ಸಂಕಷ್ಟದಲ್ಲಿ ‘ಕ್ರೈಸ್‌’ ಶಾಲೆ ನೌಕರರು| ಹೋರಾಟಕ್ಕೆ ಮುಂದಾದ 4,500 ಸಿಬ್ಬಂದಿ

ಗುರುವಾರ , ಜೂಲೈ 18, 2019
29 °C
ಶಾಸಕರ ಪಕ್ಷಾತೀತ ಬೆಂಬಲ

ಸಂಕಷ್ಟದಲ್ಲಿ ‘ಕ್ರೈಸ್‌’ ಶಾಲೆ ನೌಕರರು| ಹೋರಾಟಕ್ಕೆ ಮುಂದಾದ 4,500 ಸಿಬ್ಬಂದಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ವಸತಿ ಶಾಲೆಗಳ ಸಿಬ್ಬಂದಿ ವಿಚಾರದಲ್ಲಿ ಸರ್ಕಾರ ಪಕ್ಷಪಾತ ಧೋರಣೆ ತಳೆದಿದ್ದು, ಅವರ ಬೇಡಿಕೆಗಳನ್ನು ಜೂನ್‌ 30ರೊಳಗೆ ಈಡೇರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ್‌ ಶಹಾಪುರ ಒತ್ತಾಯಿಸಿದರು.

ಮಂಗಳವಾರ ಇಲ್ಲಿ ನಡೆದ ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯ ಬಳಿಕ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ಜುಲೈ 1ರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ಜುಲೈ 7ರಿಂದ ಲೇಖನಿ ಸ್ಥಗಿತ ಚಳವಳಿ ಹಾಗೂ ಬಳಿಕ ಅನಿರ್ದಿಷ್ಟ ಅವಧಿಗೆ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸರ್ಕಾರ ಇದಕ್ಕೆ ಅವಕಾಶ ಕೊಡದೆ ಸಿಬ್ಬಂದಿಯ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

‘ಕ್ರೈಸ್‌ ಸ್ಥಾಪನೆಯ ಉದ್ದೇಶ ಸಫಲವಾಗಿಲ್ಲ. ಸರ್ಕಾರದ ಅನುದಾನದಿಂದ ನಡೆಯುವ ಈ ಸಂಸ್ಥೆಗೆ ಒಳಪಟ್ಟ ಸಿಬ್ಬಂದಿ ಸರ್ಕಾರಿ ನೌಕರರಲ್ಲ. ಪ್ರತಿಯೊಂದು ಸೌಲಭ್ಯವನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಪರಿಸ್ಥಿತಿ ಇದೆ. ಕ್ರೈಸ್‌ ನಿಂದ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೇ ಅಲ್ಪಸಂಖ್ಯಾತರ ವಸತಿ ಶಾಲೆಗಳನ್ನು ಅಲ್ಪಸಂಖ್ಯಾತ ಇಲಾಖೆಯಿಂದಲೇ ನಡೆಸುವ ಕ್ರಮ ಕೈಗೊಳ್ಳಲಾಗಿದೆ. ಇದೀಗ ಅವರೆಲ್ಲ ಸರ್ಕಾರಿ ನೌಕರರು. ಅಲ್ಪಸಂಖ್ಯಾತರ ಇಲಾಖೆ ಮಾದರಿಯಲ್ಲೇ ಇತರ ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆ ಸಹಿತ ಇತರ ಇಲಾಖೆಗಳ ವತಿಯಿಂದ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

‘ಕ್ರೈಸ್‌ ಕಾಯಂ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಶಿಕ್ಷಕರಿಗೆ/ಪ್ರಾಂಶುಪಾಲರಿಗೆ ಜಿ.ಕುಮಾರ್‌ ನಾಯ್ಕ್ ವರದಿಯ ಶಿಫಾರಸುಗಳ ಅನ್ವಯ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಬೇಕು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು, ಅರ್ಹ ಶಿಕ್ಷಕರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ನೀಡಬೇಕು, ವೈಜ್ಞಾನಿಕ ವರ್ಗಾವಣೆ ಮಾರ್ಗಸೂಚಿ ಅನುಸರಿಸಬೇಕು, ಹೈದರಾಬಾದ್‌ ಕರ್ನಾಟಕ ಭಾಗದವರಿಗೆ 371 ಜೆ ನಿಯಮದಂತೆ ಪ್ರತ್ಯೇಕ ಜ್ಯೇಷ್ಠತಾ ಪಟ್ಟಿ ತಯಾರಿಸಬೇಕು, ಮೂಲ ವೇತನದ ಶೇ 10ರಷ್ಟು ವಿಶೇಷ ಭತ್ಯೆ ನೀಡಬೇಕು, ಮರಣ ಹೊಂದಿದ ನೌಕರರ ಕುಟುಂಬಗಳಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಸರ್ಕಾರ ತಾರತಮ್ಯ ನೀತಿಯನ್ನು ಕೈಬಿಡಬೇಕು ಎಂದರು. ಕ್ರೈಸ್‌ ಅಧ್ಯಕ್ಷ ಮಹೇಶ್ಚಂದ್ರ, ರಾಜ್ಯ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಅವರು ಹೋರಾಟದ ರೂಪುರೇಷೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !