ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್‌ ಮೆಟ್ರೋ: ಅಕ್ಟೋಬರ್ 25ರಿಂದ ಪರೀಕ್ಷಾರ್ಥ ಸಂಚಾರ

ವೈಟ್‌ಫೀಲ್ಡ್‌ ಮೆಟ್ರೋ: 45 ದಿನ ಪರೀಕ್ಷಾರ್ಥದ ಬಳಿಕ ಸುರಕ್ಷತೆ ಪರಿಶೀಲನೆ
Last Updated 5 ಅಕ್ಟೋಬರ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿಯಿಂದ ಬೈಯಪ್ಪನಹಳ್ಳಿ ತನಕ ಇರುವ ಮೆಟ್ರೊ ರೈಲು ನೇರಳೆ ಮಾರ್ಗ ವೈಟ್‌ಫೀಲ್ಡ್‌ ತನಕ ವಿಸ್ತರಣೆಯಾಗುವ ಕಾಲ ಹತ್ತಿರವಾಗಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ತನಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ 25ರಿಂದಲೇ ರೈಲುಗಳ ಪರೀಕ್ಷಾರ್ಥ ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಸಿದ್ಧತೆ ಮಾಡಿಕೊಂಡಿದೆ.

ಬಹುನಿರೀಕ್ಷಿತ ಈ ಮೆಟ್ರೊ ರೈಲು ಮಾರ್ಗ ಬೆಂಗಳೂರು ಪೂರ್ವ ಮತ್ತು ಪಶ್ಚಿಮ ಭಾಗಕ್ಕೆ ಸಂಪರ್ಕ ಕೊಂಡಿ ಯಾಗಲಿದೆ. ವಯಾಡಕ್ಟ್‌ ಮೇಲೆಹಾದು ಹೋಗಿರುವ 33 ಕೆ.ವಿ ವಿದ್ಯುತ್ ಕೇಬಲ್‌ಗಳು ಮತ್ತು 750 ವೋಲ್ಟ್‌ ಕಂಬಿಗಳಿಗೆ ಅ.15ರಿಂದ ಪರೀಕ್ಷಾರ್ಥ ವಿದ್ಯುತ್ ಹರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.

‘ಕನಿ‌ಷ್ಠ 45 ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ಇರಲಿದ್ದು, ಬಳಿಕ ರೈಲ್ವೆ ಸುರಕ್ಷಿತಆಯುಕ್ತರಿಂದ(ಸಿಆರ್‌ಎಸ್‌) ಪರಿಶೀಲನೆ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023ರ ಆರಂಭದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ’ ಎಂದು ಬಿಎಂ ಆರ್‌ಸಿಎಲ್ ಅಧಿಕಾರಿಗಳು ಹೇಳಿದರು.

ಮೆಟ್ರೊ ರೈಲು ಮಾರ್ಗದ 2ನೇ ಹಂತದ ಕಾಮಗಾರಿಗಳಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಐಟಿ ಕಂಪನಿಗಳು ಹೆಚ್ಚಿರುವ ಭಾಗಕ್ಕೆ ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ ಜನ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ತನಕ ಇರುವ ಮೆಟ್ರೊ ರೈಲಿನಲ್ಲಿ ಹೋಗಿ ಅಲ್ಲಿಂದ ಮುಂದಕ್ಕೆ ಬಿಎಂಟಿಸಿ ಬಸ್, ಸ್ಥಳೀಯ ರೈಲು ಮತ್ತು ಕ್ಯಾಬ್‌ಗಳನ್ನು ಹತ್ತಿ ವೈಟ್‌ಫೀಲ್ಡ್‌ ಕಡೆಗೆ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಬೇರೆಡೆಗಿಂತ ಹೆಚ್ಚಾಗಿದೆ.

ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸಲು ಬೈಯಪ್ಪನಹಳ್ಳಿಯಿಂದ ವೈಟ್‌ ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ಇದು ಅನುಕೂಲ ಆಗಲಿದೆ. ನಿಗದಿಯಂತೆ 2020ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳ ಬೇಕಿತ್ತು. ಭೂಸ್ವಾಧೀನ ಪ್ರಕ್ರಿಯೆ, ಮರಗಳ ಸ್ಥಳಾಂತರ, ಕೋವಿಡ್‌ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕೋವಿಡ್‌ ಪ್ರಕರಣ ಗಳು ಕಡಿಮೆಯಾದ ಬಳಿಕ ಎಲ್ಲ ಅಡೆ ತಡೆಗಳೂ ನಿವಾರಣೆಯಾಗಿ ಕಾಮಗಾರಿ ಚುರುಕು ಪಡೆದುಕೊಂಡಿದೆ. ಕಾಮಗಾರಿ ಪೂರ್ಣಗೊಂಡರೆ ನಗರದ ಅನೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವಲ್ಲಿ ಈ ಮೆಟ್ರೊ ಮಾರ್ಗ ಮಹತ್ತರ ಪಾತ್ರವಹಿಸಲಿದೆ.

‘ಬೈಯಪ್ಪನಹಳ್ಳಿಯಿಂದ ವೈಟ್‌ ಫೀಲ್ಡ್ ತನಕ 15.50 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ 13 ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಎತ್ತರಿಸಿದ ರೈಲು ಮಾರ್ಗದ ಸಿವಿಲ್ ಕಾಮಗಾರಿ ಮುಕ್ತಾಯಗೊಂಡಿದೆ. ಹಳಿಗಳ ಜೋಡಣೆ ಕಾರ್ಯವೂ ಪೂರ್ಣ ಗೊಂಡಿದ್ದು, ಪರೀಕ್ಷೆಗೆ ಸಿದ್ಧವಾಗಿದೆ. ವೈಟ್‌ಫೀಲ್ಡ್‌ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT