ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯವನ್ನು ಜೀವನಕ್ಕೆ ಹತ್ತಿರ ತಂದ ಅ.ನ.ಕೃ: ಲೇಖಕ ಎಸ್.ಆರ್.ರಾಮಸ್ವಾಮಿ ಅಭಿಮತ

‘ಅ.ನ.ಕೃ.ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಲೇಖಕ ಎಸ್.ಆರ್.ರಾಮಸ್ವಾಮಿ ಅಭಿಮತ
Published 19 ಮೇ 2024, 15:10 IST
Last Updated 19 ಮೇ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಿಗರಲ್ಲಿ ಓದುವ ಅಭಿರುಚಿ ಬೆಳೆಸಿದ ಅ.ನ.ಕೃಷ್ಣರಾಯರು(ಅ.ನ.ಕೃ), ಸಾಹಿತ್ಯವನ್ನು ಕಾದಂಬರಿ ಪ್ರಕಾರದ ಮೂಲಕ ನಮ್ಮ ಜೀವನಕ್ಕೆ ಹತ್ತಿರ ತಂದರು’ ಎಂದು ಲೇಖಕ ಎಸ್.ಆರ್.ರಾಮಸ್ವಾಮಿ ತಿಳಿಸಿದರು. 

ಅ.ನ.ಕೃ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಿ.ಎಸ್.ಸ್ವಾಮಿ ಅವರ ಜತೆಗೆ ‘ಅ.ನ.ಕೃ.ಪ್ರಶಸ್ತಿ’ ಸ್ವೀಕರಿಸಿ, ಮಾತನಾಡಿದರು. ಪ್ರಶಸ್ತಿಯು ತಲಾ ₹50 ಸಾವಿರ ನಗದು ಒಳಗೊಂಡಿದೆ. 

‘ಸಾಹಿತ್ಯ, ಸಂಸ್ಕೃತಿಯ ಪರಿಪೋಷಣೆಗೆ ಅ.ನ.ಕೃ ನೀಡಿದ ಕೊಡುಗೆ ಅಪಾರ. ಅವರು ಬಹುಮುಖ ಸಾಧನೆ ಮಾಡಿದ್ದು, ಸಾಹಿತ್ಯ ಕಾರ್ಯವು ಅವರ ಸಾಧನೆಯ ಒಂದು ಮುಖವಾಗಿದೆ. ಕನ್ನಡ ಪರ ಸಂಘಟಿತ ಹೋರಾಟಕ್ಕೂ ಅವರು ಜನ್ಮ ನೀಡಿದ್ದರು. ಕಾದಂಬರಿಯ ಜತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಅವರು ಸಾಹಿತ್ಯ ಸೃಷ್ಟಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಮೌಲ್ಯವನ್ನು ಅವರು ಕಾದಂಬರಿಗಳ ಮೂಲಕ ಎತ್ತಿಹಿಡಿದರು. ಉದಯೋನ್ಮುಖ ಬರಹಗಾರರನ್ನು ಬೆಳೆಸಿದ ಅವರು, ಉನ್ನತ ಸಂಸ್ಕೃತಿಯ ಮೂರ್ತರೂಪ‌’ ಎಂದು ಮೆಚ್ಚುಗೆ ವ್ಯಕ್ತಪ‍ಡಿಸಿದರು. 

ಲೇಖಕ ಬಿ.ಎಸ್.ಸ್ವಾಮಿ, ‘ಬರವಣಿಗೆ ಜನಸಾಮಾನ್ಯರನ್ನು ತಲುಪಬೇಕೆ ಹೊರತು ಕೇವಲ ವಿದ್ವಾಂಸರನ್ನು ತಲುಪಿದರೆ ಪ್ರಯೋಜನವಿಲ್ಲ. ಆದ್ದರಿಂದಲೇ ಅ.ನ.ಕೃ ಅವರು ಕಾದಂಬರಿ ಪ್ರಕಾರದ ಮೂಲಕ ಜನರನ್ನು ತಲುಪಿದರು. ಹಲವು ಪ್ರತಿಭೆಗಳನ್ನು ಹೊಂದಿದ್ದ ಅವರು, ಜ್ಞಾನ ಸಂಪಾದನೆ ಹಾಗೂ ಜೀವನಾನುಭವದಿಂದ ಉತ್ತಮ ಭಾಷಣಕಾರರಾಗಿದ್ದರು’ ಎಂದು ಹೇಳಿದರು. 

ಪ್ರತಿಷ್ಠಾನದ ವಿಶ್ವಸ್ಥ ಹಾಗೂ ಸಾಹಿತಿ ಶಾ.ಮಂ. ಕೃಷ್ಣರಾಯ, ‘ಅ.ನ.ಕೃ ಅವರು ಸ್ವಾತಂತ್ರ್ಯ ಸೇರಿ ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು. ನಾವೆಲ್ಲ ಅವರಿಂದ ಸ್ಫೂರ್ತಿ ಪಡೆದಿದ್ದೇವೆ’ ಎಂದರು. 

ಎಸ್.ಆರ್.ರಾಮಸ್ವಾಮಿ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ವಿದ್ವಾಂಸ ಶತಾವಧಾನಿ ಆರ್. ಗಣೇಶ್, ‘ರಾಮಸ್ವಾಮಿ ಅವರು ಮೂರು ಶತಮಾನದ ಬದುಕಿಗೆ ಸಾಕ್ಷಿಯಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವ ಅವಧೂತರಾಗಿದ್ದಾರೆ. ಡಿ.ವಿ.ಜಿ ಅವರಿಗೆ ಸಮರ್ಥ ಉತ್ತರಾಧಿಕಾರಿಯಾಗಿದ್ದು, ಸಾಹಿತ್ಯಿಕ ಕೆಲಸಗಳ ಜತೆಗೆ ಪರಿಸರ, ಸ್ವದೇಶಿ ಆಂದೋಲನಗಳನ್ನೂ ಮಾಡಿದ್ದಾರೆ’ ಎಂದು ಹೇಳಿದರು. 

ಬಿ.ಎಸ್.ಸ್ವಾಮಿ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಬರಹಗಾರ ಬಂಡ್ಲಹಳ್ಳಿ ವಿಜಯಕುಮಾರ್, ‘ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಸ್ವಾಮಿ ಅವರು, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಕಲಾವಿದರನ್ನು ಸಂದರ್ಶಿಸಿ, ಅವರ ಹಾಡುಗಳನ್ನು ದಾಖಲಿಸಿದ್ದಾರೆ. ವಿವಿಧ ಜನಪದ ಗೀತೆಗಳ ಧಾಟಿ ಕಲಾವಿದರ ಜತೆಗೆ ಮಣ್ಣಾಗುತ್ತಿರುವ ಹೊತ್ತಿನಲ್ಲಿ ಆ ಧಾಟಿಗಳನ್ನು ಉಳಿಸುವ ಕೆಲಸ ಮಡಿದ್ದಾರೆ. ಅವರ ಸಾಹಿತ್ಯದ ಹರವು ದೊಡ್ಡದಾಗಿದೆ’ ಎಂದು ತಿಳಿಸಿದರು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರಶಸ್ತಿ ಪ್ರದಾನ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT