ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟಿಗ್ರೇಟೆಡ್‌ ಟೌನ್‌ಶಿಪ್‌ಗೆ ವಿರೋಧ: ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಆಗ್ರಹ

Published 10 ಫೆಬ್ರುವರಿ 2024, 15:48 IST
Last Updated 10 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಕುಣಿಗಲ್ ಕುದುರೆ ಫಾರಂನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಿಸಲು ಉದ್ದೇಶಿಸಿರುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ವೃಕ್ಷ ಫೌಂಡೇಷನ್ ಮತ್ತು ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿ ಆಗ್ರಹಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ನಾಗಣ್ಣ, ‘ಕುಣಿಗಲ್‌ ತಾಲ್ಲೂಕಿನ ಜನ ಅಭಿವೃದ್ಧಿ ವಿರೋಧಿಗಳಲ್ಲ. ಸರ್ಕಾರ ಇಲ್ಲಿನ ಯುವ ಸಮುದಾಯಕ್ಕೆ ಉದ್ಯೋಗ ನೀಡಲು ಕೈಗಾರಿಕೆ, ಐಟಿ–ಬಿಟಿ ಕಂಪನಿಗಳನ್ನು ಸ್ಥಾಪಿಸುವ ಉದ್ದೇಶವಿದ್ದರೆ, ಕುಣಿಗಲ್‌ ತಾಲ್ಲೂಕಿನ ಬೇರೆ ಕಡೆ, ಖಾಲಿ ಇರುವ ಜಾಗದಲ್ಲಿ ಸ್ಥಾಪಿಸಬಹುದು. ಅದನ್ನು ಬಿಟ್ಟು ಐತಿಹಾಸಿಕ ಪರಂಪರೆ ಹೊಂದಿರುವ ಕುದುರೆ ಫಾರಂನಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಿಸುವ ಸರ್ಕಾರದ ನಿಲುವಿಗೆ ಕುಣಿಗಲ್‌ನ ಪ್ರತಿಯೊಬ್ಬ ಸ್ವಾಭಿಮಾನಿ ನಾಗರಿಕನ ವಿರೋಧವಿದೆ’ ಎಂದು ತಿಳಿಸಿದರು.

‘ಕುಣಿಗಲ್‌ ಕುದುರೆ ಎಂದು ಪ್ರಸಿದ್ಧಿ ಪಡೆದು, ವಿಶ್ವಕ್ಕೆ ಉತ್ತಮ ತಳಿಯ ಕುದುರೆಗಳನ್ನು ನೀಡಿರುವ ಈ ಪ್ರದೇಶವನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಫಾರಂ 400 ವರ್ಷಗಳ ಇತಿಹಾಸ ಹೊಂದಿದ್ದು, ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕಾರಣ 1961ರ ಕಲಂ 2 ಮತ್ತು 3ರ ಅಡಿಯಲ್ಲಿ ಕರ್ನಾಟಕ ಐತಿಹಾಸಿಕ ಸ್ಮಾರಕಗಳ ಅಧಿನಿಯಮದ ಅನ್ವಯ ಪಾರಂಪರಿಕ ಸ್ಥಳವೆಂದು ಘೋಷಿಸಬೇಕು. ಇಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸಲು ಜಾಗ ಮಂಜೂರು ಮಾಡಬಾರದು’ ಎಂದು ಒತ್ತಾಯಿಸಿದರು.

‘421 ಎಕರೆ ಪ್ರದೇಶದಲ್ಲಿರುವ ಈ ಫಾರಂನಲ್ಲಿ ಸದ್ಯ 185 ಕುದುರೆಗಳಿದ್ದು, ಜತೆಗೆ 120 ಜನ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಈ ಪಾರಂಪರಿಕ ಕುದುರೆ ಫಾರಂ ಯಥಾಸ್ಥಿತಿಯಲ್ಲಿ ಉಳಿಸಿ ಬೆಳೆಸಬೇಕು. ಈ ಬಗ್ಗೆ ಈಗಾಗಲೇ ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT