ಕಸ ವಿಲೇವಾರಿ: ಕ್ರಿಯಾ ಯೋಜನೆ ವರದಿಗೆ ಸೂಚನೆ

7
ಬಾಗಲೂರು ಸಮಸ್ಯೆ; ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ತರಾಟೆ

ಕಸ ವಿಲೇವಾರಿ: ಕ್ರಿಯಾ ಯೋಜನೆ ವರದಿಗೆ ಸೂಚನೆ

Published:
Updated:
Deccan Herald

ನವದೆಹಲಿ: ಬೆಂಗಳೂರು ಹೊರವಲಯದ ಬಾಗಲೂರು ಗ್ರಾಮದ ಬಳಿಯಿರುವ ಕಲ್ಲಿನ ಕ್ವಾರಿಗಳಲ್ಲಿ ಕಸ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸೆಪ್ಟೆಂಬರ್ 30ರೊಳಗೆ ಕ್ರಿಯಾಯೋಜನೆಯ ಸಮಗ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೋಮವಾರ ಬಿಬಿಎಂಪಿಗೆ ಸೂಚಿಸಿದೆ.

‘ಕಸ ವಿಲೇವಾರಿಗಾಗಿ ಸಮರ್ಪಕ ಜೈವಿಕ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎನ್‌ಜಿಟಿ ನಿರಂತರ ಆದೇಶ ನೀಡಿದರೂ ಬಿಬಿಎಂಪಿ ಅದನ್ನು ಪಾಲಿಸುತ್ತಿಲ್ಲ’ ಎಂದು ಅರ್ಜಿದಾರ ಬಾಗಲೂರಿನ ವೆಂಕಟೇಶ್ ಅವರ ಪರ ವಕೀಲ ಶೈಲೇಶ್ ದೂರಿದಾಗ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಹಸಿರು ಪೀಠ ಈ ಗಡುವು ನೀಡಿ ಆದೇಶ ಹೊರಡಿಸಿತು.

‘ಜೈವಿಕ ವಿಲೇವಾರಿ ಕ್ರಮವು ಕಾರ್ಯಸಾಧುವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಭಿಪ್ರಾಯಪಟ್ಟಿದೆ. ಹೀಗಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಬಿಬಿಎಂಪಿ ಆಲೋಚಿಸುತ್ತಿದೆ’ ಎಂದು ಅಡ್ವೋಕೇಟ್‌ ಜನರಲ್ ಉದಯ್ ಹೊಳ್ಳ ತಿಳಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಾ.ಜವಾದ್ ರಹೀಂ, ‘ಎನ್‌ಜಿಟಿ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲೂ ನಿಮಗೆ ಸಾಧ್ಯವಾಗಿಲ್ಲ. ಮೇಲಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಭಿಪ್ರಾಯದ ಕುರಿತು ವಿವರಣೆಯನ್ನೂ ನೀಡದಿರುವುದು ಏಕೆ’ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಇದು ಘನ ತ್ಯಾಜ್ಯ ನಿರ್ವಹಣೆಯ ಕಾನೂನಿನ ಉಲ್ಲಂಘನೆಯಾಗಿದ್ದು, ನೀವು ಅಡ್ಡದಾರಿಯ ಮೊರೆ ಹೋಗುತ್ತಿರುವುದು ಸರಿಯಲ್ಲ’ ಎಂದು ವಿಚಾರಣೆ ವೇಳೆ ಹಾಜರಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಜಂಟಿ ಆಯುಕ್ತ ಸರ್ಫರಾಜ್‌ ಖಾನ್ ಅವರನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಈ ವೇಳೆ ವಾದ ಮಂಡಿಸಿದ ಉದಯ್‌ ಹೊಳ್ಳ, ‘ಜೈವಿಕ ವಿಲೇವಾರಿಗೆ ಅನೇಕ ಸಮಸ್ಯೆಗಳಿವೆ. ತ್ಯಾಜ್ಯಕ್ಕೆ ಕೆಲವು ರಾಸಾಯನಿಕ ಮಿಶ್ರಣ ಮಾಡಿ ವಿಲೇವಾರಿ ಮಾಡುವ ಕ್ರಮ ಅನುಸರಿಸಲಾಗುವುದು’ ಎಂದು ತಿಳಿಸಿದರು.

‘ನೀವು ಕಾನೂನಿನ ಅನ್ವಯ ಕಾರ್ಯ ನಿರ್ವಹಿಸಿ ಎಂದು ಸೂಚಿಸುತ್ತಿದ್ದೇವೆ. ನಮ್ಮ ಆದೇಶಕ್ಕೆ ನೀವು ಬೆಲೆ ನೀಡುತ್ತೀರೋ ಇಲ್ಲವೋ’ ಎಂದು ನ್ಯಾಯಮೂರ್ತಿಗಳು ಮತ್ತೆ ಕಿಡಿ ಕಾರಿದರು.

‘ಘನ ತ್ಯಾಜ್ಯ ನಿರ್ವಹಣಾ ನಿಯಮವನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯ ವರದಿಯನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು’ ಎಂದು ಸೂಚಿಸಿದ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 2ನೇ ವಾರಕ್ಕೆ ಮುಂದೂಡಿತು.

ಬಿಬಿಎಂಪಿಯು ಬಾಗಲೂರಿನ ಸರ್ವೇ ನಂಬರ್ 176 ಮತ್ತು 271ರ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡಿತ್ತು. ಇದರಿಂದಾಗಿ ಅಂತರ್ಜಲ ಮಾಲಿನ್ಯ, ಗಬ್ಬುವಾಸನೆಯಂತಹ ಸಮಸ್ಯೆ ಎದುರಿಸಿದ್ದ ಸ್ಥಳೀಯರು ಎನ್‌ಜಿಟಿಗೆ ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !