ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಐಡಿಯಲ್ಲಿ ಎರಡು ವಿಶೇಷ ವಿಭಾಗ ರಚನೆ

Published 20 ಡಿಸೆಂಬರ್ 2023, 15:23 IST
Last Updated 20 ಡಿಸೆಂಬರ್ 2023, 15:23 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರಿಗೆ ಅಧಿಕ ಲಾಭದ ಆಮಿಷವೊಡ್ಡಿ ಹಣ ದೋಚುತ್ತಿರುವ ಪ್ರಕರಣಗಳು ರಾಜ್ಯದ‌ಲ್ಲಿ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ, ಪ್ರಕರಣಗಳ ನಿಯಂತ್ರಣಕ್ಕೆ ಅಪರಾಧ ತನಿಖಾ ದಳವು (ಸಿಐಡಿ) ಎರಡು ವಿಶೇಷ ವಿಭಾಗಗಳನ್ನು ರಚಿಸಿದೆ.

ಆರ್ಥಿಕ ವಂಚನೆಗಳ ತನಿಖೆಗೆ ‘ಠೇವಣಿ ವಂಚನೆ ವಿಭಾಗ’ ಹಾಗೂ ವೃತ್ತಿಪರ ಕ್ರಿಮಿನಲ್‌ಗಳ ಮೇಲೆ ಕಣ್ಗಾವಲಿಡಲು ‘ಕ್ರಿಮಿನಲ್ ಗುಪ್ತದಳ ವಿಭಾಗ’ ರಚಿಸಲಾಗಿದೆ.

ಸಿಐಡಿಯಲ್ಲಿ ಹೊಸ ಎರಡು ವಿಭಾಗಗಳೂ ಸೇರಿದಂತೆ ಸದ್ಯ ಮೂರು ವಿಭಾಗಗಳು ಕೆಲಸ ಮಾಡುತ್ತಿವೆ. ರಾಜ್ಯ ವ್ಯಾಪ್ತಿ ಕಾರ್ಯಾಚರಣೆ ನಡೆಸಲಿವೆ. ಆರ್ಥಿಕ ವಂಚನೆ ಪ್ರಕರಣ ಪತ್ತೆಗೆ ಎರಡು ವಿಭಾಗಕ್ಕೂ ಎಸ್ಪಿ ದರ್ಜೆಯ ಅಧಿಕಾರಿಗಳು ನೇತೃತ್ವವಹಿಸಲಿದ್ದಾರೆ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಲ್ಲಿ 903 ಪ್ರಕರಣಗಳು ತನಿಖೆ ಹಂತದಲ್ಲಿದ್ದವು. ಅದರಲ್ಲಿ, 290 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದೆ. ಉಳಿದಂತೆ 615 ಪ್ರಕರಣ ತನಿಖೆ ನಡೆಯುತ್ತಿದೆ. ಹೊಸ ವಿಭಾಗಗಳ ರಚನೆಯಿಂದ ಪ್ರಕರಣಗಳ ತ್ವರಿತ ತನಿಖೆಗೆ ಸಹಕಾರಿ ಆಗಲಿದೆ ಎಂದು ಹೇಳಿದರು.

‘ಸ್ಥಳೀಯ ಠಾಣೆಗಳ ರೌಡಿಪಟ್ಟಿಯಲ್ಲಿ ಹೆಸರಿರುವವರ ಮೇಲೆ ನಿಗಾ ವಹಿಸುವುದು ಹಾಗೂ ಕ್ರಿಮಿನಲ್‌ಗಳ ಚಲನವಲನ ಮಾಹಿತಿ ಸಂಗ್ರಹಕ್ಕೆ ಕ್ರಿಮಿನಲ್‌ ಗುಪ್ತದಳ ವಿಭಾಗ ಕೆಲಸ ಮಾಡಲಿದೆ. ಸಿಐಡಿಯಲ್ಲಿ 62 ಡಿವೈಎಸ್‌ಪಿ ಹುದ್ದೆಗಳಿದ್ದವು. ಎರಡು ಹುದ್ದೆಗಳನ್ನು ವಾಪಸ್‌ ನೀಡಿ, ಎಸ್‌ಪಿ ಹುದ್ದೆಗಳನ್ನು ಸೃಜಿಸಲಾಗಿದೆ. ರಾಜ್ಯದಲ್ಲಿ ಆರು ವಲಯಗಳಿದ್ದು ಡಿವೈಎಸ್ಪಿ ನೇತೃತ್ವದಲ್ಲಿ ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ತಂಡಗಳು ಕೆಲಸ ಮಾಡುತ್ತಿವೆ. ಡಿವೈಎಸ್ಪಿ ನೇತೃತ್ವದಲ್ಲಿ ವಲಯವಾರು ದಾಖಲಾದ ಪ್ರಕರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT