ಬೆಂಗಳೂರು: ‘ಒಂದು ಕಾಲದಲ್ಲಿ ಪ್ರಖರವಾಗಿದ್ದ ಕನ್ನಡ ವಿಮರ್ಶಾ ಲೋಕ ಈಗ ನಿದ್ದೆಗೆ ಜಾರಿದೆ. ಇದರಿಂದಾಗಿ ಹೊಸ ಚಿಂತನೆಗಳನ್ನು ನೀಡಿದ್ದ ಕವಿ ಎಚ್.ಎಸ್. ಶಿವಪ್ರಕಾಶ್ ಅಂತಹವರನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಡೆಗಣಿಸಲಾಗಿದೆ’ ಎಂದು ಸಾಹಿತ್ಯ ಕ್ಷೇತ್ರದ ಪ್ರಮುಖರು ಬೇಸರ ವ್ಯಕ್ತಪಡಿಸಿದರು.

ಭಾಗವತರು ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ‘ಸಾಹಿತ್ಯಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಹಾಗೂ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಶಿವಪ್ರಕಾಶ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಕವಿ ಎಲ್. ಹನುಮಂತಯ್ಯ, ‘ಶಿವಪ್ರಕಾಶ್ ಅವರು ಭಕ್ತಿ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು. ವಚನ ಸಾಹಿತ್ಯದ ಅನುವಾದದಲ್ಲಿ ಅವರಷ್ಟು ಉತ್ತಮ ಕೆಲಸ ಮಾಡಿದ ಸಾಹಿತಿ ಬೇರೊಬ್ಬರಿಲ್ಲ. ಬಸವ ಸಾಹಿತ್ಯವನ್ನು ಮುರಿದು ಕಟ್ಟಿ ಹೊಸತನ ತೋರಿದರು. ಆದರೆ, ಅವರ ಸಾಹಿತ್ಯ ಕೃತಿಗಳ ಬಗ್ಗೆ ಅಷ್ಟಾಗಿ ವಿಮರ್ಶೆ ನಡೆದಿಲ್ಲ. ಕನ್ನಡ ವಿಮರ್ಶಾ ಲೋಕವನ್ನು ಎಚ್ಚರಿಸುವ ಕೆಲಸವಾಗಬೇಕಿದೆ. ಅನಂತಮೂರ್ತಿ ಅವರ ‘ಭಾರತೀಪುರ’ ಕಾದಂಬರಿ ಸೇರಿ ವಿವಿಧ ಸಾಹಿತ್ಯ ಕೃತಿಗಳಿಗೆ ಪುಸ್ತಕದಲ್ಲಿನ ಪುಟಗಳಿಗಿಂತಲೂ ಹೆಚ್ಚು ವಿಮರ್ಶೆಗಳು ಬಂದಿದ್ದವು’ ಎಂದು ಹೇಳಿದರು.

ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ‘ಕನ್ನಡ ವಿಮರ್ಶಾ ಕ್ಷೇತ್ರ ಪಕ್ಷಪಾತ ಬಿಟ್ಟು ಮುಕ್ತ ನೆಲೆಯಲ್ಲಿ ವಿಹರಿಸಿಲ್ಲ. ನಮ್ಮಲ್ಲಿ ವಿಮರ್ಶೆ ಭಜನೆ ಹಾಗೂ ಭಂಜನೆಯ ಎರಡು ನೆಲೆಗಳಲ್ಲಿ ಹರಿದಿದೆ. ಈ ಪರಿಸ್ಥಿತಿಯಲ್ಲಿಯೂ ಯಾವುದೇ ಪಕ್ಷ, ವ್ಯಕ್ತಿಗೆ ತಮ್ಮನ್ನು ತೆತ್ತುಕೊಳ್ಳದ ರೀತಿ ಕೆಲ ಸೂಕ್ಷ್ಮಮತಿಗಳು ವಿಮರ್ಶೆ ಮಾಡಿಕೊಂಡು ಬಂದಿದ್ದಾರೆ. ಶಿವಪ್ರಕಾಶ್ ಅವರು ಹೊರತೋರಿಕೆಗೆ ದ್ವಂದ್ವಾತ್ಮಕ ವ್ಯಕ್ತಿತ್ವದ ರೀತಿ ಕಾಣುತ್ತಾರೆ. ಆದರೆ, ಅವರ ಕಾವ್ಯ ಪ್ರಪಂಚ ಹೊಕ್ಕಾಗ ನಿಜವಾಗಿಯೂ ಕನ್ನಡದಲ್ಲಿ ಅನನ್ಯವಾದವರು ಎಂಬುದು ಅರಿವಿಗೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಲೆಯಾಳ ಕವಿ ಅನ್ವರ್ ಅಲಿ ಅವರು ಶಿವಪ್ರಕಾಶ್ ಅವರ ಜತೆಗಿನ ಒಡನಾಟ ಹಾಗೂ ಅವರ ಸಾಹಿತ್ಯವನ್ನು ಸ್ಮರಿಸಿಕೊಂಡು, ‘ಶಿವಪ್ರಕಾಶ್ ಅವರು ಕನ್ನಡ ಮತ್ತು ಭಾರತದ ಇತರ ಭಾಷೆಗಳ ಕವಿಗಳ ನಡುವೆ ಸೇತುವೆಯಾಗಿದ್ದರು’ ಎಂದು ಹೇಳಿದರು.

ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್, ‘ಶಿವಪ್ರಕಾಶ್ ಅವರ ಸಾಹಿತ್ಯ ಲೋಕ ವಿಶಾಲವಾಗಿದೆ. ಅವರು ಕಾವ್ಯದ ಮೂಲಕ ಹೆಚ್ಚು ಪರಿಚಿತರಾದರು. ವಚನ ಸಾಹಿತ್ಯವನ್ನು ನನಗೆ ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದರು.

ಭಾಗವತರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಕೆ.ರೇವಣ್ಣ, ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.