ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೃತ್ಯ, ಹಾಡಿನ ಮೂಲಕ ದೇಶಭಕ್ತಿ ಸಾರಿದ ಚಿಣ್ಣರು

Published 20 ಜನವರಿ 2024, 19:10 IST
Last Updated 20 ಜನವರಿ 2024, 19:10 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಯಲಹಂಕ: ಮಕ್ಕಳಲ್ಲಿ ದೇಶಭಕ್ತಿ ಹಾಗೂ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವ ಸಲುವಾಗಿ ‘ನನ್ನ ಸಮಾಜ–ನನ್ನ ಜವಾಬ್ದಾರಿ’ ಎಂಬ ಘೋಷವಾಕ್ಯದಡಿಯಲ್ಲಿ ವಿಶ್ವವಿದ್ಯಾಪೀಠ ಶಾಲೆಯ ಮಕ್ಕಳು ಸೈನಿಕರ ಯಶೋಗಾಥೆಗಳನ್ನು ಕಥಾರೂಪಕದಲ್ಲಿ ಪ್ರಸ್ತುತಪಡಿಸಿದರು.

ಸಂದೀಪ್‌ ಉನ್ನಿಕೃಷ್ಣನ್‌ ವೃತ್ತದ ಬಳಿಯಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಉದ್ಯಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು, ಹಾಡು, ಕಥಾರೂಪಕ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.

ಮುಂಬೈ ದಾಳಿ, ಪುಲ್ವಾಮ ದಾಳಿ ಸೇರಿ ಸೈನಿಕರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಕಥಾರೂಪಕ ಹಾಗೂ ಎಲ್ಲೆಂದರಲ್ಲಿ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದರ ಬಗ್ಗೆ ಮಕ್ಕಳು ನೃತ್ಯ ರೂಪದಲ್ಲಿ ಪ್ರದರ್ಶಿಸಿದರು.

ದೇಶದ ಧರ್ಮ, ಸಂಸ್ಕೃತಿ, ಆಚಾರ–ವಿಚಾರ ಹಾಗೂ ಕಲೆಗಳನ್ನು ಮಕ್ಕಳು ನೃತ್ಯ ಪ್ರಕಾರದ ಮೂಲಕ ಮನೋಜ್ಞವಾಗಿ ಅಭಿನಯಿಸಿದರು. ಮಕ್ಕಳಲ್ಲಿ ಬದ್ಧತೆ, ಸಮರ್ಪಣಾ ಮನೋಭಾವವನ್ನು ಗಮನಿಸಿದ ಪೋಷಕರು ಹಾಗೂ ಸಭಿಕರ ಕಣ್ಣುಗಳು ಒದ್ದೆಯಾದವು.

ಈ ವೇಳೆ ಮಾತನಾಡಿದ ಶಾಲೆಯ ಶಿಕ್ಷಕಿ ಮಂಜುಳಾ, ಮಕ್ಕಳಲ್ಲಿ ಹಲವು ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅದನ್ನು ಹಾಡು, ನೃತ್ಯ ಹಾಗೂ ಕಥಾರೂಪಕಗಳ ಮೂಲಕ ಅನಾವರಣ ಮಾಡುವ ನಿಟ್ಟಿನಲ್ಲಿ ಶಾಲೆಯು ವೇದಿಕೆ ನೀಡಿರುವುದು ವಿಶೇಷವಾಗಿದೆ‘ ಎಂದು ಶ್ಲಾಘಿಸಿದರು. ಶಾಲೆಯ ನಿರ್ದೇಶಕಿ ಸುಶೀಲ ಸಂತೋಷ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT