ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಂತರಕಾರರ ಸಮ್ಮೇಳನ ನಡೆಯಲಿ- ಮಲ್ಲೇಪುರಂ ಜಿ. ವೆಂಕಟೇಶ

ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ ಅಭಿಮತ
Last Updated 1 ಫೆಬ್ರುವರಿ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿಯೇ ಪ್ರತಿವರ್ಷ ಭಾಷಾಂತರಕಾರರ ರಾಜ್ಯ ಮಟ್ಟದ ಸಮ್ಮೇಳನವನ್ನು ನಡೆಸಬೇಕು. ಈ ಮೂಲಕ ಭಾಷಾಂತರ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಬೇಕು’ ಎಂದು ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಟೇಶ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಸುರಾನ ಕಾಲೇಜು ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಭಾಷಾಂತಕಾರರ ದ್ವಿತೀಯ ಸಮಾವೇಶ ಹಾಗೂ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು. ‘ಕನ್ನಡ ಸಂಸ್ಕೃತಿಯ ಅಸ್ಮಿತೆಯು ಸೃಜನಶೀಲ ಲೇಖಕರು ಹಾಗೂ ಭಾಷಾಂತರಕಾರರಿಂದ ವಿಸ್ತರಣೆಗೊಳ್ಳಲಿದೆ. ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಭಾಷಾಂತರ ನಡೆಯುತ್ತಿದೆ. ಸಾಹಿತ್ಯಿಕ, ಶಾಸ್ತ್ರೀಯ ಹಾಗೂ ಶೈಕ್ಷಣಿಕ ಪಠ್ಯಗಳನ್ನು ಇತರೆ ಭಾಷೆಗಳಿಗೆ ಅನುವಾದ ಮಾಡಿಸುವ ಪ್ರಕ್ರಿಯೆ ಹೆಚ್ಚಬೇಕು’ ಎಂದು ತಿಳಿಸಿದರು.

‘ನಮ್ಮಲ್ಲಿ ಪ್ರಾಚೀನ ಶಾಸ್ತ್ರ ಕೃತಿಗಳು, ಆಧುನಿಕ ಶಾಸ್ತೃ ಕೃತಿಗಳು ಹಾಗೂ ವಿಜ್ಞಾನ ಕೃತಿಗಳು ಅಷ್ಟಾಗಿ ಭಾಷಾಂತರಗೊಂಡಿಲ್ಲ. ಶೈಕ್ಷಣಿಕ ನೆಲೆಯಲ್ಲಿ ಪಠ್ಯಗಳನ್ನು ಭಾಷಾಂತರ ಮಾಡುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಮಾತ್ರ ನಡೆದಿದೆ. ಕನ್ನಡಕ್ಕೆ ಬೇರೆ ಭಾಷೆಗಳಿಂದ ಸಾಹಿತ್ಯಿಕ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಕನ್ನಡದ ಹಿರಿಮೆ ಮತ್ತು ಅಸ್ಮಿತೆ ವಿಸ್ತರಣೆಯಾಗಲು ಇತರೆ ಭಾಷೆಗೆ ಇಲ್ಲಿನ ಕೃತಿಗಳು ಭಾಷಾಂತರಗೊಳ್ಳಬೇಕು. ಹೀಗಾಗಿ, ಭಾಷಾಂತರಗಾರರು ಇತರೆ ಭಾಷೆಗಳನ್ನು ಅಧ್ಯಯನ ಮಾಡಬೇಕು. ಅನುವಾದಕ್ಕೆ ಆಂಗ್ಲ ಕೃತಿಗಳನ್ನು ಮಾತ್ರ ಅನುಸರಿಸಿದರೆ ಮೂಲಧ್ವನಿ ಬರುವುದಿಲ್ಲ’ ಎಂದರು.

ವಿಮರ್ಶಕ ಬಸವರಾಜ ಕಲ್ಗುಡಿ, ‘ಅನುವಾದಕರು ಅನುವಾದದ ಸಂದರ್ಭದಲ್ಲಿ ಸಾಂಸ್ಕೃತಿಕ ವಾಸ್ತವಿಕತೆಯನ್ನು ಇಟ್ಟುಕೊಂಡಿರಬೇಕು. ಜೀವನದ ಎಲ್ಲವೂ ಒಂದು ರೀತಿಯ ಭಾಷಾಂತರವೇ ಆಗಿದೆ’ ಎಂದು ಹೇಳಿದರು.

ಸಮಾವೇಶದ ಸಂಚಾಲಕ ಎ. ಮೋಹನ ಕುಂಟಾರ್, ‘ಭಾಷಾಂತರದಿಂದಾಗಿ ಅನ್ಯ ಭಾಷೆಯ ಹಲವು ಕೃತಿಗಳು ಕನ್ನಡಕ್ಕೆ ಬಂದು, ಭಾಷೆಯನ್ನು ಪೋಷಿಸಿವೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಅನ್ಯ ಭಾಷೆಯ ಪ್ರೇರಣೆ ಬಹಳಷ್ಟಿದೆ. ನಮ್ಮಲ್ಲಿನ ಭಾಷಾಂತಕಾರರ ಮಾಹಿತಿ ಅಷ್ಟಾಗಿ ಸಿಗುವುದಿಲ್ಲ. ಅವರ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಕಾರ್ಯವನ್ನು ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಮಾಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT