ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾ ಉತ್ಸವ, ಸೈಕ್ಲಿಂಗ್‌ ಸ್ಪರ್ಧೆ: 1600 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ

ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಅಂಗವಾಗಿ ಕ್ರೀಡಾಕೂಟ;
Published 1 ಮಾರ್ಚ್ 2024, 9:10 IST
Last Updated 1 ಮಾರ್ಚ್ 2024, 9:10 IST
ಅಕ್ಷರ ಗಾತ್ರ

ಬೀದರ್‌: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 133ನೇ ಜಯಂತಿ ಅಂಗವಾಗಿ ಮಾರ್ಚ್‌ 31ರಂದು ನಗರದಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಉತ್ಸವ ಸಮಿತಿ ಹಾಗೂ ಜಿಲ್ಲಾ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಬಾಬುರಾವ್‌ ಪಾಸ್ವಾನ್‌ ತಿಳಿಸಿದರು.

ರೋಡ್‌ ಸೈಕ್ಲಿಂಗ್‌, ಅಂಗವಿಕಲರ ಮೋಟಾರ್‌ ಟ್ರ್ಯಾಕ್‌ ರೇಸ್‌, ವಾಲಿಬಾಲ್‌, ಕರಾಟೆ ಸೇರಿದಂತೆ ಇತರೆ ಕ್ರೀಡೆಗಳು ನಡೆಯಲಿವೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸೈಕ್ಲಿಂಗ್‌ ಕ್ರೀಡಾಕೂಟವು ಮೂರು ವಿಭಾಗಗಳಲ್ಲಿ ನಡೆಯಲಿದೆ. ಪುರುಷರ ವಿಭಾಗದ 40 ಕಿ.ಮೀ , ಮಹಿಳೆಯರು ಹಾಗೂ ಬಾಲಕರ ವಿಭಾಗದಲ್ಲಿ ತಲಾ 30 ಕಿ.ಮೀ, ಬಾಲಕಿಯರ ವಿಭಾಗದ 20 ಕಿ.ಮೀ ಸ್ಪರ್ಧೆ ನಡೆಯಲಿದೆ. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡು ಭಾಲ್ಕಿ ರಸ್ತೆ ಮೂಲಕ ಹಾದು ಪುನಃ ಅಂಬೇಡ್ಕರ್‌ ವೃತ್ತದಲ್ಲಿಯೇ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸೈಕ್ಲಿಂಗ್‌ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಗೇರ್‌ ಹಾಗೂ ಗೇರ್‌ ಇಲ್ಲದಿರುವ ಬೈಸಿಕಲ್‌ಗಳೊಂದಿಗೆ ಪಾಲ್ಗೊಳ್ಳಬಹುದು. ಆಧಾರ್‌ ಕಾರ್ಡ್‌ ಅಥವಾ ಜನ್ಮದಿನಾಂಕದ ಪ್ರಮಾಣ ಪತ್ರದೊಂದಿಗೆ ಹಾಜರಾಗುವುದು ಕಡ್ಡಾಯ. ವಾಲಿಬಾಲ್‌, ಕರಾಟೆ ಸೇರಿದಂತೆ ಇತರೆ ಕ್ರೀಡೆಗಳನ್ನು ನೆಹರೂ ಕ್ರೀಡಾಂಗಣದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಕ್ರೀಡಾಪಟುಗಳಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಇದೆ. ₹200 ಭರಿಸಿ ಹೆಸರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ನೋಂದಣಿಗೆ ಮಾರ್ಚ್‌ 28 ಕಡೆಯ ದಿನವಾಗಿದೆ. ಸುಮಾರು 1,600 ಕ್ರೀಡಾಪಟುಗಳು, ತರಬೇತುದಾರರು, ನಿರ್ಣಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸ್ಪರ್ಧಿಗಳಿಗೆ ಆಟದ ಸಾಮಗ್ರಿಗಳ ಕಿಟ್‌ ಪೂರೈಸಲಾಗುವುದು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕ್ರೀಡೆಯಲ್ಲಿ ಆರು ಜನರಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

ಅಸೋಸಿಯೇಷನ್‌ ಗೌರವ ಅಧ್ಯಕ್ಷ ಅನಿಲಕುಮಾರ ಬೆಲ್ದಾರ ಮಾತನಾಡಿ, ಸ್ಥಳೀಯವಾಗಿ ನಮ್ಮ ನಡುವೆ ಸಾಕಷ್ಟು ಕ್ರೀಡಾಪಟುಗಳು ಎಲೆಮರೆಕಾಯಿಯಂತಿದ್ದಾರೆ. ಅವರಿಗೆ ಕ್ರೀಡಾಕೂಟದ ಮೂಲಕ ವೇದಿಕೆ ಒದಗಿಸಲಾಗುವುದು. 2022ರ ನಂತರ ಕ್ರೀಡಾ ಉತ್ಸವ ಈ ವರ್ಷ ಆಯೋಜಿಸಲಾಗಿದೆ ಎಂದರು.

ಅಸೋಸಿಯೇಷನ್‌ ಕಾರ್ಯಾಧ್ಯಕ್ಷ ಧನಿಲ್‌ ಶಾಂತಪೂರೆ, ಉಪಾಧ್ಯಕ್ಷ ಸೂರ್ಯಕಾಂತ ಮೋರೆ, ಪ್ರಧಾನ ಕಾರ್ಯದರ್ಶಿ ಮೌಲಪ್ಪ ಎ. ಮಾಳಗೆ, ಕಾರ್ಯದರ್ಶಿ ಸಂದೀಪ ಕಾಂಟೆ, ಜಂಟಿ ಕಾರ್ಯದರ್ಶಿ ರಾಜಕುಮಾರ ಶೇರಿಕಾರ್‌, ಖಜಾಂಚಿ ಸುಮಿತ್‌ ಮೋರೆ ಹಾಜರಿದ್ದರು.

ಬೀದರ್‌ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ.
–ಬಾಬುರಾವ್‌ ಪಾಸ್ವಾನ್‌, ಅಧ್ಯಕ್ಷ, ಜಿಲ್ಲಾ ಒಲಿಂಪಿಕ್‌ ಅಸೋಸಿಯೇಷನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT