ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬ್ರ್ಯಾಂಡ್‌’ ಛಾಯೆ, ಆದಾಯವೇ ಸವಾಲು

ನಿರೀಕ್ಷಿತ ಒಟ್ಟು ಸಂಗ್ರಹದಲ್ಲಿ ಶೇ 50ರಷ್ಟು ಆಸ್ತಿ ತೆರಿಗೆ ಮೇಲೆ ಅವಲಂಬಿತ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಂತ ಸಂಪನ್ಮೂಲಗಳ ಕ್ರೋಡೀಕರಣದತ್ತ ಗುರಿ ನೆಟ್ಟಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯೇ ಬಜೆಟ್‌ನಲ್ಲಿ ಪ್ರತಿಫಲನವಾಗುವಂತೆ ನೋಡಿಕೊಂಡಿದೆ. ಆದರೆ, ಹೆಚ್ಚುವರಿಯಾಗಿ ನಿರೀಕ್ಷಿಸಿರುವ ಆದಾಯ ಖಜಾನೆ ತುಂಬದಿದ್ದರೆ ಕಾಮಗಾರಿಗಳ ಬೆನ್ನೆಲುಬೇ ಮುರಿದಂತಾಗುತ್ತದೆ.

ಬೃಹತ್‌ ಹಾಗೂ ಉತ್ತಮ ಯೋಜನೆಗಳ ಉದ್ದದ ಪಟ್ಟಿಯಂತಿರುವ ಬಜೆಟ್‌, ಮೇಲ್ನೋಟಕ್ಕೆ ಎಲ್ಲ ಸೌಲಭ್ಯಗಳೂ ಸಿಕ್ಕಂತಾಯಿತು ಎಂದು ಎನ್ನಿಸುತ್ತದೆ. ಆದರೆ, ಅವುಗಳ ಆರಂಭಕ್ಕಷ್ಟೇ ಬಜೆಟ್‌ನಲ್ಲಿ ಅನುದಾನವಿದ್ದು, ಎಲ್ಲ ಪೂರ್ಣಗೊಳ್ಳಲು ವರ್ಷಗಳೇ ಬೇಕಾಗುತ್ತವೆ ಎಂಬುದೂ ಸ್ಪಷ್ಟವಾಗಿದೆ.

ಅರ್ಥಶಾಸ್ತ್ರದಲ್ಲಿ ಚಾಣಕ್ಯ ಹೇಳಿರುವ ಮಾತುಗಳನ್ನು ಉಲ್ಲೇಖಿಸಿ ಖಜಾನೆ ತುಂಬಿಕೊಳ್ಳುವ ಮಾತನ್ನಾಡಿರುವ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಎಚ್‌. ಕಲಕೇರಿ ಅವರು, ಸುಂಕ ವಂಚನೆ ಬಗೆಗಿನ ಬಸವಣ್ಣನವರ ವಚನವನ್ನೂ ಪ್ರಸ್ತಾಪಿಸಿದ್ದಾರೆ.

ಖಜಾನೆ ತುಂಬಬೇಕೆಂದರೆ ನಾಗರಿಕನಿಗೆ ಬೇಕಾದ ಸವಲತ್ತುಗಳು ಅವನ ಅಗತ್ಯಾನುಸಾರ ಸಿಗಬೇಕು. ಆಗ, ಪ್ರಸ್ತಾಪಿಸುವ ತೆರಿಗೆಗಳನ್ನು ಪಾವತಿಸಲು ಆತ ಸಿದ್ದನಿರುತ್ತಾನೆ. ರಸ್ತೆ, ಚರಂಡಿ, ಕುಡಿಯಲು ನೀರು ಕೊಡದೆ, ಸುರಕ್ಷಿತ ರಸ್ತೆ, ಸುಗಮ ಸಂಚಾರ, ಮಳೆಗಾಲದಲ್ಲಿ ಸಂಕಷ್ಟವಿಲ್ಲದ ಜೀವನ ನೀಡುವ ಭರವಸೆಗಳು ವರ್ಷಗಟ್ಟಲೆ ಕನಸಾಗಿಯೇ ಉಳಿದರೆ ‘ಹೈಟೆಕ್‌’ ತೆರಿಗೆಯನ್ನು ನಿರೀಕ್ಷಿಸುವುದು ತರವಲ್ಲ. ಆದರೂ, ತೆರಿಗೆ ನೀಡದವ ಭಂಡ/ ವಂಚಕ ಎಂದು ಪರೋಕ್ಷವಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಜರಿಯಲಾಗಿದೆ.

ಬಜೆಟ್‌ನಲ್ಲಿ ನಿರೀಕ್ಷಿಸಲಾಗಿರುವ ಒಟ್ಟು ಸಂಗ್ರಹದಲ್ಲಿ ಶೇ 50ರಷ್ಟು ಆಸ್ತಿ ತೆರಿಗೆ ಮೇಲೆಯೇ ಅವಲಂಬಿತವಾಗಿದೆ. ಕಳೆದ ವರ್ಷಕ್ಕಿಂತ ₹1,500 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವುದಾಗಿ ಹೇಳಿರುವುದು ಹೊಸ ಆಸ್ತಿ ತೆರಿಗೆಯಿಂದ ಜನರ ಮೇಲಾಗುವ ಹೊರೆಯನ್ನು ಸೂಚಿಸುತ್ತದೆ. 751 ಚದರ ಕಿ.ಮೀ. ವ್ಯಾಪ್ತಿಯ ಬಿಬಿಎಂಪಿ ಪ್ರದೇಶಗಳು ಒಂದಕ್ಕಿಂತ ಒಂದು ವಿಭಿನ್ನ. ಒಂದೆಡೆ ಬೇಕಾದ ಸೌಲಭ್ಯ, ಇನ್ನೊಂದುಕಡೆ ಅನಗತ್ಯ. ಆದರೂ, ಸೌಂದರ್ಯೀಕರಣ, ಪ್ರತಿಷ್ಠೆಗಳಿಗಾಗಿ ಕೇಂದ್ರೀಕೃತ ಯೋಜನೆಗಳನ್ನೇ ಬಜೆಟ್‌ನಲ್ಲಿ ಹೆಚ್ಚು ಪ್ರಸ್ತಾಪಿಸಲಾಗಿದೆ.

ಹೆಚ್ಚುವರಿಯಾಗಿ ಫ್ಲ್ಯಾಟ್‌ಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರಿ ಬೆಲೆಯಲ್ಲಿ ಪ್ರೀಮಿಯಂ ಎಫ್‌ಎಆರ್‌ ‌ಮಾರಾಟದಿಂದ ₹1 ಸಾವಿರ ಕೋಟಿ ಸಂಗ್ರಹ ನಿರೀಕ್ಷಿಸಲಾಗಿದೆ. ನಗರದ ಸೌಂದರ್ಯ ಹಾಳು ಮಾಡುವ ಜಾಹೀರಾತುಗಳಿಗೆ ಮತ್ತಷ್ಟು ಅವಕಾಶ ನೀಡಿ ₹500 ಕೋಟಿ ಸಂಗ್ರಹಿಸುವ ಗುರಿಯೂ ಇದೆ. ಹೆಚ್ಚುವರಿಯಾಗಿ ಸುಮಾರು ₹3,750 ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ. 'ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಗೆ ನಾಗರಿಕರು 70 ಸಾವಿರ ಸಲಹೆಗಳನ್ನು ನೀಡಿದ್ದರು. ಬಿ.ಎಸ್‌. ಪಾಟೀಲ ಸಮಿತಿಯು ಈ ಪರಿಕಲ್ಪನೆಯನ್ನು ಪರಿಗಣಿಸಿ, ಪರಿಷ್ಕರಿಸಿ ನೀಡುವ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಬಜೆಟ್‌ನಲ್ಲೇ ಹೇಳಲಾಗಿದೆ. ಆದರೂ, ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಲ್ಲೇ ಶೇ 70ರಷ್ಟು ಯೋಜನೆಗಳನ್ನು ಪ್ರಕಟಿಸಲಾಗಿದೆ.

ಸುರಂಗ ಮಾರ್ಗ, ಸ್ಕೈ–ಡೆಕ್ಟ್‌, ಸಂಚಾರಯುಕ್ತ ರಸ್ತೆಗಳ ಸಾವಿರಾರು ಕೋಟಿ ವೆಚ್ಚದ ಯೋಜನೆಗಳನ್ನು ಪ್ರಕಟಿಸಿ, ಅವುಗಳಿಗೆ ಪ್ರಾರಂಭಿಕ ಹಂತದ ನೂರಾರು ಕೋಟಿಯನ್ನಷ್ಟೇ ‘ರೋಮಾಂಚನ ಬೆಂಗಳೂರು’ ಅಡಿಯಲ್ಲಿ ಪ್ರಕಟಿಸಲಾಗಿದೆ. ನಗರದಲ್ಲಿ ನಡೆಯುತ್ತಿರುವ ಐದು ಮೇಲ್ಸೇತುವೆಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗದೆ ಕಾಮಗಾರಿಗಳು ಸ್ಥಗಿತವಾಗಿರುವುದು ಈ ಬೃಹತ್‌ ಯೋಜನೆಗಳ ಭವಿಷ್ಯವನ್ನು ಪ್ರಶ್ನಿಸುವಂತಾಗಿದೆ.

‘ನಮ್ಮ ತೆರಿಗೆ ಬಿಬಿಎಂಪಿ ಹಕ್ಕು’ ಎಂಬುದು ಬಜೆಟ್‌ನಲ್ಲಿ ಸ್ಪಷ್ಟವಾಗಿದ್ದು, ನಾಗರಿಕರ ತೆರಿಗೆಯ ಮೇಲೆಯೇ ಎಲ್ಲವೂ ಅವಲಂಬಿತವಾಗಿದೆ. ಉಪ ಮುಖ್ಯಮಂತ್ರಿಯವರ ವಿವೇಚನಾ ಕೋಟಾದ ₹100 ಕೋಟಿಯೂ ಇದೇ ತೆರಿಗೆಯಿಂದಲೇ ಭರಿಸಬೇಕಾಗಿದೆ. ಹೀಗಾಗಿ, ನಾಗರಿಕರ ತೆರಿಗೆ, ವಾಣಿಜ್ಯ ಚಟುವಟಿಕೆಗಳ ಸುಂಕದಿಂದ ಬಿಬಿಎಂಪಿ ಖಜಾನೆ ನಿರೀಕ್ಷೆಯಂತೆ ಭರ್ತಿಯಾದರೆ ಮಾತ್ರ ಪ್ರಕಟಿಸಿರುವ ಯೋಜನೆಗಳು ಆರಂಭವಾಗುತ್ತವೆ.

ಬೆಂಗಳೂರು ಹಬ್ಬಕ್ಕೂ ಖಾಸಗಿ ಸಹಭಾಗಿತ್ವಕ್ಕೆ ಮಣೆ!

ಬೆಂಗಳೂರು ಹಬ್ಬ, ಡಿಜಿಟಲ್‌ ಬೆಂಗಳೂರು ಹಾಗೂ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲು ಸಾರ್ವಜನಿಕ– ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಗೆ ಬಿಬಿಎಂಪಿ ಮಣೆ ಹಾಕಿದೆ.

ಆದಾಯ ಹಂಚಿಕೆ ಸೂತ್ರದಡಿ ನಗರದಲ್ಲಿರುವ 13 ಸಾವಿರ ಕಿ.ಮೀ ಉದ್ದ ರಸ್ತೆಗಳಲ್ಲಿ ‘ನಿರ್ದಿಷ್ಟ ಒಎಫ್‌ಸಿ ಕೇಬಲ್‌ ಡಕ್ಟ್‌ ಪಥ’ಗಳನ್ನು ಖಾಸಗಿಯವರು ನಿರ್ಮಿಸಿ, ನಿರ್ವಹಿಸಲಿದ್ದಾರೆ. ಬಿಬಿಎಂಪಿಗೆ ಒಂದಷ್ಟು ಶುಲ್ಕ ನೀಡಲಿದ್ದಾರೆ. ಆಟದ ಮೈದಾನದ ತಳಭಾಗದಲ್ಲಿನ ಪಾರ್ಕಿಂಗ್‌ ಅನ್ನು ಖಾಸಗಿಯವರು ನಿರ್ಮಿಸಿ, ಶುಲ್ಕ ವಸೂಲಿ ಮಾಡಲಿದ್ದಾರೆ. ಇನ್ನು ನಗರದ ಬ್ರ್ಯಾಂಡ್‌ ‘ಬೆಂಗಳೂರು ಹಬ್ಬ’ವನ್ನು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ನೀರಿನ ಭದ್ರತೆ ಮರೆತ ಬಿಬಿಎಂಪಿ
‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯ 8ನೇ ವಿಭಾಗ ‘ನೀರಿನ ಭದ್ರತೆ ಬೆಂಗಳೂರು’ ಅನ್ನು ಬಿಬಿಎಂಪಿ ಮರೆತುಹೋಗಿದೆ. ಅಂತರ್ಜಲ ವೃದ್ಧಿ, ಇಂಗು ಗುಂಡಿ, ಕೆರೆಗಳ ಅಭಿವೃದ್ಧಿ, ನೀರಿನ ಸ್ವಾವಲಂಬನೆಯಂತಹ ಉಪಕ್ರಮಗಳಿರುವ ಈ ವಿಭಾಗದಿಂದ ಯಾವುದೇ ರೀತಿಯ ಯೋಜನೆಗಳನ್ನು ಪ್ರಕಟಿಸಲಾಗಿಲ್ಲ. ಕುಡಿಯುವ ನೀರಿನ ಕೊರತೆಯಿಂದ ಸಂಕಷ್ಟದಲ್ಲಿರುವ ನಗರದ ಜನತೆಗೆ ಮುಂದಿನ ವರ್ಷಗಳಲ್ಲಿ ನೀರಿನ ಭರವಸೆ ನೀಡುವ ಕೆಲಸವೂ ಆಗಿಲ್ಲ.

16 ಸಾವಿರ ಪೌರಕಾರ್ಮಿಕರ ನೇಮಕಕ್ಕೆ ಕ್ರಮ

16 ಸಾವಿರ ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ವಿವಿಧ ಇಲಾಖೆಗಳಿಂದ ಎರವಲು ಸೇವೆ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮ ಪಾಲಿಸಲಾಗುವುದು. ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಲಾಗಿದೆ.

ಪಾರದರ್ಶಕ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು. ಆರ್‌.ವಿ. ದೇಶಪಾಂಡೆ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ವರದಿ ಬಂದ ಬಳಿಕ ಆಡಳಿತ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. 

ಬಿಬಿಎಂ‍ಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಹೆಸರಲ್ಲಿ ಸೊಸೈಟಿ ಸ್ಥಾಪಿಸಿ ಕಾರ್ಪಸ್‌ ಫಂಡ್‌ ಬೆಳೆಸಲು ಉದ್ದೇಶಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಯ ಜ್ಞಾನ ಹೆಚ್ಚಿಸಲು ಸುಸಜ್ಜಿತ ಗ್ರಂಥಾಲಯ ಸ್ಥಾಪನೆ, ತರಬೇತಿ ಘಟಕ ಸ್ಥಾಪನೆ ಮಾಡಲಾಗುವುದು. ಅಧಿಕಾರಿ, ಸಿಬ್ಬಂದಿಗೆ ಈ ವರ್ಷವೂ ₹2 ಲಕ್ಷ ನಗದು ಒಳಗೊಂಡ ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡಲಾಗುವುದು.

ಲೆಕ್ಕಪತ್ರ, ಆಯವ್ಯಯ ಘಟಕ

ಪಾಲಿಕೆಯ ದೈನಂದಿನ ಲೆಕ್ಕಪತ್ರ ನಿರ್ವಹಣೆ ಜೊತೆಗೆ ಆಯವ್ಯಯ ತಯಾರಿಕೆ, ತೆರಿಗೆ ಸಂಬಂಧಿತ ಶಾಸನಬದ್ಧ ವಿಷಯಗಳನ್ನು ನಿರ್ವಹಿಸಲು, ಇತರೆ ಆರ್ಥಿಕ ಸಿಧಾರಣೆ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲು ನುರಿತ ಚಾರ್ಟೆಡ್‌ ಅಕೌಂಟೆಂಟ್‌ ನೇತೃತ್ವದಲ್ಲಿ ಪಾಲಿಕೆಯ ಲೆಕ್ಕಪತ್ರ ಮತ್ತು ಆಯವ್ಯಯ ಘಟಕವನ್ನು ಸ್ಥಾಪಿಸಲಾಗುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT