ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವ್ಹೀಲೆ: ಆರ್‌ಸಿ, ಡಿಎಲ್‌ ರದ್ದು– ಎಚ್ಚರಿಕೆ

Published 18 ಜೂನ್ 2023, 21:53 IST
Last Updated 18 ಜೂನ್ 2023, 21:53 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ವಿಭಾಗದ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವ್ಹೀಲೆ ನಡೆಸುತ್ತಿದ್ದ ಯುವಕರ ಬೈಕ್‌ಗಳನ್ನು ಪೊಲೀಸ್‌ ಜಪ್ತಿ ಮಾಡಿಕೊಂಡಿದ್ದಾರೆ.

ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 26 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 26 ಆರೋಪಿಗಳ ಪೈಕಿ 21 ಮಂದಿ 18 ವರ್ಷಕ್ಕಿಂತ ಮೇಲ್ಪಟ್ಟಿದ್ದು, ಉಳಿದ ಐವರು ಬಾಲಕರು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೆಲವು ತಿಂಗಳಿಂದ ನಿರಂತರವಾಗಿ ವ್ಹೀಲೆ ನಡೆಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ, 6 ಆಕ್ವೀವ್‌ ಹೊಂಡ, 1 ಸುಜುಕಿ ಆಕ್ಸೆಸ್‌, 15 ಡಿಯೊ, 2 ಯಮಹಾ ರೇ ಸ್ಕೂಟರ್‌, 1 ಬಜಾಜ್‌ ಪ್ಲಾಟಿನಂ, 1 ಜುಪಿಟರ್‌ ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೆಲವು ರಸ್ತೆಗಳು ಉತ್ತಮವಾಗಿವೆ. ಆ ರಸ್ತೆಗಳಲ್ಲಿ ಯುವಕರು ತಮ್ಮ ಬೈಕ್‌ಗಳಲ್ಲಿ ವ್ಹೀಲೆ ನಡೆಸುತ್ತಿದ್ದರು. ಚಾಮರಾಜಪೇಟೆ 5ನೇ ಮುಖ್ಯರಸ್ತೆ, ಹನುಮಂತನಗರ 7ನೇ ಕ್ರಾಸ್, ಜೆ.ಪಿ. ನಗರದ ಅಂಡರ್‌ಪಾಸ್‌, ಇಲಿಯಾಸ್‌ ನಗರ, ಕೆ.ಎಸ್‌ ಲೇಔಟ್‌ನ ರಿಂಗ್‌ ರಸ್ತೆ, ಕೆ.ಎಸ್‌. ಲೇಔಟ್‌ ಜಂಕ್ಷನ್‌, ಅಂಜನಾಪುರ, ಚಿಕ್ಕೇಗೌಡನ ಪಾಳ್ಯ, ಸೋಮ್‌ಪುರ, 80 ಅಡಿ ರಸ್ತೆಯ ಗುಬ್ಬಲಾಳ, ಅಂಜನಾಪುರ, ಜಂಬೂಸವಾರಿಯ ದಿಣ್ಣೆ ಮುಖ್ಯರಸ್ತೆಯ, ಆರ್‌ಬಿಐ ಲೇಔಟ್‌ಗಳಲ್ಲಿ ಯುವಕರು ವ್ಹೀಲೆ ನಡೆಸುತ್ತಿದ್ದರು. ಆ ದೃಶ್ಯವನ್ನು ಸಾರ್ವಜನಿಕರೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕೆಲವು ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಕಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.

‘ಎಲ್ಲ ಆರೋಪಿಗಳ ವಿರುದ್ಧ 41(ಎ) ಸಿಆರ್‌ಪಿಸಿ ಪ್ರಕಾರ ನೋಟಿಸ್‌ ನೀಡಿ ಮುಚ್ಚಳಿಕೆ ಪತ್ರವನ್ನು ಪಡೆದು ಅಂತಿಮ ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎರಡನೇ ಬಾರಿ ವ್ಹೀಲೆ ಪ್ರಕರಣಗಳಲ್ಲಿ ಇವರು ಭಾಗಿಯಾದರೆ, ಹೆಚ್ಚುವರಿಯಾಗಿ ಸಿಆರ್‌ಪಿಸಿ ಕಲಂ 107ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಆರೋಪಿಗಳಿಗೆ ನ್ಯಾಯಾಲಯವು ದಂಡ ವಿಧಿಸಿದರೆ ಅಂತಹ ವಾಹನಗಳ ಆರ್‌.ಸಿ ಹಾಗೂ ಚಾಲಕನ ಚಾಲನಾ ಪರವಾನಗಿ (ಡಿಎಲ್‌) ರದ್ದು ಪಡಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT