ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯಗಳ ಆರೋಗ್ಯ ವಿಮೆ ವ್ಯವಸ್ಥೆ ಅಧ್ಯಯನಕ್ಕೆ ಆರೋಗ್ಯ ಇಲಾಖೆಯಿಂದ ತಂಡ ರಚನೆ

ಎರಡು ರಾಜ್ಯಗಳಿಗೆ ಭೇಟಿ ನೀಡಲು ಆರೋಗ್ಯ ಇಲಾಖೆ ಆದೇಶ
Published 23 ಜೂನ್ 2023, 14:23 IST
Last Updated 23 ಜೂನ್ 2023, 14:23 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ರಾಜ್ಯಗಳಲ್ಲಿ ಜಾರಿಯಿರುವ ಆರೋಗ್ಯ ವಿಮೆ ವ್ಯವಸ್ಥೆಯ ಬಗ್ಗೆ ಅಧ್ಯಯನಕ್ಕೆ ಆರೋಗ್ಯ ಇಲಾಖೆಯು ನಾಲ್ವರು ಅಧಿಕಾರಿಗಳ ತಂಡ ರಚಿಸಿದೆ. 

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು. ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಜಾರಿಯಲ್ಲಿರುವ ಸಾರ್ವಜನಿಕ ಆರೋಗ್ಯ ಯೋಜನೆಗಳ ಆರೋಗ್ಯ ವಿಮೆ ಬಗ್ಗೆ ಅಧ್ಯಯನಕ್ಕೆ ಸೂಚಿಸಿದ್ದರು. ಅದರಂತೆ ಈಗ ಅಧಿಕಾರಿಗಳ ತಂಡ ರಚಿಸಲಾಗಿದೆ. 

ಇಲಾಖೆಯ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ. ಭಾನುಮೂರ್ತಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ಡಾ. ಸುರೇಶ್ ಶಾಸ್ತ್ರಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕಿ (ಕಾರ್ಯಾಚರಣೆ) ರೂಪಾ ಹಾಗೂ ಸಹಾಯಕ ನಿರ್ದೇಶಕ (ಹಣಕಾಸು) ಅರುಣ್ ಕುಮಾರ್ ಟಿ. ಅವರು ತಂಡದಲ್ಲಿದ್ದಾರೆ. ಇದೇ 27 ಹಾಗೂ 28ರಂದು ರಾಜಸ್ಥಾನ, ಜುಲೈ 6 ಹಾಗೂ 7ರಂದು ತಮಿಳುನಾಡಿಗೆ ತೆರಳಲಿದ್ದಾರೆ. ಬಳಿಕ ವರದಿ ಸಲ್ಲಿಸಲಿದ್ದಾರೆ. 

‘ವರದಿ ಸಲ್ಲಿಕೆಯಾದ ಬಳಿಕ, ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಹೆಚ್ಚು ಜನಸ್ನೇಹಿಯಾಗಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಜತೆಗೆ ಚರ್ಚಿಸಲಿದ್ದಾರೆ. ಜಾರಿಯಲ್ಲಿರುವ ಆರೋಗ್ಯ ವಿಮೆ ಯೋಜನೆಗೆ ರಾಜ್ಯ ಸರ್ಕಾರ ಶೇ 64 ರಷ್ಟು ಹಣಕಾಸಿನ ನೆರವು ಒದಗಿಸುತ್ತಿದ್ದು, ಕೇಂದ್ರ ಸರ್ಕಾರ ಶೇ 34 ರಷ್ಟು ಮಾತ್ರ ಹಣಕಾಸಿನ ನೆರವು ನೀಡುತ್ತಿದೆ. ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಎರಡು ವಾರಗಳಲ್ಲಿ ಚಿಕಿತ್ಸಾ ವೆಚ್ಚ ಪಾವತಿಸುವ ವಿಧಾನ ಜಾರಿಗೊಳಿಸಲು ಸಚಿವರು ನಿರ್ಧರಿಸಿದ್ದಾರೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT