ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

17ರಿಂದ ಲಾರಿ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ

Published 6 ಜನವರಿ 2024, 16:14 IST
Last Updated 6 ಜನವರಿ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪಘಾತ ನಡೆಸಿ ಪರಾರಿ’ಯಾದ (ಹಿಟ್‌ ಅಂಡ್‌ ರನ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಹೊಸ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ಇದೇ 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು’ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ ತಿಳಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ರಾಜ್ಯ ಘಟಕದ ಅಧ್ಯಕ್ಷ ಸಿ. ನವೀನ್ ರೆಡ್ಡಿ, ‘ಕೇಂದ್ರ ಸರ್ಕಾರ ಕಾನೂನು ತಜ್ಞರು, ಸಾರಿಗೆ ವಲಯದ ಪ್ರತಿನಿಧಿಗಳೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸದೇ ಈ ಕಾನೂನು ಜಾರಿಗೊಳಿಸಲು ತಯಾರಿ ನಡೆಸಿದೆ. ಹೊರ ರಾಜ್ಯಗಳಲ್ಲಿ ಅಪಘಾತ ಸಂಭವಿಸಿದಾಗ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಲಾರಿ ಚಾಲಕರಿಗೆ ಜಾಮೀನು ನೀಡಲು ಸ್ಥಳೀಯ ಭದ್ರತೆ ಕೇಳುವ ಅಂಶವನ್ನು ಈ ಕಾನೂನಿನಿಂದ ಕೈಬಿಡಬೇಕು’ ಎಂದರು.

‘ದೇಶದ ಸಾರಿಗೆ ವಲಯವು ಶೇ 27ರಷ್ಟು ಚಾಲಕರ ಕೊರತೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾನೂನಿನಿಂದ ಹೊಸಬರು ಯಾರು ಈ ವೃತ್ತಿಗೆ ಪ್ರವೇಶಿಸಲು ಇಷ್ಟಪಡುವುದಿಲ್ಲ. ಭಾರಿ ಮತ್ತು ಚಿಕ್ಕ ವಾಹನಗಳ ಮಧ್ಯ ಸಂಭವಿಸುವ ಅಪಘಾತಗಳಲ್ಲಿ ಯಾವುದೇ ರೀತಿಯ ತನಿಖೆ ನಡೆಸದೇ ಭಾರಿ ವಾಹನಗಳ ಚಾಲಕರದ್ದೇ ತಪ್ಪಿದೇ ಎಂದು ಪ್ರಕರಣ ದಾಖಲಿಸುವ ಪರಿಪಾಠ ಸದ್ಯ ಜಾರಿಯಲ್ಲಿದೆ’ ಎಂದು ಅವರು ಹೇಳಿದರು.

‘ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ನಿಯಮಗಳನ್ನು ಸಡಿಲಗೊಳಿಸುವಂತೆ ಜ. 17ರವರೆಗೆ ಗಡುವು ನೀಡಲಾಗಿದೆ. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುತ್ತೇವೆ. ಆದರೆ, ದಿನನಿತ್ಯದ ವಸ್ತುಗಳನ್ನು ಸರಬರಾಜು ಮಾಡುವ ವಾಹನಗಳು ಎಂದಿನಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT