ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

GKVK ಕೃಷಿಮೇಳಕ್ಕೆ ಹರಿದು ಬಂದ ಜನಸಾಗರ

ಎರಡನೇ ದಿನ 5.48 ಲಕ್ಷ ಜನರ ಭೇಟಿ * ಆಕರ್ಷಣೆಗೆ ಒಳಗಾದ ಕೋಳಿ, ಮೀನು, ಆಡು
Published 18 ನವೆಂಬರ್ 2023, 20:00 IST
Last Updated 18 ನವೆಂಬರ್ 2023, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಎರಡನೇ ದಿನವಾದ ಶನಿವಾರ ಜನಸಾಗರವೇ ಹರಿದು ಬಂದಿದೆ. ಮೊದಲ ದಿನ ಭಾಗವಹಿಸಿದ್ದ ರೈತರು, ವಿದ್ಯಾರ್ಥಿಗಳು, ಕೃಷಿಯಾಸಕ್ತರ ಸಂಖ್ಯೆ 1.32 ಲಕ್ಷ ಇದ್ದರೆ, ಎರಡನೇ ದಿನ 5.48 ಲಕ್ಷ ಜನರು ಭೇಟಿ ನೀಡಿದ್ದರು.

ಬೆಳಿಗ್ಗಿನಿಂದಲೇ ತಂಡೋಪತಂಡವಾಗಿ ಬಂದವರು ವೇದಿಕೆ ಕಡೆಗಿಂತ ಪ್ರದರ್ಶನಗಳ ಕಡೆಗೇ ಧಾವಿಸುತ್ತಿದ್ದರು. ವಿಭಿನ್ನ ತಳಿಯ ಕೋಳಿಗಳು, ಆಲಂಕಾರಿಕ ಮೀನುಗಳು, ಉದ್ದ ಕಿವಿಯ ಆಡುಗಳನ್ನು ಮುಗಿಬಿದ್ದು ನೋಡಿ ಆನಂದಿಸಿದರು.

ಮಧ್ಯಾಹ್ನದ ರಿಯಾಯಿತಿ ದರದ ಊಟಕ್ಕೆ 8 ಸಾವಿರ ಮೊಟ್ಟೆಗಳನ್ನು ಪ್ರಾಯೋಜಕರು ನೀಡಿದ್ದರು. ಅದು ಮಧ್ಯಾಹ್ನ 2ರ ಹೊತ್ತಿಗೆ ಖಾಲಿಯಾಗಿತ್ತು. ಆನಂತರವೂ ಒಂದೂವರೆ ಸಾವಿರಕ್ಕೂ ಅಧಿಕ ಜನರು (ಒಟ್ಟು 9,620) ಊಟ ಮಾಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಸಿಲ್‌ ಕ್ರಾಸ್‌: ನಾಟಿಕೋಳಿಯಂತೆ ಮನೆಯ ಹಿತ್ತಿಲಲ್ಲಿ ಬಿಟ್ಟು ಸಾಕಬಹುದಾದ ಅಸಿಲ್‌ ಕ್ರಾಸ್‌ (ಅಸಲಿ ಕೋಳಿ ಕ್ರಾಸ್‌) ಕೋಳಿಗಳು ನಾಟಿಕೋಳಿಗಳಂತೆ ಬಣ್ಣ ಬಣ್ಣದ ಪುಕ್ಕಗಳಿರುವುದರಿಂದ ನೋಡುಗರನ್ನು ಬೇಗ ಸೆಳೆಯುತ್ತಿವೆ. ನಾಟಿಕೋಳಿಗಳಿಗಿಂತ ಎರಡು–ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತವೆ. ಫಾರಂ ಕೋಳಿಗಳಂತೆ ಹೆಚ್ಚು ಆರೈಕೆ ಅಗತ್ಯವಿಲ್ಲದ ಈ ಕೋಳಿಗಳು ರೈತರಿಗೆ ಲಾಭದಾಯಕವಾಗಿರುವುದರಿಂದ ಅನೇಕರು ಈ ಕೋಳಿಗಳ ಮರಿಗಳನ್ನು ಖರೀದಿಸಿದರು.

ವರ್ಷಕ್ಕೆ 150ರಿಂದ 180 ಮೊಟ್ಟೆಗಳನ್ನು ಇಡುವ ಕಾವೇರಿ ತಳಿ ಕೋಳಿಯು ಅಸಿಲ್‌ ಕ್ರಾಸ್‌ನಂತೆ ಮಾಂಸಕ್ಕೂ ಬಳಸಬಹುದು, ಕಳಿಂಗ ಬ್ರೌನ್‌ನಂತೆ ಮೊಟ್ಟೆಗೂ ಬಳಸಬಹುದಾದ ತಳಿ. ಅಸಿಲ್‌ ಕ್ರಾಸ್‌ ಬಳಿಕ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು, ಇದೇ ತಳಿ. ಉಳಿದಂತೆ ಕಳಿಂಗ ಬ್ರೌನ್‌, ಗಿರಿರಾಜಗಳ ಬಗ್ಗೆಯೂ ಜನರು ಮಾಹಿತಿ ಪಡೆಯುತ್ತಿದ್ದರು. ಇವುಗಳ ನಡುವೆ ಬಾತುಕೋಳಿ ಮರಿಗಳ ಖರೀದಿಯೂ ಜೋರಾಗಿತ್ತು. ಕಾಕಿ ಕಾಂಪ್ಬೆಲ್‌ (ಮೊಟ್ಟೆತಳಿ), ವೈಟ್‌ಪೆಕಿನ್‌ (ಮಾಂಸತಳಿ) ಬಾತುಕೊಳಿಗಳಿಗೆ ಬೇಡಿಕೆ ಹೆಚ್ಚಿತ್ತು. ಪಶುಸಂಗೋಪನಾ ಶ್ರೇಷ್ಠತೆಯ ಕೇಂದ್ರದ (ಸಿಇಎಎಚ್‌) ಜಂಟಿ ಆಯುಕ್ತ ಮಹೇಶ್‌ ಪಿ.ಎಸ್‌. ಮತ್ತು ಅವರ ತಂಡ ಕೋಳಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕೋಳಿ ಆಹಾರದಲ್ಲಿ ಆ್ಯಂಟಿ ಬಯಟಿಕ್‌ಗಳನ್ನು ಬಳಸಲಾಗುತ್ತದೆ. ಅದು ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಐಸಿಎಆರ್‌–ಎನ್‌ಐಎಎನ್‌ಪಿ ಸಂಸ್ಥೆ ‘ಪೈತೊ’ ಎಂಬ ಆಹಾರವನ್ನು ತಯಾರಿಸಿದೆ. ‘ಸಿರಿಧಾನ್ಯಗಳನ್ನೇ ಬಳಸಿ ತಯಾರಿಸಿರುವುದರಿಂದ ಕೋಳಿಗೂ, ಪರಿಸರಕ್ಕೂ, ಮನುಷ್ಯರಿಗೂ ಒಳ್ಳೆಯದು’ ಎಂದು ಐಸಿಎಆರ್‌–ಎನ್‌ಐಎಎನ್‌ಪಿ ಸಂಸ್ಥೆಯ ಸಂಶೋಧಕಿ ಆರ್‌.ಯು. ಸುಗಂತಿ ಮಾಹಿತಿ ನೀಡಿದರು.

ಆಲಂಕಾರಿಕ ಮೀನು: ಕೊಳ, ಕೆರೆಗಳಲ್ಲಿ ಸಾಕುವ ಮೀನುಗಳು ಆಹಾರವಾಗಿ ಬಳಕೆಯಾಗುತ್ತವೆ. ಅವುಗಳಷ್ಟೇ ಬೇಡಿಕೆ ಆಲಂಕಾರಿಕ ಮೀನುಗಳಿಗೆ ಇವೆ. ಅದಕ್ಕಾಗಿ ₹ 50, ₹ 100ಕ್ಕೆ ಒಂದರಂತೆ ಇಟ್ಟಿದ್ದ ಆಲಂಕಾರಿಕ ಮೀನುಗಳನ್ನು ನೂರಾರು ಜನರು ಖರೀದಿಸಿದರು. ನಗರದ ನಾಗರಿಕರನ್ನು ಸೆಳೆಯುವ ವಿಭಿನ್ನ ಬಗೆಯ ಅಕ್ಚೆರಿಯಂಗಳು ಗಮನಸೆಳೆದವು.

‘ಮೀನು ಸಾಕಣೆ, ಪಾಲನೆಗಳ ಬಗ್ಗೆ ತರಬೇತಿಯನ್ನು ನಾವೇ ನೀಡುತ್ತೇವೆ. ಆಲಂಕಾರಿಕ ಮೀನುಗಳಿಂದಲೇ ರಾಜ್ಯದಲ್ಲಿ ₹ 300 ಕೋಟಿ ವ್ಯವಹಾರಗಳಾಗುತ್ತವೆ. ಒಳನಾಡಿನ ಮೀನುಗಾರಿಕೆಯೊಂದಿಗೆ ಆಲಂಕಾರಿಕ ಮೀನು ಸಾಕಣೆಯನ್ನೂ ರೈತರು ಮಾಡಬಹುದು’ ಎಂದು ಒಳನಾಡು ಮೀನುಗಾರಿಕಾ ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ಕೆ.ಬಿ. ರಾಜಣ್ಣ ತಿಳಿಸಿದರು.

ಕೆ.ಜಿ ತೂಗುವ ಸೀಬೆ: ತೋಟಗಾರಿಕೆ ವಿಸ್ತರಣೆ ಮತ್ತು ಸಂಶೋಧನಾ ಕೇಂದ್ರದ ಪ್ರದರ್ಶನದಲ್ಲಿದ್ದ ಒಂದು ಕೆ.ಜಿ ಭಾರದ ಸೀಬೆಯನ್ನು ಎತ್ತಿಕೊಂಡು ವೀಕ್ಷಕರು ಫೋಟೊ, ಸೆಲ್ಫಿ ತೆಗೆದುಕೊಂಡರು. ಕೋಲಾರ ಚಡ್ಡನಹಳ್ಳಿಯ ರೈತ ಜಯರಾಮ್‌ ಬೆಳೆದಿದ್ದ ‘ತೈವಾನ್ ಸೀಬೆ’ ಇದಾಗಿದೆ.

ಮೇಳದಲ್ಲಿ ರೈತರೊಬ್ಬರು ಕಣ್ಣು ತಂಪಾಗಿಸುವ ಅಲೆವರಾ ಕನ್ನಡಕ ಮಾರಾಟ ಮಾಡುತ್ತಿದ್ದರು. ಅದನ್ನು ಧರಿಸಿ, ಅನುಭವಿಸಿ ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು.

ಆಹಾರ ಮೇಳದಲ್ಲಿ ದಾವಣಗೆರೆ ಬೆಣ್ಣೆದೋಸೆ, ಪಡ್ಡು, ಮಂಡಕ್ಕಿ ಮಿರ್ಚಿ, ತುಮಕೂರು ತಟ್ಟೆ ಇಡ್ಲಿ, ಮಂಗಳೂರು ಮೀನು, ಉತ್ತರ ಕರ್ನಾಟಕದ ರೊಟ್ಟಿ, ಎಣಗಾಯಿ ಪಲ್ಯ ಹುಬ್ಬಳ್ಳಿಯ ಗಿರ್ಮಿಟ್‌ ಮಿರ್ಚಿ, ಮೇಲುಕೋಟೆ ಪುಳಿಯೋಗರೆ, ಬೆಂಗಳೂರು ಬಾಡೂಟ, ದಮ್‌ ಬಿರಿಯಾನಿ, ಗೌಡ್ರಮನೆ ಹಳ್ಳಿಯೂಟ ಹೀಗೆ ತರಹೇವಾರಿ ತಿನಿಸುಗಳ ಮಳಿಗೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರು ಕಂಡು ಬಂದರು. ಶನಿವಾರ ₹ 1.38 ಕೋಟಿ ವಹಿವಾಟು ನಡೆದಿದೆ.

ಕೃಷಿಮೇಳದಲ್ಲಿ ಆಲಂಕಾರಿಕ ಮೀನುಗಳ ಸಣ್ಣ ಪ್ಯಾಕೆಟ್‌ ಖರೀದಿಗೆ ಜನರು ಹೆಚ್ಚು ಒಲವು ತೋರಿದರು. –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಕೃಷಿಮೇಳದಲ್ಲಿ ಆಲಂಕಾರಿಕ ಮೀನುಗಳ ಸಣ್ಣ ಪ್ಯಾಕೆಟ್‌ ಖರೀದಿಗೆ ಜನರು ಹೆಚ್ಚು ಒಲವು ತೋರಿದರು. –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಜಿಕೆವಿಕೆಯಲ್ಲಿ ಎರಡನೇ ದಿನ ಕೃಷಿಮೇಳದಲ್ಲಿ ಭಾರಿ ಗಾತ್ರದ ತೈವಾನ್ ಸೀಬೆ ಆಕರ್ಷಣೆಯಾಗಿತ್ತು . –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಜಿಕೆವಿಕೆಯಲ್ಲಿ ಎರಡನೇ ದಿನ ಕೃಷಿಮೇಳದಲ್ಲಿ ಭಾರಿ ಗಾತ್ರದ ತೈವಾನ್ ಸೀಬೆ ಆಕರ್ಷಣೆಯಾಗಿತ್ತು . –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳದಲ್ಲಿ ಶನಿವಾರ ತುಂಬಿದ ಜನಸಾಗರ –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳದಲ್ಲಿ ಶನಿವಾರ ತುಂಬಿದ ಜನಸಾಗರ –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಕೃಷಿಮೇಳದಲ್ಲಿ ಕಣ್ಮನ ಸೆಳೆದ ಉದ್ದ ಕಿವಿಯ ಬೆಂಗಳೂರು ಮೇಕೆ. –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಕೃಷಿಮೇಳದಲ್ಲಿ ಕಣ್ಮನ ಸೆಳೆದ ಉದ್ದ ಕಿವಿಯ ಬೆಂಗಳೂರು ಮೇಕೆ. –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್

ದೊಡ್ಡ ಕಿವಿಯ ಮೇಕೆ ಶೋಕಿಗಾಗಿ ನಾಯಿ ಸಾಕುವಂತೆ ಮೇಕೆಗಳನ್ನೂ ಸಾಕುವ ‘ಟ್ರೆಂಡ್‌’ ಬೆಂಗಳೂರು ನಗರದಲ್ಲಿ ಬೆಳೆಯುತ್ತಿದೆ. ಅಂಥ ಮೇಕೆಗಳ ಪ್ರದರ್ಶನ ಕೃಷಿಮೇಳದಲ್ಲಿದೆ. ಅದರಲ್ಲಿ ಉದ್ದಕಿವಿಯ ಮೇಕೆ ತಳಿಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಒಂದೂವರೆ ಅಡಿಗಿಂತಲೂ ಉದ್ದವಾದ ಕಿವಿಯೇ ಬೇರೆ ಮೇಕೆಗಳಿಗಿಂತ ಭಿನ್ನ ಎಂಬುದನ್ನು ತೋರಿಸಿತ್ತು. ಎತ್ತರ ಮತ್ತು ಉದ್ದದಲ್ಲಿಯೂ ಈ ಮೇಕೆ ತಳಿಗಳಿಗೆ ಸಾಟಿ ಇಲ್ಲದಂತೆ ಕಂಡಿತು. ‘ಉದ್ದಕಿವಿಯ ಮೇಕೆಯು ಬೆಂಗಳೂರಿನದ್ದೇ ಆಗಿದ್ದರೂ ರಾಜ್ಯದಲ್ಲಿ ಅಷ್ಟು ಪ್ರಚಾರವಿಲ್ಲ. ದೇಶದ ವಿವಿಧ ರಾಜ್ಯಗಳಿಂದ ಬಂದು ಈ ತಳಿಗಳನ್ನು ಒಯ್ಯುತ್ತಿದ್ದಾರೆ. ಮೇಕೆ ಪ್ರದರ್ಶನದಲ್ಲಿ ಉದ್ದಕಿವಿಯ ಮೇಕೆಗಳೇ ಮೆರೆಯುತ್ತಿರುತ್ತವೆ’ ಎಂದು ಸಾಕಣೆದಾರ ಅಬ್ರಾರ್‌ ತಿಳಿಸಿದರು. ‘ಮರಿಗೆ ₹ 30 ಸಾವಿರದಿಂದ ₹ 50 ಸಾವಿರ ಇದೆ. ದೊಡ್ಡ ಮೇಕೆಗೆ ₹ 80 ಸಾವಿರವರೆಗೂ ದರವಿದೆ ಇದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT