ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ₹24 ಲಕ್ಷ ಸ್ವತ್ತು ಜಪ್ತಿ, 18 ಜನರ ಬಂಧನ

ಅಕ್ರಮ ಪಡಿತರ ಅಕ್ಕಿ ಜಾಲದ ‘ಕಿಂಗ್‌ಪಿನ್‌’ ಯಾದಗಿರಿಯಲ್ಲಿ ಬಂಧನ; ಬೀದರ್‌ ಪೊಲೀಸರಿಂದ ಬಾಡಿ ವಾರೆಂಟ್‌
Published 30 ಜನವರಿ 2024, 14:08 IST
Last Updated 30 ಜನವರಿ 2024, 14:08 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಪೊಲೀಸರು ಹತ್ತು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 17 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು ₹24.26 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿ, 18 ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಡಿಸೆಂಬರ್‌, ಜನವರಿ ತಿಂಗಳಲ್ಲಿ ಹುಮನಾಬಾದ್‌ ತಾಲ್ಲೂಕಿನಲ್ಲಿ 10, ಭಾಲ್ಕಿಯಲ್ಲಿ 4, ಬೀದರ್‌ನಲ್ಲಿ 3 ಸೇರಿದಂತೆ ಒಟ್ಟು 17 ಪ್ರಕರಣಗಳು ನಡೆದಿದ್ದವು. ಸುಲಿಗೆ, ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು, ನೀರಿನ ಮೋಟಾರ್‌ –ವೈರ್‌ ಕಳವು, ಜಾನುವಾರುಗಳ ಕಳವು ಇದರಲ್ಲಿ ಸೇರಿವೆ. ಈ ಪ್ರಕರಣಗಳ ಸಂಬಂಧ ₹24.26 ಲಕ್ಷ ಮೌಲ್ಯದ ನಗದು, ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 10 ಬೈಕ್‌, 55 ಗ್ರಾಂ ಚಿನ್ನಾಭರಣ, ಮಹೀಂದ್ರಾ ಬೊಲೆರೊ ವಾಹನ, ಟ್ರ್ಯಾಕ್ಟರ್‌, 20 ಮೊಬೈಲ್‌ಗಳು ಸೇರಿವೆ. ಒಟ್ಟು 18 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪಡಿತರ ಅಕ್ಕಿ ಜಾಲದ ಕಿಂಗ್‌ಪಿನ್‌ ಬಂಧನ:

ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದ ಜಾಲದ ‘ಕಿಂಗ್‌ಪಿನ್‌’, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಸೋದರ ಸಂಬಂಧಿ ರಾಜು ರಾಠೋಡ್ ಎಂಬಾತನನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

‘ಬೀದರ್‌ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪಡಿತರ ಅಕ್ಕಿ ವಹಿವಾಟಿನ ಪ್ರಕರಣದಲ್ಲಿ ರಾಜು ರಾಠೋಡ್‌ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಆತನ ವಿಚಾರಣೆಗೆ ‘ಬಾಡಿ ವಾರೆಂಟ್‌’ ಹೊರಡಿಸಲಾಗಿದೆ. ಅಕ್ರಮ ಪಡಿತರ ಅಕ್ಕಿ ಜಾಲದ ಮೂವರನ್ನು ಈ ಹಿಂದೆಯೇ ಬಂಧಿಸಲಾಗಿದೆ. ರಾಜು ರಾಠೋಡ್‌ ಬಂಧನಕ್ಕೆ ಅನೇಕ ದಿನಗಳಿಂದ ತನಿಖೆ ನಡೆಸಲಾಗುತ್ತಿತ್ತು. ಅಂತಿಮವಾಗಿ ಯಾದಗಿರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಶೀಘ್ರ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಇದರಿಂದ ಇನ್ನಷ್ಟು ಮಾಹಿತಿ ಹೊರಬರಲಿದೆ’ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದರು.

‘ಜನರಿಂದ ಪಡಿತರ ಅಕ್ಕಿಯನ್ನು ಖರೀದಿಸಿ ತೆಲಂಗಾಣ, ಮಹಾರಾಷ್ಟ್ರದ ಕಾಳಸಂತೆಗೆ ಕಳಿಸಲಾಗುತ್ತಿತ್ತು. ಹಿಂದೆ ಈ ಪ್ರಕರಣದಲ್ಲಿ ಸಿಕ್ಕಿಬಿದ್ದವರು ತಪ್ಪು ಒಪ್ಪಿಕೊಂಡು ರಾಜು ರಾಠೋಡ್‌ ಮುಖ್ಯ ಆರೋಪಿಯೆಂದು ಹೇಳಿದ್ದಾರೆ. ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ 86 ಅಕ್ರಮ ಪಡಿತರ ಅಕ್ಕಿ ಮಾರಾಟದ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಶಾಮೀಲಾದವರ ವಿರುದ್ಧ ರೌಡಿಶೀಟ್‌ ತೆರೆಯಾಗುವುದು. ಈಗಾಗಲೇ 42 ಜನರ ಮೇಲೆ ರೌಡಿಶೀಟ್‌ ಹಾಕಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು.

‘ಇತ್ತೀಚೆಗೆ ನಗರದ ಕೈಗಾರಿಕಾ ಪ್ರದೇಶದಲ್ಲಿ ಜಪ್ತಿ ಮಾಡಿಕೊಂಡಿದ್ದ ₹1 ಕೋಟಿ ಮೌಲ್ಯದ ಅಕ್ರಮ ಗುಟ್ಕಾ, ಪಾನ್‌ ಮಸಾಲ ದಾಸ್ತಾನಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜು ಎಂಬಾತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ವಿದೇಶಕ್ಕೆ ಓಡಿ ಹೋಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆದಿದೆ’ ಎಂದು ಹೇಳಿದರು.

ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ, ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಜಯಕುಮಾರ ಹಾಜರಿದ್ದರು.

ಬೀದರ್‌ ಜಿಲ್ಲಾ ಪೊಲೀಸರು ಜಪ್ತಿ ಮಾಡಿರುವ ವಾಹನಗಳು
ಬೀದರ್‌ ಜಿಲ್ಲಾ ಪೊಲೀಸರು ಜಪ್ತಿ ಮಾಡಿರುವ ವಾಹನಗಳು

ಫೆಬ್ರುವರಿಯಲ್ಲಿ ಇ–ಚಲನ್‌ ಜಾರಿಗೆ

‘ಫೆಬ್ರುವರಿಯಲ್ಲಿ ಜಿಲ್ಲೆಯಲ್ಲಿ ಇ–ಚಲನ್‌ ಜಾರಿಗೆ ಬರಲಿದೆ.ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡ ಹಾಕಿ ರಸೀದಿ ನೀಡಲಾಗುತ್ತಿತ್ತು. ಅದು ಚಾಲಕರಿಗೆ ಸಂಶಯ ಮೂಡಿಸುತ್ತಿತ್ತು. ಈಗ ಮಷಿನ್‌ಗಳ ಮೂಲಕ ದಂಡ ವಿಧಿಸಲಾಗುತ್ತದೆ. ಎಲ್ಲವೂ ಪಾರದರ್ಶಕವಾಗಿ ಇರಲಿದೆ. ಶೀಘ್ರದಲ್ಲೇ 40 ಮಷಿನ್‌ಗಳು ಜಿಲ್ಲೆಗೆ ಬರಲಿವೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ‘ಜಿಲ್ಲೆಯಲ್ಲಿ ಇ–ಬೀಟ್‌ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಶೇ 95ರಷ್ಟು ಇ–ಬೀಟ್‌ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಕಲಬುರಗಿಯಲ್ಲಿ ಶೇ 89ರಷ್ಟು ಯಾದಗಿರಿಯಲ್ಲಿ ಶೇ 45ರಷ್ಟು ಇ–ಬೀಟ್‌ ಜಾರಿಗೆ ಬಂದಿದೆ. ರಾತ್ರಿ ವೇಳೆ ಹಠಾತ್‌ ಭೇಟಿ ಕೂಡ ಪೊಲೀಸರು ನೀಡುತ್ತಿದ್ದಾರೆ’ ಎಂದರು. ‘ನಗರದ ಪ್ರಮುಖ ಭಾಗಗಳಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸ್ವಯಂಚಾಲಿತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಎಷ್ಟೇ ವೇಗದಲ್ಲಿ ವಾಹನಗಳು ಹಾದು ಹೋದರೂ ಕ್ಯಾಮೆರಾದಲ್ಲಿ ಅದರ ನಂಬರ್‌ ರೀಡ್‌ ಆಗಲಿದೆ. ಇದರಿಂದ ಅಪರಾಧಗಳನ್ನು ಪತ್ತೆ ಹಚ್ಚಲು ಸಹಾಯವಾಗಲಿದೆ. ಜನ ಕೂಡ ಸಾಧ್ಯವಾದಷ್ಟು ಮನೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದರ ಬಗ್ಗೆ ಜಾಗೃತಿಗೆ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ಅನುಮತಿಯಿಲ್ಲದೆ ಲಕ್ಕಿ ಡ್ರಾ; ಆರು ಜನರ ಬಂಧನ

‘ಅನುಮತಿ ಇಲ್ಲದೆ ಬೀದರ್‌ ನಗರದ ಮಯೂರ ಹೋಟೆಲ್‌ನಲ್ಲಿ ವೆಂಕಟೇಶ್ವರ ಲಕ್ಕಿ ಡ್ರಾ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರು ಜನರನ್ನು ‌ಬಂಧಿಸಲಾಗಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ‘ಬಂಧಿತರಲ್ಲಿ ಬೀದರ್‌ನ ಇಬ್ಬರು ಮಹಾರಾಷ್ಟ್ರದ ನಾಲ್ವರು ಸೇರಿದ್ದಾರೆ. ದಾಳಿ ವೇಳೆ ₹1.92 ಲಕ್ಷ ನಗದು ‘ಎರ್ಟಿಗಾ’ ಕಾರು ಆರು ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT