ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ ನಡೆಸಿದ ತುಷಾರ್‌ ಗಿರಿನಾಥ್‌

Published 21 ಡಿಸೆಂಬರ್ 2023, 16:09 IST
Last Updated 21 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪರಿಶೀಲಿಸಿದರು.

ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು(ಸೂಪರ್‌ ಚೆಕ್ಕಿಂಗ್‌) ಗುರುವಾರ ನಗರದ ವಿವಿಧೆಡೆ ಸಂಚರಿಸಿದರು. 

ನ.27ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿ.9ರವರೆಗೆ ಆಕ್ಷೇಪಣೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಇದಾದ ನಂತರ ಬಿಎಲ್‌ಓ ಮತ್ತು ಮೇಲ್ವಿಚಾರಕರು ಮತದಾರರ ಪಟ್ಟಿ ಪರಿಷ್ಕರಿಸುವ ಕಾರ್ಯ ಮಾಡಿದ್ದಾರೆ. ಕೆಲ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಅವರು ಪರಿಷ್ಕರಿಸಿರುವ ಪಟ್ಟಿಯನ್ನು ‘ಸೂಪರ್‌ ಚೆಕ್ಕಿಂಗ್’ ಮಾಡಿದರು.

ಶಾಂತಿನಗರ ಹಾಗೂ ಶಿವಾಜಿನಗರದ ವಿಧಾನಸಭೆ ಕ್ಷೇತ್ರದಲ್ಲಿ ನಮೂನೆ-6, ನಮೂನೆ-7 ಹಾಗೂ ನಮೂನೆ-8 ಅನ್ನು ಪರಿಶೀಲಿಸಿ ಅಧಿಕಾರಿಗಳು ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಮಾರ್ಗದರ್ಶನ ನೀಡಲು ತುಷಾರ್‌ ಗಿರಿನಾಥ್‌ ಸೂಚಿಸಿದರು.

ಹೆಬ್ಬಾಳ ವಿಧಾನಸಭೆ ಕ್ಷೆತ್ರದ ಸಂಜಯನಗರ, ನಾಗಶೆಟ್ಟಿಹಳ್ಳಿಯ ಟೀಚರ್ಸ್ ಕಾಲೊನಿ, ಯಲಹಂಕ ವಿಧಾನ ಸಭೆ ಕ್ಷೇತ್ರದ ಪೂರ್ವಾಂಕರ ಅಪಾರ್ಟ್‌ಮೆಂಟ್‌, ಯಲಹಂಕದ ರೈಲ್ವೆ ವೀಲ್ ಫ್ಯಾಕ್ಟರಿ ಕ್ವಾರ್ಟಸ್‌ಗಳಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿ, ಪರಿಷ್ಕೃತ ಪಟ್ಟಿಯನ್ನು ಪರಿಶೀಲಿಸಿದರು.

‘ಸೂಪರ್ ಚೆಕ್ಕಿಂಗ್ ಮಾಡಿ ಎಲ್ಲವೂ ಸರಿಯಿದ್ದು, ನಮೂನೆಗಳಿಗೆ ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜೊತೆಗೆ ಎರಡು ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯ ಜೊತೆ ಮಾತನಾಡಿ, ಒಂದು ಕಡೆ ಹೆಸರನ್ನು ತೆಗೆಸಬೇಕು’ ಎಂದು ಸೂಚಿಸಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಉತ್ತರ) ಸ್ನೇಹಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT