ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದಕ್ಕೆ ಕರ್ನಾಟಕ ಬಿಟ್ಟು ಬೇರೆಡೆ ಪ್ರೋತ್ಸಾಹವಿಲ್ಲ: ಭಕ್ತವತ್ಸಲ ರೆಡ್ಡಿ ವಿಷಾದ

Published 27 ನವೆಂಬರ್ 2023, 16:13 IST
Last Updated 27 ನವೆಂಬರ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು: ಜಾನಪದ ಕಲೆಗಳು ದಕ್ಷಿಣ ಭಾರತದಲ್ಲಿ ಶ್ರೀಮಂತವಾಗಿವೆ. ಆದರೆ, ಅವುಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ನಡೆಯುತ್ತಿಲ್ಲ ಎಂದು ಜನಪದ ವಿದ್ವಾಂಸ ಎನ್‌. ಭಕ್ತವತ್ಸಲ ರೆಡ್ಡಿ ವಿಷಾದಿಸಿದರು.

ನಗರದಲ್ಲಿ ಸೋಮವಾರ ನಡೆದ ತೂರ್ಪು ಭಾಗವತಂ ಕಲಾವಿದ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್‌ ಅವರಿಗೆ ‘ಎಚ್‌.ಎಲ್‌. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ‘ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಜಾನಪದ ಪರಿಷತ್ತು ಇದೆ, ಜಾನಪದ ಅಕಾಡೆಮಿ ಇದೆ, ಜಾನಪದ ವಿಶ್ವವಿದ್ಯಾಲಯವಿದೆ. ಎಲ್ಲ ಜನಪದ ಕಲಾ ಪ್ರಕಾರಗಳಿಗೆ ಇಲ್ಲಿ ಪ್ರಾಮುಖ್ಯ ನೀಡಲಾಗಿದೆ. ಉಳಿದ ರಾಜ್ಯಗಳಲ್ಲಿಯೂ ಈ ಕೆಲಸ ಆಗಬೇಕಿದೆ ಎಂದು ಹೇಳಿದರು.

‘ಇಂದು ಪ್ರಶಸ್ತಿ ಸ್ವೀಕರಿಸಿರುವ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್‌ ಅವರು ಆಂಧ್ರಪ್ರದೇಶದ ‘ತೂರ್ಪು ಭಾಗವತಂ’ ಎಂಬ ಪ್ರಾಚೀನ ಕಲೆಯ ಮೃದಂಗ ಕಲಾವಿದರು. ಅವರು ಏಕಕಾಲಕ್ಕೆ ಮೂರು ಮೃದಂಗಗಳನ್ನು ನುಡಿಸುತ್ತಾ ಹಾಡಬಲ್ಲ ವಿಶಿಷ್ಟ ಪ್ರತಿಭೆ. ವಿಶಾಖಪಟ್ಟಣಂ ಮತ್ತು ವಿಜಯನಗರಂ ಸುತ್ತಮುತ್ತಲಿನ ಪರಿಸರದಲ್ಲಷ್ಟೇ ಇರುವ ಅಳಿವಿನಂಚಿಗೆ ತಲುಪಿರುವ ಈ ಕಲೆಯನ್ನು ಜಗನ್ನಾದ ರಾವ್‌ ಕುಟುಂಬ ಉಳಿಸಿಕೊಂಡು ಬಂದಿದೆ’ ಎಂದು ವಿವರಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ, ‘ಜನಪದಕ್ಕೆ ಇತ್ತೀಚೆಗೆ ಸರ್ಕಾರ, ವಿವಿಧ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ. ಹಿಂದೆ ಇಂಥ ಪ್ರೋತ್ಸಾಹ ಇರಲಿಲ್ಲ. ಆ ಕಾಲದಲ್ಲಿ ಜಾನಪದ ಪರಿಷತ್ ಕಟ್ಟಿ ಜನಪದಲೋಕವನ್ನೇ ಅನಾವರಣಗೊಳಿಸಿದ ನಾಗೇಗೌಡರ ಕೆಲಸ ದೇಶದಲ್ಲೆಲ್ಲೂ ಆಗಿಲ್ಲ. ನಮ್ಮ ಜನಪದ ಕಲೆಗಳನ್ನು ದೇಶ, ವಿದೇಶದ ಜನರಿಗೆ ಪರಿಚಯಿಸುವ ಕೆಲಸ ಅವರಿಂದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಆದಿಚುಂಚನಗಿರಿ ಸಂಸ್ಥಾನದ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಶಿ. ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ್‌, ಪರಿಷತ್ತಿನ ನಗರ ಜಿಲ್ಲಾಧ್ಯಕ್ಷ ಟಿ.ತಿಮ್ಮೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತ ಪಾಟೀಲ್‌ ಇದ್ದರು.

ಕಾರ್ಯಕ್ರಮದ ಬಳಿಕ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್‌ ಮತ್ತು ತಂಡದಿಂದ ‘ಸತ್ಯಭಾಮಾ ಕಲಾಪ’ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT