ತಲಘಟ್ಟಪುರ: ಕಗ್ಗಲೀಪುರ ಗ್ರಾಮ ಪಂಚಾಯ್ತಿ ಸೇರಿದ ಉದ್ದಿಪಾಳ್ಯ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನಿಂತ ಚರಂಡಿ ನೀರಿನಿಂದ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸಮರ್ಪಕ ರಸ್ತೆಗಳಿಲ್ಲ: ಅಲ್ಲದೇ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಮರ್ಪಕವಾದ ರಸ್ತೆಗಳಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಮಗಾರಿಗಳು ಕುಂಠಿತಗೊಂಡಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ದಿನಪಾಳ್ಯದ ಪೈಪ್ ಲೈನ್ ರಸ್ತೆಯಿಂದ ಜನಪ್ರತಿನಿಧಿಗಳು, ಶ್ರೀಮಂತರ ತೋಟಗಳಿಗೆ ಸಂಚಾರ ನಡೆಸಲು ಸುಸಜ್ಜಿತವಾದ ರಸ್ತೆಗಳಿವೆ. ಆದರೆ, ಸಾಮಾನ್ಯ ಜನರು ಸಂಚಾರ ನಡೆಸುವ ರಸ್ತೆಗಳು ಹಾಳಾಗಿವೆ ಎಂದು ದೂರಿದ್ದಾರೆ.