ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭಾವಚಿತ್ರಕ್ಕೆ ನಕಾರ: ಬಿಎಂಆರ್‌ಸಿಎಲ್‌ ನೌಕರರ ಪ್ರತಿಭಟನೆ

Published 29 ಜನವರಿ 2024, 16:08 IST
Last Updated 29 ಜನವರಿ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ಇಡಲು ಒಪ್ಪಿಗೆ ನೀಡದ ಅಧಿಕಾರಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೋಮವಾರ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ನೌಕರರು ಬೈಯಪ್ಪನಹಳ್ಳಿ ಮೆಟ್ರೊ ಡಿಪೊದಲ್ಲಿ ಪ್ರತಿಭಟನೆ ನಡೆಸಿದರು.

‘ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇಡಲು ಬಿಎಂಆರ್‌ಸಿಎಲ್‌ ಎಸ್‌ಸಿ–ಎಸ್‌ಟಿ ಎಂಪ್ಲಾಯಿಸ್‌ ವೆಲ್ಫೇರ್‌ ಅಸೋಸಿಯೇಶನ್‌ ತಯಾರಿ ನಡೆಸಿತ್ತು. ಆದರೆ, ಗಾಂಧೀಜಿ ಫೋಟೊ ಸಾಕೆಂದು ಅಧಿಕಾರಿ ಶಂಕರ್‌ ತಿಳಿಸಿದ್ದರು. ಕಾರ್ಯಕ್ರಮ ಸರಾಗವಾಗಿ ನಡೆಯಲಿ ಎಂಬ ಕಾರಣಕ್ಕೆ ಅವತ್ತು ಯಾವುದೇ ಪ್ರತಿಭಟನೆ ಮಾಡಿಲ್ಲ. ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಮೂರು ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸಂವಿಧಾನವನ್ನು ರಚಿಸಿದವರ ಭಾವಚಿತ್ರವೇ ಸಂವಿಧಾನ ಜಾರಿಗೆ ಬಂದ ದಿನ ಬೇಡ ಎಂದಿರುವುದು ಅಂಬೇಡ್ಕರ್‌ ವಿರೋಧಿ ಮಾತ್ರವಲ್ಲ, ಸಂವಿಧಾನದ ವಿರೋಧಿಯೂ ಆಗಿದೆ. ಸರ್ಕಾರವೇ ಅಂಬೇಡ್ಕರ್‌ ಫೋಟೊ ಇಡಬೇಕು ಎಂಬ ಸುತ್ತೋಲೆ ಹೊರಡಿಸಿದ್ದರೂ ಬಿಎಂಆರ್‌ಸಿಎಲ್‌ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಎಂಆರ್‌ಸಿಎಲ್‌ ಎಸ್‌ಸಿ–ಎಸ್‌ಟಿ ಎಂಪ್ಲಾಯಿಸ್‌ ವೆಲ್ಫೇರ್‌ ಅಸೋಸಿಯೇಶನ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂತೋಷ್‌, ಶ್ರೀನಿವಾಸಮೂರ್ತಿ, ಗೋಪಾಲ್‌ ಸಹಿತ 50ಕ್ಕೂ ಅಧಿಕ ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT