ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ‘ಹೈ–ಟೆನ್ಶನ್’ ದುರಂತ; ಬಾಲಕ ಗಂಭೀರ

ತಿಂಗಳಲ್ಲಿ 4 ನೇ ಅವಘಡ * ಚೆಂಡು ತರಲು ಮಹಡಿಗೆ ಹೋದಾಗ ಘಟನೆ * ಸ್ಥಳೀಯರಿಗೆ ನೋಟಿಸ್
Last Updated 16 ಮೇ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಚೆಂಡು ತರಲು ಮಹಡಿಗೆ ತೆರಳಿದ್ದಾಗ ಅಲ್ಲೇ ಹಾದು ಹೋಗಿದ್ದ ಹೈಟೆನ್ಶನ್ ವೈರ್ ತಗುಲಿ ನಿಖಿಲ್ (14) ಎಂಬ ಬಾಲಕ ಗಾಯಗೊಂಡಿದ್ದಾನೆ. ‘ಬೆಸ್ಕಾಂನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ’ ಎಂದು ಬಾಲಕನ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೀಕೆರೆ ಸಮೀಪದ ನೇತಾಜಿ ವೃತ್ತದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಿಖಿಲ್ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ದೇಹ ಶೇ 47ರಷ್ಟು ಸುಟ್ಟು ಹೋಗಿದೆ.

ಅಪಾರ್ಟ್‌ಮೆಂಟ್ ಸಮುಚ್ಚಯ ಒಂದರ ಮೇಲ್ವಿಚಾರಕ ಅಮರೇಶ್ ಹಾಗೂ ರಮಾಬಾಯಿ ದಂಪತಿಯ ಮಗನಾದ ಆತ, ‌ಯಲಹಂಕದ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾನೆ. ಬೇಸಿಗೆ ರಜೆ ಇರುವ ಕಾರಣ ಸ್ಥಳೀಯ ಹುಡುಗರೆಲ್ಲ ಪ್ರತಿದಿನ ಜೆ.ಪಿ.ಪಾರ್ಕ್ ಉದ್ಯಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅಂತೆಯೇ ಗುರುವಾರ ಬೆಳಿಗ್ಗೆ ಸಹ ನಿಖಿಲ್‌ ಹಾಗೂ ಗೆಳೆಯರು ಬ್ಯಾಟ್, ಬಾಲ್ ಹಾಗೂ ವಿಕೆಟ್‌ಗಳನ್ನು ತೆಗೆದುಕೊಂಡು ಉದ್ಯಾನದ ಕಡೆಗೆ ಹೊರಟಿದ್ದರು.

ಈ ವೇಳೆ ಗೆಳೆಯನೊಬ್ಬ ಕ್ಯಾಚ್ ಹಿಡಿಯುವಂತೆ ಚೆಂಡನ್ನು ಮೇಲಕ್ಕೆ ಎಸೆದಿದ್ದ. ಆದರೆ, ಚೆಂಡು ಮಹಡಿಗೆ ಹೋಗಿತ್ತು. ಅದನ್ನು ತರಲು ನಿಖಿಲ್‌ ಹೋದಾಗ ವಿದ್ಯುತ್ ಪ್ರವಹಿಸಿ ಒಮ್ಮೆಲೆ ಸ್ಫೋಟ ಸಂಭವಿಸಿತು. ಆ ಸದ್ದಿನಿಂದ ಮನೆಗಳಿಂದ ಹೊರಗೆ ಓಡಿ ಬಂದ ಸ್ಥಳೀಯರು, ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು.

ಸ್ಥಳೀಯರ ಆಕ್ರೋಶ;‘ಇಲ್ಲಿ ಕೆಲ ಮನೆಗಳ ಪಕ್ಕದಲ್ಲೇ ಹೈಟೆನ್ಶನ್ ವೈರ್‌ಗಳು ಹಾದು ಹೋಗಿರುವ ಬಗ್ಗೆ ಬಹಳ ಹಿಂದೆಯೇ ಬೆಸ್ಕಾಂಗೆ ದೂರು ಕೊಟ್ಟಿದ್ದೆವು. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಈ ಆರೋಪ ನಿರಾಕರಿಸಿದ ಬೆಸ್ಕಾಂ ಎಂಜಿನಿಯರ್‌ಗಳು, ‘ಮನೆಗಳನ್ನು ಕಟ್ಟಿದ ಮೇಲೆ ಹೈಟೆನ್ಶನ್ ವೈರ್ ಹಾಕಿಲ್ಲ. ವೈರ್‌ಗಳಿದ್ದ ಜಾಗದಲ್ಲೇ ಮನೆಗಳನ್ನು ಕಟ್ಟಲಾಗಿದೆ. ಸ್ಥಳೀಯರು ತಮ್ಮ ತಪ್ಪು ಇಟ್ಟುಕೊಂಡು ಬೆಸ್ಕಾಂ ವಿರುದ್ಧ ದೂರುತ್ತಿದ್ದಾರೆ. ನಿಯಮ ಉಲ್ಲಂಘಿಸಿರುವ ಎಲ್ಲರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT