ಬೆಂಗಳೂರು:ಅವರೆಕಾಯಿಯ ಸೊಗಡಿಗೆ ಜನ ಮಾರುಹೋಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿಗೆ ಬೇಡಿಕೆ ತಗ್ಗಿದೆ. ಇದರಿಂದ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ತಿಂಗಳಿಂದ ತರಕಾರಿಗಳ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ.
ನವೆಂಬರ್ ಕೊನೆಯ ವಾರದಿಂದ ಅವರೆಕಾಯಿ ಮಾರಾಟ ಹೆಚ್ಚಾಗಿದೆ. ಜನ ಅವರೆಕಾಯಿಗೆ ಮುಗಿ ಬೀಳುತ್ತಿರುವುದರಿಂದ ಇತರೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ. ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆಯೂ ಇಳಿಮುಖವಾಗುತ್ತಿದೆ.
‘ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಅವರೆಕಾಯಿ ಪೂರೈಕೆ ಹೆಚ್ಚಾಗುತ್ತದೆ. ಅಲ್ಲದೆ ಅವರೆಕಾಯಿಗೆ ಬೇಡಿಕೆಯೂ ಜಾಸ್ತಿ ಆಗಿರುತ್ತದೆ. ಇತರೆ ತರಕಾರಿಗಳನ್ನು ಹೆಚ್ಚಾಗಿ ಕೊಳ್ಳಲು ಜನ ಮುಂದಾಗುವುದಿಲ್ಲ. ಹೀಗಾಗಿ ತರಕಾರಿ ಬೆಲೆ ಕಡಿಮೆಯಾಗುತ್ತದೆ. ಪ್ರತಿ ವರ್ಷವೂ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ತರಕಾರಿ ಬೆಲೆ ಇಳಿಕೆಯಾಗುವುದು ಸಾಮಾನ್ಯ’ ಎನ್ನುತ್ತಾರೆ ಹಾಪ್ಕಾಮ್ಸ್ ಅಧ್ಯಕ್ಷೆ ಎಚ್.ಕೆ.ನಾಗವೇಣಿ.
‘ಹಾಪ್ಕಾಮ್ಸ್ ಮಳಿಗೆಗಳಲ್ಲಿ ಅವರೆಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಹಾಗೂ ತಳ್ಳುವಗಾಡಿಗಳಲ್ಲೂ ಅವರೆಕಾಯಿ ಮಾರಾಟ ಹೆಚ್ಚಾಗಿದೆ. ಇತರೆ ತರಕಾರಿಗಳಿಗೆ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಬೇಡಿಕೆ ತಗ್ಗಿದೆ. ತರಕಾರಿ ಪದಾರ್ಥಗಳ ಪೂರೈಕೆ ಹೆಚ್ಚಾಗಿದ್ದು ಬೇಡಿಕೆ ತಗ್ಗಿದೆ. ಹೀಗಾಗಿ ಬೆಲೆ ಇಳಿದಿದೆ’ ಎಂಬುದು ಅವರ ವಿವರಣೆ.
‘ಚಳಿಗಾಲದಲ್ಲಿ ಅವರೆಕಾಯಿಯೇ ವಿಶೇಷ. ತರಕಾರಿ ಬೆಲೆ ಕಡಿಮೆಯಾಗಿದ್ದರೂ ಅವರೆಕಾಯಿ ಬಿಟ್ಟು ಬೇರೆ ತರಕಾರಿ ಕೊಳ್ಳಲು ಮನಸ್ಸಾಗುವುದಿಲ್ಲ. ಇತರೆ ತರಕಾರಿ ಪದಾರ್ಥಗಳು ಎಲ್ಲ ದಿನಗಳಲ್ಲೂ ಸಿಗುತ್ತವೆ. ಆದರೆ, ಅವರೆಕಾಯಿ ಎಲ್ಲ ದಿನಗಳಲ್ಲೂ ಇರುವುದಿಲ್ಲ. ಹೀಗಾಗಿ ಬೆಲೆಯ ಬಗ್ಗೆ ಗಮನ ಕೊಡದೆ ಹೆಚ್ಚಾಗಿ ಅವರೆಕಾಯಿಯನ್ನೇ ಖರೀದಿಸುತ್ತಿದ್ದೇನೆ’ ಎಂದಿದ್ದು ಮಲ್ಲೇಶ್ವರದ ನಿವಾಸಿ ನಿಹಾರಿಕಾ.
‘ಚಳಿಗಾಲದಲ್ಲಿ ತರಕಾರಿ ಇಳುವರಿ ಹೆಚ್ಚಾಗಿರುತ್ತದೆ. ಅವರೆಕಾಯಿ ಬೆಲೆ ₨ 27ರಿಂದ 35ರವರೆಗಿದೆ. ಆದರೂ ಜನ ಹೆಚ್ಚಾಗಿ ಅವರೆಕಾಯಿಯನ್ನೇ ಕೊಳ್ಳುತ್ತಿದ್ದಾರೆ. ಇತರೆ ತರಕಾರಿಗಳ ಪೂರೈಕೆಯೂ ಹೆಚ್ಚಾಗಿದೆ. ಪೂರೈಕೆ ಹೆಚ್ಚಾಗಿರುವುದರಿಂದ ಬೆಲೆ ಇಳಿದಿದೆ’ ಎಂದು ಮಲ್ಲೇಶ್ವರ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಚಂದ್ರಶೇಖರ್ ತಿಳಿಸಿದರು.
‘ಬೆಲೆಯಲ್ಲಿ ಏರಿಳಿತವಾದರೂ ದಿನ ಬಳಕೆಯ ತರಕಾರಿಗಳಾದ ಟೊಮೆಟೊ, ಬೀನ್ಸ್, ಬದನೆಕಾಯಿ, ಈರುಳ್ಳಿಯ ಬೇಡಿಕೆ ಕಡಿಮೆಯಾಗುವುದಿಲ್ಲ. ಈ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಬೇಡಿಕೆ ಎಂದಿನಂತೆಯೇ ಇದೆ. ಮೂಲಂಗಿ, ಕ್ಯಾರೆಟ್, ಕೋಸು, ಸೋರೆಕಾಯಿ, ಹೀರೇಕಾರಿ ಬೆಲೆ ಕಡಿಮೆಯಾಗಿದೆ. ಆದರೆ, ಜನ ಇವನ್ನು ಕೊಳ್ಳುವುದು ಕಡಿಮೆಯಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.