ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿತ ವಿದ್ಯೆ ಜ್ಞಾನಕ್ಕೆ ಅನುವು ಮಾಡಿಕೊಡಬೇಕು: ವಿದ್ಯಾಭೂಷಣ

ಸಂಗೀತ ವಿದ್ವಾಂಸ ವಿದ್ಯಾಭೂಷಣ ಅಭಿಮತ * ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಗೆ ಅಭಿನಂದನೆ
Published 17 ಫೆಬ್ರುವರಿ 2024, 23:30 IST
Last Updated 17 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಧ್ಯಾಯ ಪ್ರವಚನಗಳು ಜ್ಞಾನಾರ್ಜನೆ ವಿಷಯದಲ್ಲಿ ಬಹಳ ಮುಖ್ಯ. ಆದ್ದರಿಂದ ಶಾಸ್ತ್ರಾಭ್ಯಾಸ ಮಾಡಿದವರು ಕಲಿತ ವಿದ್ಯೆಯನ್ನು ತಪಸ್ಸಿಗೆ ಸೀಮಿತಗೊಳಿಸದೆ, ಎಲ್ಲೆಡೆ ಹರಡಬೇಕು’ ಎಂದು ಸಂಗೀತ ವಿದ್ವಾಂಸ ವಿದ್ಯಾಭೂಷಣ ತಿಳಿಸಿದರು. 

ರಂಗಚಂದಿರ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಅಭಿನಂದಿಸಿ, ಮಾತನಾಡಿದರು.

‘ಕಲಿತ ವಿದ್ಯೆಯನ್ನು ಅನುಷ್ಠಾನ ಮತ್ತು ತಪಸ್ಸಿಗೆ ಮಾತ್ರ ಕೆಲವರು ವಿನಿಯೋಗಿಸುತ್ತಾರೆ. ಶಾಸ್ತ್ರಾಧ್ಯಯನದ ಬಳಿಕ ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳುವುದು ಕಲಿಕೆಯಲ್ಲ. ಬದಲಾಗಿ, ಸ್ವಾಧ್ಯಾಯ ಮತ್ತು ಪ್ರವಚನ ಮಾಡುವುದು ಕಲಿಕೆಯೆಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಅದನ್ನು ಲಕ್ಷ್ಮೀಶ ತೋಳ್ಪಾಡಿ ಮಾಡುತ್ತಿದ್ದಾರೆ’ ಎಂದರು. 

‘ಇತ್ತೀಚೆಗೆ ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಶಸ್ತಿಗಾಗಿ ಯಾವುದೇ ಇಲಾಖೆಯನ್ನು ಸುತ್ತಿದವರಲ್ಲ’ ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ‘ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ನಮ್ಮ ಹೆಮ್ಮೆಯಾಗಿವೆ. ಈ ಕಾವ್ಯಗಳು ವಿವಿಧ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಬರುತ್ತಿವೆ. ಲಾಬಿ ಇಲ್ಲದೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತದೆ’ ಎಂದು ತಿಳಿಸಿದರು. 

‘ಮಹಾಭಾರತದಲ್ಲಿ ಮಾತು ಮತ್ತು ಮೌನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಲಕ್ಷ್ಮೀಶ ತೋಳ್ಪಾಡಿ, ‘ಕೇಂದ್ರ ಸಾಹಿತ್ಯ ಅಕಾಡೆಮಿಯು ‘ಮಹಾಭಾರತದ ಅನುಸಂಧಾನದ ಭಾರತಯಾತ್ರೆ’ ಕೃತಿಗೆ ನೀಡಿದ ಪ್ರಶಸ್ತಿಯು ವ್ಯಾಸ, ಪಂಪ ಮತ್ತು ಕುಮಾರವ್ಯಾಸನಿಗೆ ಸಲ್ಲಬೇಕು’ ಎಂದು ಹೇಳಿದರು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಉಡುಪಿಯ ಥಿಯೇಟರ್ ಯಕ್ಷದಿಂದ ‘ಚಕ್ರವ್ಯೂಹ’ ಯಕ್ಷಗಾನ ಪ್ರದರ್ಶನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT