ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹86 ಕೋಟಿ ಖರ್ಚಾದರೂ ಬದಲಾಗದ ಚಿತ್ರಣ

ಗೊಟ್ಟಿಗೆರೆ ವಾರ್ಡ್‌ ಸ್ಥಿತಿಗತಿ ಕುರಿತು ಬೆಂಗಳೂರು ನವನಿರ್ಮಾಣ ಪಕ್ಷದ ವರದಿ
Last Updated 24 ನವೆಂಬರ್ 2020, 20:35 IST
ಅಕ್ಷರ ಗಾತ್ರ

ಬೆಂಗಳೂರು: ಗೊಟ್ಟಿಗೆರೆ ವಾರ್ಡ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ ₹86 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ, ವಾಸ್ತವದಲ್ಲಿ ಯಾವುದೇ ರಸ್ತೆಯೂ ಅಭಿವೃದ್ಧಿ ಕಂಡಿಲ್ಲ...!

ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಈ ವಾರ್ಡ್‌ ಚಿತ್ರಣದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ.

‘ಬಿಎನ್‌ಪಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಪೋರ್ಟಲ್‌ ಅಭಿವೃದ್ಧಿ ಪಡಿಸಿದ್ದು, ಬಿಬಿಎಂಪಿಯಿಂದ ಮಾಹಿತಿ ಪಡೆದು ಇಲ್ಲಿ ಪ್ರಕಟಿಸ
ಲಾಗುತ್ತಿದೆ.

ಅದರ ಪ್ರಕಾರ, ಗೊಟ್ಟಿಗೆರೆ ವಾರ್ಡ್‌ನಲ್ಲಿ ₹172 ಕೋಟಿ ಮೊತ್ತದ 405 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಅದರಲ್ಲಿ 203 ಕಾಮಗಾರಿ ಗಳು ಮುಕ್ತಾಯಗೊಂಡಿವೆ. ₹86 ಕೋಟಿ ಖರ್ಚಾಗಿದೆ’ ಎಂದು ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಹೇಳಿದರು.

‘ಇಲ್ಲಿನ ಸೌತ್ ಅವೆನ್ಯೂ ಲೇಔಟ್‌ ನಲ್ಲಿ ನಿವಾಸಿಗಳು ಕಾಮಗಾರಿ ಪಟ್ಟಿ ನೋಡಿ ಆಘಾತಗೊಂಡಿದ್ದಾರೆ. 5 ವರ್ಷಗಳ ಹಿಂದೆ ಇದ್ದ ರೀತಿಯಲ್ಲೇ ರಸ್ತೆಗಳಿವೆ. ಕೊಳಚೆ ನೀರು ರಸ್ತೆಯಲ್ಲೇ ಉಕ್ಕಿ ಹರಿದರೂ ಕೇಳುವವರಿಲ್ಲ ಎಂದು ಜನ ಹೇಳುತ್ತಿದ್ದಾರೆ. ಹಾಗಿದ್ದರೆ ಬಿಬಿಎಂಪಿ ಖರ್ಚು ಮಾಡಿರುವ ಹಣ ಎಲ್ಲಿ ಹೋಯಿತು’ ಎಂದು ಶ್ರೀಕಾಂತ್ ಪ್ರಶ್ನಿಸಿದರು.

‘ಈ ವಾರ್ಡ್‌ನಲ್ಲಿ ಕೈಗೊಂಡಿರುವ ಶೇ 80ರಷ್ಟು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸದೆ ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ. ಬೆಂಗಳೂರಿನ 4ಜಿ ಹಗರಣ ಇದಾಗಿದ್ದು, ನಗರದಲ್ಲಿನ ಮೂಲಸೌಕರ್ಯಗಳ ಕರುಣಾಜನಕ ಸ್ಥಿತಿಗೆ ಇದೇ ಕಾರಣ’ ಎಂದು ದೂರಿದರು.

‘₹172 ಕೋಟಿ ಮೊತ್ತದ 405 ಕಾಮಗಾರಿಗಳಿಗೆ ಯಾವ ಆಧಾರದಲ್ಲಿ ಅನುಮೋದನೆ ನೀಡಲಾಗಿದೆ, ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ನಾಗರಿಕರನ್ನು ಒಳಗೊಳ್ಳದೆ ಇರುವುದು ಏಕೆ, ಇಷ್ಟು ಹಣ ಖರ್ಚು ಮಾಡಿದರೂ ರಸ್ತೆಗಳ ಸ್ಥಿತಿ ಬದಲಾಗಿಲ್ಲ ಎಂದರೆ ಹಣ ಏನಾಯಿತು ಎಂಬುದು ನಮ್ಮ ಪ್ರಶ್ನೆ’ ಎಂದು ಅವರು ಹೇಳಿದರು.

‘ಯಾವುದೇ ಕಾಮಗಾರಿಗೂ ಅನುದಾನ ಇಲ್ಲ ಎಂದು ವಾರ್ಡ್‌ ಪ್ರತಿನಿಧಿಸುವ ಪಾಲಿಕೆ ಸದಸ್ಯರು ಹೇಳುತ್ತಾರೆ. ಬಿಬಿಎಂಪಿ ಮಾಹಿತಿ ಪ್ರಕಾರ ಇಷ್ಟೊಂದು ಮೊತ್ತ ಖರ್ಚಾಗಿದೆ. ಜನ ಯಾವುದನ್ನು ನಂಬಬೇಕು’ ಎಂದು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆಯ ಮಾಜಿ ಸದಸ್ಯೆ ಲಲಿತಾ ಟಿ. ನಾರಾಯಣ, ‘ನಮ್ಮ ವಾರ್ಡ್‌ನಲ್ಲಿ ಬನ್ನೇರುಘಟ್ಟ ಮುಖ್ಯ ರಸ್ತೆ ಹಾದು ಹೋಗುತ್ತದೆ. ಮುಖ್ಯ ರಸ್ತೆಗಳ ಕಾಮಗಾರಿಗಳೂ ನಮ್ಮ ವಾರ್ಡ್ ವಾಪ್ತಿಯ ಮಾಹಿತಿಯಲ್ಲಿ ಒಳಗೊಂಡಿರುತ್ತವೆ. ಸಣ್ಣ ಪುಟ್ಟ ವಾರ್ಡ್‌ ರಸ್ತೆಗಳಿಗೆ ದೊರೆತ ಅನುದಾನದಲ್ಲಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ’ ಎಂದರು.‌

ಬಿಬಿಎಂಪಿ ವೆಬ್‌ಸೈಟ್ ಹೇಳುವುದೇನು?
ಬಿಬಿಎಂಪಿ ಹೊಸದಾಗಿ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನಲ್ಲೂ ವಾರ್ಡ್‌ವಾರು ಕಾಮಗಾರಿಗಳ ಮಾಹಿತಿ ಲಭ್ಯವಾಗುತ್ತಿದೆ. ಅದರ ಪ್ರಕಾರ ಗೊಟ್ಟಿಗೆರೆ ವಾರ್ಡ್‌ ವ್ಯಾಪ್ತಿಯ 233 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ₹80.20 ಕೋಟಿ ಖರ್ಚು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT