ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆ, ಕಟ್ಟಡ ನಿರ್ಮಾಣಕ್ಕೆ ನೀರಿನ ಬರ: ಕೆಲಸವಿಲ್ಲದೇ ಕಾರ್ಮಿಕರ ಪರದಾಟ

* ಆಮೆಗತಿಯಲ್ಲಿ ಸಾಗಿದ ಕೆಲಸ * ಹಣ ನೀಡಿದರೂ ಸಿಗದ ಟ್ಯಾಂಕರ್‌ಗಳು
Published 12 ಮಾರ್ಚ್ 2024, 1:13 IST
Last Updated 12 ಮಾರ್ಚ್ 2024, 1:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವೆಡೆ ಎದುರಾಗಿರುವ ನೀರಿನ ಅಭಾವದಿಂದಾಗಿ ಮನೆ– ಕಟ್ಟಡ ನಿರ್ಮಾಣ ಕೆಲಸಗಳು ನಿಧಾನಗತಿಯಲ್ಲಿ ಸಾಗಿದ್ದು, ಸ್ವಂತ ಸೂರಿನ ಕನಸು ಕಾಣುತ್ತಿರುವ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನೀರಿನ ಕೊರತೆಯಿಂದಾಗಿ ನಿರ್ಮಾಣ ಕೆಲಸವೂ ಕಡಿಮೆಯಾಗಿದ್ದು, ಕಾರ್ಮಿಕರ ದುಡಿಮೆಗೂ ಹೊಡೆತ ಬಿದ್ದಿದೆ.

ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಜೊತೆಗೆ, ನಗರದೊಳಗಿನ ಬಡಾವಣೆಗಳಲ್ಲಿ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವ ಕೆಲಸಗಳು ನಡೆಯತ್ತಿವೆ. ಇದರ ಜೊತೆಯಲ್ಲಿ, ಸರ್ಕಾರದಿಂದಲೇ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳು ಚಾಲ್ತಿಯಲ್ಲಿವೆ.

ಮನೆ, ಕಟ್ಟಡ, ಅಪಾರ್ಟ್‌ಮೆಂಟ್‌ ಸಮುಚ್ಚಯ, ಪಾದಚಾರಿ ಮಾರ್ಗ... ಹೀಗೆ ಎಲ್ಲ ರೀತಿಯ ನಿರ್ಮಾಣ ಕೆಲಸಗಳಿಗೂ ನೀರು ಅಗತ್ಯವಾಗಿದೆ. ಆದರೆ, ಫೆಬ್ರುವರಿ ಆರಂಭದಿಂದಲೇ ನೀರಿನ ಅಭಾವ ಕಾಣಿಸಿಕೊಂಡಿದೆ. ಇದರಿಂದಾಗಿ ನಿರ್ಮಾಣ ಕೆಲಸಕ್ಕೆ ಅಡ್ಡಿ ಉಂಟಾಗಿದ್ದು, ಲಭ್ಯವಾಗುವ ನೀರಿನಲ್ಲೇ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ. ಸ್ವಂತ ಕೊಳವೆ ಬಾವಿ ಹಾಗೂ ಟ್ಯಾಂಕರ್ ಹೊಂದಿರುವವರ ಕೆಲಸಗಳು ಮಾತ್ರ ಸರಾಗವಾಗಿ ಸಾಗಿದೆ. ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಸರ್ಕಾರದ ಕೆಲಸಗಳಿಗೆ ಸದ್ಯಕ್ಕೆ ನೀರಿನ ಅಭಾವ ಉಂಟಾಗಿಲ್ಲ.

‘ಸ್ವಂತ ಮನೆ ಹೊಂದುವ ಆಸೆಯಿಂದ ನಿವೇಶನ ಖರೀದಿಸಿದ್ದೇನೆ. 2023ರ ಅಕ್ಟೋಬರ್‌ನಿಂದ ಮನೆ ನಿರ್ಮಾಣ ಕೆಲಸ ಆರಂಭಿಸಿದ್ದೇನೆ. ಅಂದು ಬೇಡಿಕೆಗೆ ತಕ್ಕಷ್ಟು ಟ್ಯಾಂಕರ್‌ ನೀರು ಸಿಗುತ್ತಿತ್ತು. ಹೀಗಾಗಿಯೇ, ಕೊಳವೆ ಬಾವಿ ಕೊರೆಸಿರಲಿಲ್ಲ. ಅಡಿಪಾಯ ಭದ್ರಪಡಿಸುವವರೆಗೂ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ಫೆಬ್ರುವರಿಯಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ’ ಎಂದು ಕೆಂಗೇರಿಯ ಆರ್. ಷಣ್ಮುಗಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರು ತಿಂಗಳಿನಲ್ಲಿ ಮನೆ ನಿರ್ಮಾಣ ಮುಗಿಸುವ ಕನಸಿತ್ತು. ಆದರೆ, ನಿರ್ಮಾಣ ಕೆಲಸಕ್ಕೆ ನೀರು ಸಿಗುತ್ತಿಲ್ಲ. ಇದರಿಂದಾಗಿ ಸಿಮೆಂಟ್‌ ಮಿಶ್ರಣದಿಂದ ಹಿಡಿದು, ಗೋಡೆಗೆ ನೀರು ಉಣಿಸುವ ಕೆಲಸ ನಿಧಾನವಾಗಿದೆ. ಕೊಳವೆ ಬಾವಿ ಇರುವವರ ಬಳಿ ಡ್ರಮ್‌ನಲ್ಲಿ ನೀರು ತಂದು ಕೆಲಸ ಮುಂದುವರಿಸಿದ್ದೇವೆ. ಕ್ಯೂರಿಂಗ್ ಸಹ ಸರಿಯಾಗಿ ಆಗುತ್ತಿಲ್ಲ’ ಎಂದರು.

ನಾಗರಬಾವಿ ಬಳಿ ಐದು ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವ ಗುತ್ತಿಗೆದಾರ ಎಂ. ರಾಮಾಂಜನಪ್ಪ, ‘ಕಟ್ಟಡ ನಿರ್ಮಿಸಲು ಆರಂಭಿಸಿದ್ದ ದಿನಗಳಲ್ಲಿ ನೀರಿನ ಕೊರತೆ ಇರಲಿಲ್ಲ. ನಿಗದಿಯಂತೆ ಕೆಲಸ ನಡೆಯುತ್ತಿತ್ತು. ಆದರೆ, ಫೆಬ್ರುವರಿಯಿಂದ ನೀರಿನ ಅಭಾವವಿದೆ’ ಎಂದರು.

‘ನೀರು ಪೂರೈಕೆ ಸಂಬಂಧ ಟ್ಯಾಂಕರ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಷ್ಟಾದರೂ ಅಗತ್ಯವಿರುವಷ್ಟು ಟ್ಯಾಂಕರ್ ನೀರು ಸಿಗುತ್ತಿಲ್ಲ. ಹೀಗಾಗಿ, ಎರಡು ದಿನಕ್ಕೊಮ್ಮೆ ಮಾತ್ರ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಹಣ ನೀಡಿದರೂ ಸಿಗದ ಟ್ಯಾಂಕರ್‌ಗಳು: ನಿರ್ಮಾಣ ಕೆಲಸಕ್ಕೆ ಕೊಳವೆ ಬಾವಿ ಅಥವಾ ಟ್ಯಾಂಕರ್ ನೀರು ಬಳಸಲು ಮಾತ್ರ ಅನುಮತಿ ಇದೆ. ಕೆಲವರು, ಕೊಳವೆ ಬಾವಿ ಕೊರೆಸಿ ಕಟ್ಟಡ ನಿರ್ಮಾಣ ಆರಂಭಿಸುತ್ತಿದ್ದಾರೆ. ಹಲವರು, ಟ್ಯಾಂಕರ್ ನೀರು ನೆಚ್ಚಿಕೊಂಡು ನಿರ್ಮಾಣ ಕೆಲಸ ಶುರು ಮಾಡುತ್ತಿದ್ದಾರೆ.

ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಯಲ್ಲೂ ನೀರು ಕಡಿಮೆಯಾಗಿದೆ. ಹೀಗಾಗಿ, ಎಲ್ಲರೂ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಟ್ಯಾಂಕರ್‌ಗಳಿಗೆ ಬೇಡಿಕೆ ಬಂದಿದೆ. ಹಣ ನೀಡಿದರೂ ಟ್ಯಾಂಕರ್‌ಗಳು ಸಿಗುತ್ತಿಲ್ಲವೆಂದು ಬಹುತೇಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಮನೆ ನಿರ್ಮಾಣಕ್ಕೆ ಕನಿಷ್ಠ ವಾರಕ್ಕೊಂದು ಟ್ಯಾಂಕರ್‌ ಬೇಕು. ಟ್ಯಾಂಕರ್ ಕಳುಹಿಸುವಂತೆ ಮಾಲೀಕರಿಗೆ ಕರೆ ಮಾಡಿದರೆ, ಸದ್ಯಕ್ಕೆ ಟ್ಯಾಂಕರ್ ಸಿಗುವುದಿಲ್ಲವೆಂದು ಹೇಳುತ್ತಿದ್ದಾರೆ. ಜನವರಿಯಲ್ಲಿ ₹1,200 ಕೊಟ್ಟು ಟ್ಯಾಂಕರ್ ನೀರು ತರಿಸಲಾಗಿತ್ತು. ಆದರೆ, ಈಗ ₹3 ಸಾವಿರದಿಂದ ₹4 ಸಾವಿರ ಕೇಳುತ್ತಿದ್ದಾರೆ. ಕೆಲಸ ನಿಲ್ಲಬಾರದೆಂಬ ಕಾರಣಕ್ಕೆ ಹಣ ನೀಡಲು ಸಜ್ಜಾಗಿದ್ದರೂ ಕೇಳಿದ ಸಮಯಕ್ಕೆ ಟ್ಯಾಂಕರ್ ಕಳುಹಿಸುತ್ತಿಲ್ಲ. ಸರ್ಕಾರವೇ ಟ್ಯಾಂಕರ್‌ ಪೂರೈಸುವತ್ತ ಗಮನ ಹರಿಸಬೇಕು’ ಎಂದು ಸುಂಕದಕಟ್ಟೆಯ ಲೋಕೇಶ್ ಹೇಳಿದರು.

‘ನಗರದ ಬಹುತೇಕ ಟ್ಯಾಂಕರ್‌ಗಳ ಮಾಲೀಕರಿಗೆ ನಿತ್ಯವೂ ಮೇಲಿಂದ ಮೇಲೆ ಕರೆ ಮಾಡಲಾಗುತ್ತಿದೆ. ನೀರು ಬಿಟ್ಟು ಬೇರೆಯದ್ದು ಏನಾದರೂ ಕೇಳಿ ಕೊಡುತ್ತೇವೆ ಎಂಬುದಾಗಿ ಮಾಲೀಕರು ಹೇಳುತ್ತಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿದ್ದು, ಕೆಲಸ ಅರ್ಧಕ್ಕೆ ನಿಲ್ಲಿಸುವ ಅನಿವಾರ್ಯತೆಯೂ ಬರಬಹುದು’ ಎಂದು ತಿಳಿಸಿದರು.

ಕೆಲಸವಿಲ್ಲದೇ ಕಾರ್ಮಿಕರ ಪರದಾಟ

ಕಟ್ಟಡ ನಿರ್ಮಾಣ ಕೆಲಸ ನಂಬಿಕೊಂಡು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರ್ಮಿಕರು ಬೆಂಗಳೂರಿಗೆ ಬಂದಿದ್ದಾರೆ. ನೀರಿನ ಕೊರತೆಯಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದ್ದರಿಂದ ಅರ್ಧದಷ್ಟು ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ‘ಬಹುಮಹಡಿ ಕಟ್ಟಡ ನಿರ್ಮಾಣ ಶುರುವಾದಾಗ 24 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ 10 ಮಂದಿ ಮಾತ್ರ ಇದ್ದಾರೆ. 24 ಮಂದಿಯನ್ನು ಕೆಲಸಕ್ಕೆ ಕರೆಸಿದರೆ ನೀರು ಕೊಡಬೇಕು. ಈಗ ನೀರು ಇಲ್ಲ. ಅವರು ಕೆಲಸಕ್ಕೆ ಬಂದರೂ ಖಾಲಿ ಕುಳಿತುಕೊಳ್ಳುತ್ತಾರೆ. ಹೀಗಾಗಿ ಅಗತ್ಯವಿರುವ ಕಾರ್ಮಿಕರನ್ನಷ್ಟೇ ಕೆಲಸಕ್ಕೆ ಕರೆಸಲಾಗುತ್ತಿದೆ’ ಎಂದು ಗುತ್ತಿಗೆದಾರ ರಾಮಾಂಜನಪ್ಪ ತಿಳಿಸಿದರು. ಕಟ್ಟಡ ನಿರ್ಮಾಣ ಕಾರ್ಮಿಕ ಸುಭಾಷ್ ‘ಯಾದಗಿರಿಯ ಒಂದೇ ಊರಿನ 10 ಮಂದಿ ನಗರಕ್ಕೆ ಬಂದಿದ್ದೇವೆ. ಮೊದಲು 10 ಮಂದಿಯೂ ಕೆಲಸ ಮಾಡುತ್ತಿದ್ದೆವು. ಆದರೆ ಈಗ ನೀರು ಇಲ್ಲದಿದ್ದರಿಂದ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಪಾಳೆ ಪ್ರಕಾರ ತಲಾ ಐದು ಮಂದಿ ದಿನ ಬಿಟ್ಟು ದಿನ ಕೆಲಸ ಮಾಡುತ್ತಿದ್ದೇವೆ. ಸಂಬಳವೂ ಅರ್ಧ ಮಾತ್ರ ಬರುತ್ತಿದೆ’ ಎಂದು ಅಳಲು ತೋಡಿಕೊಂಡರು.

ರಾಜರಾಜೇಶ್ವರಿನಗರದಲ್ಲಿ ಮನೆ ನಿರ್ಮಾಣ ಕೆಲಸ ಆಮೆಗತಿಯಲ್ಲಿ ಸಾಗಿದ್ದು ಇಬ್ಬರು ಕಾರ್ಮಿಕರು ಮನೆ ನಿರ್ಮಾಣದ ವಸ್ತುಗಳನ್ನು  ಜೋಡಿಸಿಟ್ಟರು

ರಾಜರಾಜೇಶ್ವರಿನಗರದಲ್ಲಿ ಮನೆ ನಿರ್ಮಾಣ ಕೆಲಸ ಆಮೆಗತಿಯಲ್ಲಿ ಸಾಗಿದ್ದು ಇಬ್ಬರು ಕಾರ್ಮಿಕರು ಮನೆ ನಿರ್ಮಾಣದ ವಸ್ತುಗಳನ್ನು  ಜೋಡಿಸಿಟ್ಟರು

- ಪ್ರಜಾವಾಣಿ ಚಿತ್ರ/ ರಂಜು ಪಿ.

ಮನೆ ಕಟ್ಟಡ ನಿರ್ಮಾಣ ಮಾಡುವವರು ಏನಂತಾರೆ?

‘ಮನೆ ನಿರ್ಮಾಣ ಕೆಲಸ ನವೆಂಬರ್‌ನಿಂದ ಆರಂಭಿಸಿದ್ದೆವು. ಕೊಳವೆ ಬಾವಿ ನೀರು ಕಡಿಮೆ ಆಗಿದ್ದು ಆನ್ ಮಾಡಿದಾಗ ಐದು ನಿಮಿಷ ಮಾತ್ರ ನೀರು ಬರುತ್ತಿದೆ. ಅದೇ ನೀರನ್ನು ಡ್ರಮ್‌ನಲ್ಲಿ ಇಟ್ಟುಕೊಂಡು ಕೆಲಸ ಮುಂದುವರಿಸಿದ್ದೇವೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು ಟ್ಯಾಂಕರ್ ನೀರು ಕೊಡಿಸಲು ಸರ್ಕಾರ ಗಮನ ಹರಿಸಬೇಕು

– ನಾಗರಾಜಯ್ಯ ರಾಜರಾಜೇಶ್ವರಿನಗರ‌ದ ಶ್ರೀ ದುರ್ಗಾ ಪರಮೇಶ್ವರಿ ಬಡಾವಣೆ ನಿವಾಸಿ

ಟ್ಯಾಂಕರ್ ನೀರು ಮರೀಚಿಕೆಯಾಗಿದೆ. ಅವರಿವರ ಕೊಳವೆ ಬಾವಿಯಲ್ಲಿ ನೀರು ತಂದು ಮನೆ ಕಟ್ಟುತ್ತಿದ್ದೇವೆ. ಇನ್ನೊಂದು ವಾರವಷ್ಟೇ ನೀರು ಸಿಗಬಹುದು. ಆ ನಂತರ ನೀರು ಸಿಗುವುದು ಅನುಮಾನ. ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವ ಸ್ಥಿತಿ ಬರುತ್ತದೆ. ಕಾರ್ಮಿಕರಿಗೂ ಕೆಲಸವಿಲ್ಲದಂತಾಗುತ್ತದೆ

ಬಿ. ವೀರೇಶ್ ಆಚಾರ್ಯ ಶ್ರೀಗಂಧಕಾವಲು

ಜನರಿಗೆ ಕುಡಿಯಲು ನೀರು ಸಿಗುವುದು ದುಸ್ತರವಾಗಿದೆ. ಇಂಥ ಸ್ಥಿತಿಯಲ್ಲಿ ಮನೆ ನಿರ್ಮಾಣಕ್ಕೂ ನೀರಿನ ಅಭಾವ ಹೆಚ್ಚಿದೆ. ಸದ್ಯಕ್ಕೆ ಮನೆ ನಿರ್ಮಾಣ ಕೆಲಸ ಆಮೆಗತಿಯಲ್ಲಿ ಸಾಗಿದೆ. ಮುಂದಿನ ದಿನಗಳಲ್ಲಿ ನೀರು ಸಿಗದಿದ್ದರೆ ನಿರ್ಮಾಣ ಕೆಲಸ ಬಂದ್ ಮಾಡಲಾಗುವುದು. ನೀರು ಸಿಕ್ಕ ಬಳಿಕ ಪುನಃ ಆರಂಭಿಸಲಾಗುವುದು

– ರವಿಚಂದ್ರ ಗಗನಮಾಲಿ ಮಾರಣ್ಣ ಬಡಾವಣೆ ಚಿಕ್ಕಬಿದರಕಲ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT