ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಿಗೆ ರಸ್ತೆ ವೈಟ್ ಟಾಪಿಂಗ್– ಕಾಮಗಾರಿ ಚುರುಕುಗೊಳಿಸಿ: ತುಷಾರ್‌ ಗಿರಿನಾಥ್‌

ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿದ ಮುಖ್ಯ ಆಯುಕ್ತ
Last Updated 8 ಮೇ 2022, 12:57 IST
ಅಕ್ಷರ ಗಾತ್ರ

ಬೆಂಗಳೂರು: ಸಂಪಿಗೆ ರಸ್ತೆಯಲ್ಲಿ ಮಂತ್ರಿಮಾಲ್ ಬಳಿಯಿಂದ ಯಶವಂತಪುರ ಜಂಕ್ಷನ್‌ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಭಾನುವಾರ ಪರಿಶೀಲಿಸಿದರು.

ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಪಾದಚಾರಿ ಮಾರ್ಗ, ಜಲಮಂಡಳಿಯ ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆ ಅಳವಡಿಕೆ, ಬೆಸ್ಕಾಂನ ವಿದ್ಯುತ್ ಕೇಬಲ್‌ಗಳು ಹಾಗೂ ಒ.ಎಫ್.ಸಿಗಳಿಗಾಗಿ ಪ್ರತ್ಯೇಕ ಡಕ್ಟ್ ಅಳವಡಿಕೆ ಕೆಲಸಗಳು ಬಾಕಿ ಇವೆ.

‘ಈ ಸಣ್ಣ-ಪುಟ್ಟ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಸಂಪಿಗೆ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಬೇಕು’ ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಪರಿಶೀಲನೆ

ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ನಿಂದ ಯಲಹಂಕ‌ ನ್ಯೂ ಟೌನ್‌ನ ಜಲಮಂಡಳಿಯ ಜಂಕ್ಷನ್‌ವರೆಗೆ ₹ 175 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 1.8 ಕಿ.ಮೀ ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯನ್ನೂ ಮುಖ್ಯ ಆಯುಕ್ತರು ಪರಿಶೀಲಿಸಿದರು. ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಪೊಲೀಸ್ ಠಾಣೆ ವೃತ್ತ, ಎನ್ಇಎಸ್ ಜಂಕ್ಷನ್, ಶೇಷಾದ್ರಿಪುರ ಜಂಕ್ಷನ್ ಹಾಗೂ ಜಲಮಂಡಳಿ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗಳು ಈ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್‌ನಿಂದಾಗಿ ನಿವಾರಣೆಯಾಗಲಿವೆ. ಕಾರಿಡಾರ್‌ ಕಾಮಗಾರಿಯನ್ನುಹಂತ-ಹಂತವಾಗಿ ಅನುಷ್ಠಾನಗೊಳಿಸಬೇಕು. ಕಾಮಗಾರಿಯ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಂ.ಎಸ್.ಪಾಳ್ಯ ಜಂಕ್ಷನ್‌ನಲ್ಲಿ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಅನುಷ್ಠಾನಗೊಳ್ಳುತ್ತಿರುವ ಗ್ರೇಡ್ ಸಪರೇಟರ್ ಕಾಮಗಾರಿಯನ್ನೂ ವೀಕ್ಷಿಸಿದರು.

ಜಯಮಹಲ್ ರಸ್ತೆ ಪರಿಶೀಲನೆ

ಜಯಮಹಲ್ ರಸ್ತೆ ವಿಸ್ತರಣೆಯ ಸಿದ್ಧತೆಗಳನ್ನು ಮುಖ್ಯ ಆಯುಕ್ತರು ಪರಿವೀಕ್ಷಣೆ ನಡೆಸಿದರು. ಮೇಖ್ರಿ ವೃತ್ತ–ಜಯಮಹಲ್ ರಸ್ತೆಯಲ್ಲಿರುವ ಒಳಚರಂಡಿಯ ಕೊಳವೆಗಳು ಹಾಗೂ ನೀರು ಪೂರೈಕೆ ಕೊಳವೆಗಳನ್ನು ಸ್ಥಳಾಂತರಿಸಿ ವಾಹನಗಳ ಸುಗಮ‌ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಮಹಲ್ ರಸ್ತೆ ವಿಸ್ತರಣೆಗೆ ಅರಮನೆಯ ಜಾಗ ಹಸ್ತಾಂತರಗೊಳ್ಳಬೇಕಿದೆ. ಬಿಬಿಎಂಪಿ ಸ್ವಾಧೀನದಲ್ಲಿ ಜಾಗ ಇರುವ ಕಡೆ ರಸ್ತೆ ದುರಸ್ತಿ ಕಾಮಗಾರಿಯನ್ನು ಸದ್ಯ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT