ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tiger Claw | ಚಿನ್ನಾಭರಣ ವ್ಯಾಪಾರಿಗಳಿಗೆ ಹಿಂಸೆ: ಟಿ.ಎ.ಶರವಣ ಆರೋಪ

Published 28 ಅಕ್ಟೋಬರ್ 2023, 18:56 IST
Last Updated 28 ಅಕ್ಟೋಬರ್ 2023, 18:56 IST
ಅಕ್ಷರ ಗಾತ್ರ

ಬೆಂಗಳೂರು: ‘ಹುಲಿ ಉಗುರಿನ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಮಾಯಕ ಚಿನ್ನಾಭರಣ ವ್ಯಾಪಾರಿಗಳನ್ನು ಹಿಂಸಿಸಲು ಪ್ರಾರಂಭಿಸಿದ್ದಾರೆ. ಇದು ಮುಂದುವರಿದರೆ ಇಲಾಖೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಲಿ ಉಗುರು ಹಾಗೂ ಚರ್ಮ, ಜಿಂಕೆ ಕೊಂಬು ಸೇರಿ ವಿವಿಧ ವನ್ಯಜೀವಿ ಉತ್ಪನ್ನಗಳ ಶೋಧಕ್ಕೆ ಅಧಿಕಾರಿಗಳು ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಜಾಗೃತಿ ಮೂಡಿಸಬೇಕಾದ ಅವರು ಹುಲಿಗಿಂತ ವೇಗವಾಗಿ ದಾಳಿ ಮಾಡಿ, ಭಯ ಹುಟ್ಟಿಸುತ್ತಿದ್ದಾರೆ. ಚಿನ್ನಾಭರಣ ವ್ಯಾಪಾರಿಗಳ ಮೇಲೂ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ತುಮಕೂರಿನಲ್ಲಿ ಅಂಗಡಿ ಸಿಬ್ಬಂದಿಯನ್ನು ಬಲವಂತವಾಗಿ ಎಳೆದೊಯ್ದು ಹಿಂಸಿಸಿದ್ದು ಖಂಡನೀಯ’ ಎಂದು ಹೇಳಿದರು. 

‘ಸಿಕ್ಕ ಹುಲಿ ಉಗುರು ನಕಲಿಯೊ, ಅಸಲಿಯೊ ಎಂದು ಎಫ್.ಎಸ್.ಎಲ್ ಪ್ರಯೋಗಾಲಯದ ವರದಿ ನೀಡುವ ಮೊದಲೇ ಕಾನೂನು ಕ್ರಮ ಕೈಗೊಳ್ಳುತ್ತಿರುವುದು ವಿಪರ್ಯಾಸ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಸಿಂಥೆಟಿಕ್‌ ಹಾಗೂ ಹಸುವಿನ ಕೊಂಬಿನಲ್ಲಿ ತಯಾರಿಸಿದ ಹುಲಿ ಉಗುರು ಸಿಗುತ್ತವೆ. ಆದ್ದರಿಂದ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟ ಬಳಿಕವಷ್ಟೇ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯವನ್ನು ಬರಗಾಲ ಸೇರಿದಂತೆ ವಿವಿಧ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರ ಅದರ ಕಡೆಗೆ ಗಮನ ನೀಡಬೇಕು’ ಎಂದರು.

‘ಆನೆ ಕೂದಲ ಮಾದರಿ ಉಂಗುರ’
‘ಹುಲಿ ಬಳಿ ಹೋಗಿ ಅದರ ಉಗುರನ್ನು ಪಡೆಯಲು ಸಾಧ್ಯವಿದೆಯೆ? ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಉಗುರಿಗೆ ಆಭರಣದಿಂದ ಪೆಂಡೆಂಟ್ ಮಾಡಿಸಿಕೊಳ್ಳುತ್ತಾರೆ. ಅಂತಹವರಿಗೂ ಇಲಾಖೆ ಅಧಿಕಾರಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ನಾನು ಕೂಡಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಆನೆ ಬಾಲದ ಕೂದಲು ಮಾದರಿಯ ಉಂಗುರ ಧರಿಸುತ್ತೇನೆ. ಕಪ್ಪು ಬಣ್ಣದ ಇದನ್ನು ಧರಿಸಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲವೆಂಬ ನಂಬಿಕೆಯಿದೆ’ ಎಂದು ಟಿ.ಎ.ಶರವಣ ಹೇಳಿದರು. ‘ಹುಲಿ ಉಗುರು ಸೇರಿ ವಿವಿಧ ವ್ಯನ್ಯಜೀವಿ ಉತ್ಪನ್ನಗಳನ್ನು ಹಿಂದಿರುಗಿಸಲು ಸರ್ಕಾರ ಕಾಲಾವಕಾಶ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT