಉಪನಗರದಲ್ಲಿರುವ ಅಸ್ಸೀಸಿಯಾ ಸೇಂಟ್‌ ಫ್ರಾನ್ಸಿಸ್‌ ಚರ್ಚ್‌ನ ಫಾದರ್ ವಿಲಿಯಂ ಪ್ಯಾಟ್ರಿಕ್‌ ಮತ್ತು ಕನಕಪುರ ತಾಲ್ಲೂಕು ತಾತಗುಪ್ಪೆ ಮರಿಯಪ್ಪ ಗ್ರಾಮದ ಕಾರ್ಮೆಲ್ ಪೀಟರ್‌ ಅಲಿಯಾಸ್ ಪೀಟರ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಶ್ಯಾಮಸುಂದರ್‌, ‘ನಿವೃತ್ತ ಪ್ರಾಸಿಕ್ಯೂಷನ್‌ ನಿರ್ದೇಶಕ ಹಾಗೂ ವಕೀಲರೂ ಆದ ಸದಾಶಿವಮೂರ್ತಿ ಅವರನ್ನು ರಾಜ್ಯ ಸರ್ಕಾರ ಹಿಂದೊಮ್ಮೆ ಈ ಪ್ರಕರಣದಲ್ಲಿ ಎಸ್‌ಪಿಪಿ ಆಗಿ ನೇಮಕ ಮಾಡಿತ್ತು. ಆದರೆ, ಇವರ ನೇಮಕದಿಂದ ಪ್ರಕರಣದಲ್ಲಿನ ನ್ಯಾಯಿಕ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿ ಕಂಡುಬರಲಿಲ್ಲ ಎಂಬ ಕಾರಣಕ್ಕಾಗಿ ನೇಮಕಾತಿ ಆದೇಶವನ್ನು ಹಿಂಪಡೆಯಲಾಗಿತ್ತು. ಈಗ ಪುನಃ ನೇಮಕ ಮಾಡಿರುವುದು ತರವಲ್ಲ’ ಎಂದು ಬಲವಾಗಿ ಆಕ್ಷೇಪಿಸಿದರು.

‘ದೂರುದಾರರು ನೀಡಿದ್ದ ಮನವಿ ಆಧರಿಸಿ ಈಗ ಇವರನ್ನೇ ಪುನಃ ನೇಮಕ ಮಾಡಲಾಗಿದೆ. ಅಂತೆಯೇ, ಸದಾಶಿವಮೂರ್ತಿ ಅವರಿಗೆ ಎಸ್‌ಪಿಪಿ ಆಗಿ ನಿರ್ವಹಿಸುವ ಕೆಲಸಕ್ಕೆ ನೀಡಬೇಕಾದ ಶುಲ್ಕ ರೂಪದ ಪುರಸ್ಕಾರ ಧನವನ್ನು ತಾನೇ ಭರಿಸುವುದಾಗಿ ದೂರುದಾರರು ತಿಳಿಸಿದ್ದಾರೆ. ಇದು ಕಾನೂನಿಗೆ ವಿರೋಧ. ಆದ್ದರಿಂದ, ಇವರ ಎಸ್‌ಪಿಪಿ ನೇಮಕಾತಿ ಆದೇಶವನ್ನು ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮನ್ನಿಸಿದ ನ್ಯಾಯಪೀಠ ಸದಾಶಿವಮೂರ್ತಿ ಅವರನ್ನು ಪ್ರಕರಣದಲ್ಲಿ ಎಸ್‌ಪಿಪಿ ಆಗಿ ಮುಂದುವರಿವರಿಸುವುದಕ್ಕೆ ತಡೆ ನೀಡಿತು. ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಮಲ್ಲೇಶ್ವರ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ 2013ರ ಮಾರ್ಚ್‌ 31ರಂದು ರಾತ್ರಿ 11 ರಿಂದ 2 ಗಂಟೆ ಮಧ್ಯದ ಅವಧಿಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಸದ್ಯ ಸಿಸಿಎಚ್‌–1ರಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ. 2023ರ ಸೆಪ್ಟೆಂಬರ್ 15ರಂದು ಸದಾಶಿವಮೂರ್ತಿ ಅವರನ್ನು ಪ್ರಕರಣದ ಎಸ್‌ಪಿಪಿ ಆಗಿ ಪುನಃ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT