ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನೆಟ್‌ ಮೇಲಿದ್ದ ಚಾಲಕನನ್ನು 400 ಮೀ. ದೂರಕ್ಕೆ ಎಳೆದೊಯ್ದು ದುಷ್ಕೃತ್ಯ

Published 23 ಜನವರಿ 2024, 16:05 IST
Last Updated 23 ಜನವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತ ಮಾಡಿದ್ದನ್ನು ಪ್ರಶ್ನಿಸಿ, ಕಾರಿನ ಬ್ಯಾನೆಟ್‌ ಮೇಲೇರಿದ್ದ ಕ್ಯಾಬ್‌ ಚಾಲಕನನ್ನು 400 ಮೀಟರ್‌ ದೂರಕ್ಕೆ ಎಳೆದೊಯ್ದು ದುಷ್ಕೃತ್ಯ ಮಲ್ಲೇಶ್ವರದಲ್ಲಿ  ನಡೆದಿದೆ.

ಈ ಘಟನೆ ಜ.15ರಂದು ನಡೆದಿದ್ದು, ಕಾರು ಚಾಲಕ ಮಹಮ್ಮದ್‌ ಮುನೀರ್ ವಿರುದ್ಧ ಎನ್‌.ಸಿ.ಆರ್‌ ದಾಖಲು ಮಾಡಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಘಟನೆಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ, ಅಶ್ವತ್ಥ್‌ ಅವರ ಕ್ಯಾಬ್​ಗೆ ಮಹಮ್ಮದ್ ಮುನೀರ್ ಎಂಬುವವರ ಕಾರು ಡಿಕ್ಕಿಯಾಗಿತ್ತು. ಆಗ ಕಾರು ನಿಲ್ಲಿಸುವಂತೆ ಅಶ್ವತ್ಥ್‌ ಅವರು ಮನವಿ ಮಾಡಿದ್ದರು. ಆದರೆ, ಮುನೀರ್‌ ವಾಹನ ನಿಲ್ಲಿಸದೆ ಮುಂದಕ್ಕೆ ತೆರಳಲು ಪ್ರಯತ್ನಿಸಿದ್ದರು. ಆಗ, ಅಶ್ವತ್ಥ್‌ ಅವರು ಕಾರಿನ ಬಾನೆಟ್‌ ಮೇಲೆ ಹತ್ತಿ ಕೆಳಕ್ಕೆ ಇಳಿಯುವಂತೆ ಮನವಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಅಶ್ವತ್ಥ್‌ ಅವರನ್ನು ದೂರಕ್ಕೆ ಎಳೆದೊಯ್ದು ದುಷ್ಕೃತ್ಯ ಎಸಗಲಾಗಿದೆ’

‘ಮಲ್ಲೇಶ್ವರದ 18ನೇ ಕ್ರಾಸ್‌ನ ಸಿಗ್ನಲ್​ವರೆಗೂ ಆರೋಪಿ ತನ್ನ ಕಾರು ಚಲಾಯಿಸಿದ್ದು, ಸ್ಥಳೀಯರು ಹಿಂದೆ ಓಡಿದರೂ ಕಾರು ನಿಲ್ಲಿಸಿಲ್ಲ. ಮಾರ್ಗ ಮಧ್ಯದಲ್ಲಿ ಕಾರಿಗೆ ಬ್ರೇಕ್‌ ಹಾಕಿ ಅಶ್ವತ್ಥ್‌ ಅವರನ್ನು ಕೆಳಕ್ಕೆ ಬೀಳಿಸುವ ಪ್ರಯತ್ನ ಸಹ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

ಅಂದೇ ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರ ಪೊಲೀಸ್‌ ಠಾಣಾ ಹೊಯ್ಸಳ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದು ಎನ್.ಸಿ.ಆರ್ ದಾಖಲಿಸಿಕೊಂಡಿದ್ದರು.

‘ಪ್ರಕರಣ ಸಂಬಂಧ ಇದುವರೆಗೂ ಯಾರೂ ದೂರು ನೀಡಿಲ್ಲ. ಸದ್ಯ ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ನಂತರ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT