ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ | ಕೆ.ಆರ್‌.ಮಾರ್ಕೆಟ್ ‘ಮಾಮೂಲು’ ನಿಲ್ಲೋದು ಎಂದು?

Last Updated 5 ಅಕ್ಟೋಬರ್ 2019, 9:37 IST
ಅಕ್ಷರ ಗಾತ್ರ

ಬೆಂಗಳೂರು:ಹಬ್ಬ ಯಾವುದೇ ಆದರೂ ಅದರ ರಂಗು ಮೊದಲು ಕಾಣಿಸುವುದುನಗರದ ಕೆ.ಆರ್.ಮಾರುಕಟ್ಟೆಯಲ್ಲಿ. ಸುತ್ತಲ ಹತ್ತಾರು ಹಳ್ಳಿಗಳಿಂದ ಬರುವ ರೈತರು, ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಲು ಕೆ.ಆರ್.ಮಾರುಕಟ್ಟೆಯೇ ಬೃಹತ್‌ ಸಂತೆಕಟ್ಟೆ.

ಆಯುಧಪೂಜೆಗಂತೂ ವಿಶೇಷರಂಗು. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ‘ಮಾಮುಲು’ ಪಿಡುಗಿಗೆ ಇಲ್ಲಿನ ವ್ಯಾಪಾರಸ್ಥರು ಹೈರಾಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು... ಹೀಗೆ ಎಲ್ಲರೂ ಇಲ್ಲಿ ‘ಮಾಮೂಲು’ವೀರರೇ ಆಗಿದ್ದಾರೆ. ಒಮ್ಮೊಮ್ಮೆಯಂತು ಯಾರು ರೌಡಿ? ಯಾರು ಸರ್ಕಾರದ ಅಧಿಕಾರಿ ಎಂಬ ವ್ಯತ್ಯಾಸವೂ ನೋಡುವ ಜನರಿಗೆ ಸಿಗುವುದಿಲ್ಲ.

ರೌಡಿಗಳ ಭಾಷೆಯನ್ನೇ ಪೊಲೀಸರು, ಪೊಲೀಸರ ಭಾಷೆಯನ್ನೇ ಬಿಬಿಎಂಪಿ ಅಧಿಕಾರಿಗಳು ಶ್ರದ್ಧೆಯಿಂದ ಪಾಲಿಸುತ್ತಿದ್ದಾರೆ. ವ್ಯಾಪಾರ ಮಾಡಲೆಂದು ಬಂದವರು ಇವರ ಕಿರುಕುಳಕ್ಕೆ ಬೇಸತ್ತು, ‘ಹಾಳು ಜಿಗಣೆ ನನ್‌ ಮಕ್ಕಳು. ಬಡವರ ರಕ್ತ ಕುಡೀತಾರೆ’ ಅಂತ ಬೈದು ಅಸಹಾಯಕತೆಯಿಂದ ಸುಮ್ಮನಾಗುತ್ತಾರೆ. ವ್ಯಾಪಾರಕ್ಕೆ ಬಂದ ಗ್ರಾಹಕರು, ‘ಥೂ ಇವ್ರ ಜನ್ಮಕ್ಕೆ. ಸರ್ಕಾರ ಇವರಿಗೆ ಸಂಬಳ ಕೊಡೋದು ಯಾಕಂತೆ’ ಅಂತ ಅಚ್ಚ ಗೃಹಸ್ಥರಂತೆ ಮನಸ್ಸಿನಲ್ಲೇ ಗುನುಗಿಕೊಳ್ಳುತ್ತಾರೆ.

ಆಯುಧಪೂಜೆ ಹಿನ್ನೆಲೆಯಲ್ಲಿ ಮನೆಗೆ ಬೇಕಾದ ಸಾಮಗ್ರಿ ಖರೀದಿಸಲುಕೆ.ಆರ್.ಮಾರುಕಟ್ಟೆಗೆ ತೆರಳಿದ್ದ ‘ಪ್ರಜಾವಾಣಿ’ ಓದುಗರೊಬ್ಬರಿಗೆ ಅಲ್ಲಿನ ದೌರ್ಜನ್ಯ ಕಂಡು ಸ್ಟಿಂಗ್ ಆಪರೇಷನ್ ಮಾಡಿ ಬುದ್ಧಿ ಕಲಿಸಬೇಕು ಎನಿಸಿತು. ಎಳೇ ಹುಡುಗನಿಗೆ ದುಡ್ಡುಕೊಡಲು ಬಿಬಿಎಂಪಿ ಅಧಿಕಾರಿಯೊಬ್ಬರು ಆಟವಾಡಿಸಿದ್ದು ಕಂಡು ಅವರಿಗೆ ಸಿಟ್ಟು ಬಂದಿತ್ತು.

ಖರೀದಿ ಮಾಡುವಂತೆ ನಟಿಸುತ್ತಾ ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಪ್ಯಾಂಟ್‌ ಜೇಬಿನ ಬಳಿ ಇರಿಸಿಕೊಂಡರು. ಅದರಲ್ಲಿ ‘ಮಾಮೂಲು’ ಜಗತ್ತಿನ ದೃಶ್ಯವೊಂದು ಸೆರೆಯಾಯಿತು.

ಈ ಘಟನೆ ನಡೆದದ್ದು ಶುಕ್ರವಾರ ಸಂಜೆ ಕೆ.ಆರ್‌.ಮಾರುಕಟ್ಟೆಯಲ್ಲಿ. ದೂರದ ಹಳ್ಳಿಯಿಂದ ಬಾಳೆದಿಂಡು ತಂದಿದ್ದ ರೈತರ ಮಗನೊಬ್ಬನಿಂದ ಬಿಬಿಎಂಪಿ ಅಧಿಕಾರಿಯೊಬ್ಬಬಿಟ್ಟಿ ಬಾಳೆದಿಂಡು ಬೇಡಿದ. ಆತನ ಕೋರಿಕೆಯನ್ನು ಬಾಲಕ ತಿರಸ್ಕರಿಸಿದ. ಈ ತಪ್ಪಿಗೆಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಧಿಕಾರಿ, ಹುಡುಗನನ್ನು ಬೆದರಿಸಲು ಯತ್ನಿಸಿದ.

ಹುಡುಗ ‘ಬೋಣಿ ಆಗಿಲ್ಲ ಸ್ವಾಮಿ, ಬಿಟ್ಟಿ ತಗೊಂಡು ಹೋಗಬೇಡಿ’ ಎಂದು ಗೋಗರೆದಾಗ ಎಡಗೈಲಿ 20 ರೂಪಾಯಿ ತೆಗೆದು ಹುಡುಗನ ಕೈಗಿಟ್ಟು ರೌಡಿ, ಪೊಲೀಸರಿಂದ ಕಲಿತ ಸುಸಂಸ್ಕೃತ ಶಬ್ದಗಳನ್ನು ಪ್ರಯೋಗಿಸಿದ.100 ರೂಪಾಯಿಗೂ ಅಧಿಕ ಬೆಲೆ ಬಾಳುತ್ತಿದ್ದ ಬಾಳೆದಿಂಡಿಗೆ ಸಿಕ್ಕಿದ್ದು ಕೇವಲ 20 ರೂಪಾಯಿ. ಸದ್ಯಕ್ಕೆ ಅಷ್ಟಾದರೂ ಸಿಕ್ಕಿತಲ್ಲ ಎಂದು ಹುಡುಗ ಪೆಚ್ಚುಮೊಗ ಮಾಡಿಕೊಂಡುಸುಮ್ಮನಾದ.

‘ಕೆ.ಅರ್.ಮಾರುಕಟ್ಟೆಯಲ್ಲಿ ಇಂಥ ದೃಶ್ಯಗಳು ಸಾಮಾನ್ಯ ಎಂಬಂತೆ ಆಗಿವೆ. ಒಂದೆಡೆ ರೌಡಿಗಳು, ಇನ್ನೊಂದೆಡೆ ಪೊಲೀಸರು, ಮಗದೊಂದೆಡೆ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರಿಗಳನ್ನು ಬೆದರಿಸಿ ಮಾಮೂಲು ವಸೂಲು ಮಾಡುತ್ತಿದ್ದಾರೆ.

‘ರಾತ್ರಿಪಾಳಿಯಲ್ಲಿ ಗಸ್ತು ತಿರುಗುವ ಪೊಲೀಸ್ ಸಿಬ್ಬಂದಿ ಬೆಳಿಗ್ಗೆ ಹೊತ್ತು ರಸ್ತೆ ವಿಭಜಕದ ಮೇಲಿರುವ ಕೊತ್ತಂಬರಿ ಕಟ್ಟುಗಳನ್ನು ದುಡ್ಡು ಕೊಡದೆ ಬ್ಯಾಗಿಗೆ ಹಾಕಿಕೊಂಡು ಹೋಗುತ್ತಾರೆ. ಹೂ ಮಾರಾಟಗಾರರದ್ದೂ ಇದೇ ಪಾಡು. ಕೇಳಿದ ತಕ್ಷಣ ಕೊಡದಿದ್ದರೆ ಹೂ ಬುಟ್ಟಿಗಳನ್ನೇ ತೆಗೆದು ಬಿಸಾಡುತ್ತಾರೆ. ಅದಕ್ಕೆ ಹೆದರುವ ವ್ಯಾಪಾರಿಗಳು ಕೇಳಿದಷ್ಟು ಹಣವನ್ನೋ, ಹೂವನ್ನೋ ಕೊಟ್ಟು ಓಲೈಸಬೇಕಾದ ಪರಿಸ್ಥಿತಿ ಬಂದಿದೆ.

‘ಸಂಜೆಯ ಹೊತ್ತು ಬೀದಿಬದಿ ಪಾನಿಪುರಿ ಅಂಗಡಿಗಳನ್ನೂ ಈ ಮಾಮೂಲು ರೋಗಿಗಗಳು ಬಿಟ್ಟಿಲ್ಲ. ದಿನದ ಮಾಮೂಲು ಕೊಡದಿದ್ದರೆ ಪಾನಿ ಕೊಡ ಚೆಲ್ಲುವುದು, ಪಾನಿಪುರಿ ಇರಿಸಿರುವ ಬಿದಿರಿನ ಬುಟ್ಟಿಯನ್ನು ನೆಲಕ್ಕೆ ಹಾಕವುದು, ಪಾನಿಪುರಿ ಅಂಗಡಿಯ ಲೈಟ್‌ಗಳನ್ನು ಒಡೆದು ಹಾಕುವುದು ಸಾಮಾನ್ಯವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ಪ್ರತ್ಯಕ್ಷದರ್ಶಿ ಓದುಗರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT