ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಸ್ಥಗಿತಗೊಂಡ ‘ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ’

‘ಪಾವತಿಸಿ ಮತ್ತು ನಿಲುಗಡೆ ಮಾಡಿ’ ಮಾದರಿಯಲ್ಲಿ ಹೆಚ್ಚಿನ ಹಣ ವಸೂಲಿ
Published 30 ಏಪ್ರಿಲ್ 2024, 20:29 IST
Last Updated 30 ಏಪ್ರಿಲ್ 2024, 20:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ವಾಣಿಜ್ಯ ಪ್ರದೇಶದ ಎಂಟು ರಸ್ತೆಗಳಲ್ಲಿರುವ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ‘ಪಾವತಿಸಿ ಮತ್ತು ನಿಲುಗಡೆ ಮಾಡಿ’ ಎಂಬ ಹಳೆಯ ಮಾದರಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಹಳೆಯ ಮಾದರಿ ಅನುಸರಿಸುತ್ತಿರುವ ಬಗ್ಗೆ ಬಿಬಿಎಂಪಿಗೆ ಯಾವುದೇ ರೀತಿಯ ಮಾಹಿತಿ ಇಲ್ಲ.

ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಮನೆಯಿಂದ ವಾಹನಗಳಲ್ಲಿ ಹೊರಗೆ ಬರುವ ಜನ, ಪಾರ್ಕಿಂಗ್‌ ಜಾಗಕ್ಕಾಗಿ ಹುಡುಕಾಡುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ’ ಸ್ಥಗಿತಗೊಂಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

‘ನಗರದ ಪ್ರಮುಖ ರಸ್ತೆಗಳಲ್ಲಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವಾಗಿ 2018ರಲ್ಲಿ ಬಿಬಿಎಂಪಿ ವ್ಯಾಪ್ತಿಯ 8 ರಸ್ತೆಗಳಲ್ಲಿ ಸೆಂಟ್ರಲ್‌ ಪಾರ್ಕಿಂಗ್‌ ಸರ್ವೀಸಸ್‌ (ಸಿಪಿಎಸ್‌) ಸಂಸ್ಥೆಗೆ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಅವಕಾಶ ನೀಡಲಾಗಿತ್ತು. 2020ರ ಸೆ. 19ರಂದು ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ, ಮಲ್ಯ ರಸ್ತೆ, ರೆಸಿಡೆನ್ಸಿ ರಸ್ತೆ, ಅಲಿ ಅಸ್ಕರ್‌ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ಮ್ಯೂಸಿಯಂ ರಸ್ತೆ ಹಾಗೂ ಕನ್ನಿಂಗ್‌ಹ್ಯಾಮ್‌ ರಸ್ತೆಗಳಲ್ಲಿ ಸಿಪಿಎಸ್‌ ಸಂಸ್ಥೆಯು ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಿ, ಶುಲ್ಕ ವಸೂಲಿ ಪ್ರಾರಂಭಿಸಿತ್ತು. ಈಗ ಅದನ್ನು ಸ್ಥಗಿತಗೊಳಿಸಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಯಲ್ಲಿ ರಸ್ತೆಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ವರ್ಗದ ರಸ್ತೆಗಳಲ್ಲಿ ಪ್ರತಿ ಗಂಟೆಗೆ ದ್ವಿಚಕ್ರಕ್ಕೆ ₹15, ಕಾರಿಗೆ ₹30 ನಿಲುಗಡೆ ಶುಲ್ಕವಿದೆ. ‘ಬಿ’ ವರ್ಗದ ರಸ್ತೆಗಳಲ್ಲಿ ದ್ವಿಚಕ್ರಕ್ಕೆ ₹10, ಕಾರಿಗೆ ₹20 ಹಾಗೂ ‘ಸಿ’ ವರ್ಗದ ರಸ್ತೆಗಳಲ್ಲಿ ದ್ವಿಚಕ್ರಕ್ಕೆ ₹5, ಕಾರಿಗೆ ₹10 ನಿಗದಪಡಿಸಲಾಗಿತ್ತು. ಇದಕ್ಕಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿತ್ತು’ ಎಂದು ತಿಳಿಸಿದರು.

‘ಸ್ಮಾರ್ಟ್‌ ಪಾರ್ಕಿಂಗ್‌ ಇರುವ ರಸ್ತೆಗಳಲ್ಲಿ ಹಳೆ ಮಾದರಿ ಅನುಸರಿಸಿ ಪಾರ್ಕಿಂಗ್‌ ಶುಲ್ಕ ಪಡೆದುಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸಿಪಿಎಸ್‌ ಸಂಸ್ಥೆ ಹೊರತುಪಡಿಸಿ ಬೇರೆ ಯಾರೂ ಇಲ್ಲಿ ಪಾರ್ಕಿಂಗ್‌ ಶುಲ್ಕ ಪಡೆದುಕೊಳ್ಳುವಂತಿಲ್ಲ’ ಎಂದರು. 

‘ನಗರದ ಎಂಟು ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಸ್ಥಗಿತಗೊಂಡಿರುವ ಬಗ್ಗೆ ಗೊತ್ತಿಲ್ಲದ ವಾಹನ ಸವಾರರಿಂದ, ಕೆಲವರು ವಾಹನ ನಿಲುಗಡೆ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ₹10–₹15, ನಾಲ್ಕು ಕಾರಿಗೆ ₹20–₹30 ಪ‍ಡೆದುಕೊಳ್ಳಲಾಗುತ್ತಿದೆ. ಬಿಬಿಎಂಪಿ ಪೇ ಆ್ಯಂಡ್‌ ಪಾರ್ಕ್‌ ಎಂದು ನಮೂದಿಸಲಾದ ರಶೀದಿಗಳನ್ನು ನೀಡುತ್ತಿದ್ದಾರೆ’ ಎಂದು ದ್ವಿಚಕ್ರ ವಾಹನ ಸವಾರ ಸುಹಾಸ್‌ ದೂರಿದರು.

ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

‘ಹೊಸ ಟೆಂಡರ್‌ ಕರೆಯಲು ಅನುಮೋದನೆ’

‘ಕೇಂದ್ರ ವಾಣಿಜ್ಯ ಪ್ರದೇಶದ ಎಂಟು ರಸ್ತೆಗಳಲ್ಲಿ ಸೆಂಟ್ರಲ್‌ ಪಾರ್ಕಿಂಗ್‌ ಸರ್ವೀಸಸ್‌ (ಸಿಪಿಎಸ್‌) ಸಂಸ್ಥೆಗೆ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಎಂಟು ರಸ್ತೆಗಳಲ್ಲಿರುವ ಸ್ಮಾರ್ಟ್‌ ಪಾರ್ಕಿಂಗ್‌ನಿಂದ ನಿರೀಕ್ಷಿತ ಮಟ್ಟದ ಆದಾಯ ಬರದ ಕಾರಣ ಪಾರ್ಕಿಂಗ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ತಿಂಗಳು ಬಿಬಿಎಂಪಿಗೆ ಪಾವತಿಸಬೇಕಾದ ಹಣ ಪಾವತಿಸಿಲ್ಲ. ಆದ್ದರಿಂದ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ. ಬಾಕಿ ಹಣ ಪಾವತಿಸಿದ ನಂತರ ಹೊಸದಾಗಿ ಟೆಂಡರ್‌ ಕರೆಯಲು ಅನುಮೋದನೆ ಪಡೆದುಕೊಳ್ಳಲಾಗುವುದು’ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ (ಟಿಇಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT