ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸಂಕುಲದ ಸಂಕಷ್ಟಗಳು ಜೀವಂತ: ವಿಮರ್ಶಕ ಎಸ್.ಆರ್. ವಿಜಯಶಂಕರ ಕಳವಳ

ವೈದೇಹಿ ಸಾಹಿತ್ಯ ಕಾರ್ಯಕ್ರಮದಲ್ಲಿ ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿಮತ
Published 2 ಜೂನ್ 2024, 15:37 IST
Last Updated 2 ಜೂನ್ 2024, 15:37 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಸಂಸ್ಕೃತಿ ಮತ್ತು ಸ್ತ್ರೀಯರನ್ನು ಮಾತೆಯ ಸ್ಥಾನದಲ್ಲಿಟ್ಟು, ಗೌರವದಿಂದ ಕಾಣುವ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲಾಗುತ್ತದೆ. ಆದರೆ, ಈ ನೆಲದ ಸ್ತ್ರೀ ಸಂಕುಲದ ಸಂಕಷ್ಟಗಳು ಹಾಗೂ ನೋವಿನ ಸಂಕೋಲೆಗಳು ಜೀವಂತವಾಗಿಯೇ ಉಳಿದಿವೆ’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ ಕಳವಳ ವ್ಯಕ್ತಪಡಿಸಿದರು.

ವೈದೇಹಿ ಅಭಿಮಾನಿಗಳ ಬಳಗ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ವೈದೇಹಿ ಸಾಹಿತ್ಯ; ‘ಸೀಮಾಂತೆ ಅಲ್ಲ ಸೀಮಾತೀತೆ’, ‘ನೆನಪು ಏಕತಾರಿ’, ‘ಹೆಗಲಲಿದೆ ಸಾವಿರ ಸವಾಲು’ ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಕಾಲ ಬದಲಾದರೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ. ಇದರಿಂದಾಗಿ ಈಗಲೂ ಸ್ತ್ರೀಯರು ಧೈರ್ಯದಿಂದ ರಾತ್ರಿ ವೇಳೆ ಓಡಾಡುವ ವಾತಾವರಣವಿಲ್ಲ. ನನ್ನ ಪತ್ನಿ ಕಾಲೇಜುವೊಂದರಲ್ಲಿ ಪ್ರಾಧ್ಯಾಪಕಿಯಾಗಿ, ಬಳಿಕ ಪ್ರಾಚಾರ್ಯೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾಳೆ. ಆದರೆ, ಊರಿನಿಂದ ಹೊರಟ ರೈಲು ಮಲ್ಲೇಶ್ವರವನ್ನು ರಾತ್ರಿ ತಲುಪಿದಲ್ಲಿ, ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ಮನೆಗೆ ನಡೆದು ಸಾಗಲು ಆಕೆ ಹಿಂಜರಿಯುತ್ತಾಳೆ. ಇಷ್ಟು ಅಧೈರ್ಯದ ವಾತಾವರಣಕ್ಕೆ ಬಂದು ತಲುಪಿದ್ದೇವೆ’ ಎಂದು ಹೇಳಿದರು. 

‘ಇತ್ತೀಚೆಗೆ ನಾನು ಮತ್ತು ಪತ್ನಿ ಇಂಗ್ಲೆಂಡ್‌ನ ಒಂದು ಉದ್ಯಾನದಲ್ಲಿ ರಾತ್ರಿ 12.45ಕ್ಕೆ ಒಂದು ಸಂಗೀತ ಕಛೇರಿ ಮುಗಿಸಿ, 2.5 ಮೈಲು ನಿರ್ಜನ ಪ್ರದೇಶದಲ್ಲಿಯೂ ನಡೆದು ನಾವು ತಂಗಿದ್ದ ಸ್ಥಳ ತಲುಪಿದೆವು. ಆ ವಾತಾವರಣ ನಮ್ಮೂರಿನಲ್ಲಿ ಯಾಕಿಲ್ಲ ಎಂಬುವುದು ಸದಾ ಮನಸ್ಸಿಗೆ ಕಾಡುತ್ತಿದೆ’ ಎಂದರು.

ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಇಡೀ ಲೋಕಕ್ಕೆ ಹೆಣ್ಣಿನ ಅಂತಃಕರಣದ ಚಿಕಿತ್ಸೆ ಬೇಕಿದೆ. ಹೆಣ್ಣಿನ ಅನುಭವ ಲೋಕವು ಪುರುಷ ಅನುಭವ ಲೋಕಕ್ಕಿಂತ ಭಿನ್ನವಾಗಿ ಇರಲಿದೆ. ಆದರೆ, ಮಾನವಾನುಭವವಾಗಿ ಪುರುಷ ಅನುಭವ ಲೋಕದಷ್ಟೇ ಮುಖ್ಯವಾದದ್ದಾಗಿದೆ. ಪುರುಷರಿಗೆ ಮತ್ತು ಲೋಕಕ್ಕೆ ಅಪರಿಚಿತವಾದ ಹೆಣ್ಣಿನ ಒಳಲೋಕವನ್ನು ಅದರ ಎಲ್ಲ ಬಣ್ಣಗಳೊಂದಿಗೆ, ಪದರಗಳೊಂದಿಗೆ, ಜೀವಂತಿಕೆಯೊಂದಿಗೆ ಮತ್ತು ಅದರ ಎಲ್ಲ ಶಕ್ತಿಯೊಂದಿಗೆ ವೈದೇಹಿಯವರ ಸಾಹಿತ್ಯ ಕಾಣಿಸುತ್ತದೆ’ ಎಂದು ಹೇಳಿದರು.

ವಿಮರ್ಶಕ ಬಸವರಾಜ ಕಲ್ಗುಡಿ, ‘ಎರಡನೇ ಮಹಾಯುದ್ಧದಲ್ಲಿ ನಿಶ್ಯಬ್ದವಾಗಿ ನೋವು ಅನುಭವಿಸಿದವಳು ಹೆಣ್ಣು. ಆದರೆ, ಈ ಬಗ್ಗೆ ಯಾರೂ ಬರೆದಿಲ್ಲ. ಯುದ್ಧ, ಸಾವು, ಸೈನಿಕರು, ಗೆಲುವು ಹೀಗೆ ಪುರುಷ ಕೇಂದ್ರಿತ ಬರಹಗಳೇ ಬಂದವು. ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡ ಹೆಣ್ಣಿನ ಯಾತನೆ ಕೇಳಿದವರಿಲ್ಲ. ಹೆಣ್ಣಿನ ಅಸ್ತಿತ್ವ, ಬದುಕು, ಸ್ವಾತಂತ್ರ್ಯ ಹಾಗೂ ಒಂಟಿತನದ ಬಗ್ಗೆ ವೈದೇಹಿ ಅವರ ಸಾಹಿತ್ಯ ಕಟ್ಟಿಕೊಡುತ್ತದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT