ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಏಡ್ಸ್‌ ಸಂಖ್ಯೆ ಏರಿಳಿತ

ಬಸವಕಲ್ಯಾಣ, ಹುಮನಾಬಾದ್‌ ಹಾಗೂ ಬೀದರ್‌ನಲ್ಲಿ ಅತಿ ಹೆಚ್ಚು ಪ್ರಕರಣ ಬೆಳಕಿಗೆ
Published 1 ಡಿಸೆಂಬರ್ 2023, 4:31 IST
Last Updated 1 ಡಿಸೆಂಬರ್ 2023, 4:31 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಎಚ್‌ಐವಿ/ಏಡ್ಸ್‌ ಪ್ರಕರಣಗಳು ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದು ವರ್ಷ ಪ್ರಕರಣಗಳು ಹೆಚ್ಚಿಗೆ ವರದಿಯಾದರೆ, ಮತ್ತೊಂದು ವರ್ಷ ತಗ್ಗುತ್ತಿದೆ. ಮತ್ತೆ ಪುನಃ ಏರಿಕೆ ಕಾಣುತ್ತಿದೆ. ಹೀಗೆ ಸತತವಾಗಿ ಏರಿಳಿತವಾಗುತ್ತಿದೆ.

ಕಳೆದ ಐದು ವರ್ಷಗಳ ಅಂಕಿ ಸಂಖ್ಯೆ ಇದನ್ನು ಪುಷ್ಟೀಕರಿಸುತ್ತವೆ. 2019–20ರಲ್ಲಿ 342 ಜನರಲ್ಲಿ ಎಚ್‌ಐವಿ ಕಾಣಿಸಿಕೊಂಡಿತ್ತು. ಇದೇ ವೇಳೆ 17 ಗರ್ಭೀಣಿಯರಲ್ಲೂ ಎಚ್‌ಐವಿ ಬಂದಿತ್ತು. ಆದರೆ, ಮರು ವರ್ಷ 2020–21ರಲ್ಲಿ 217 ಪ್ರಕರಣಗಳು ಬೆಳಕಿಗೆ ಬಂದವು. 16 ಜನ ಗರ್ಭೀಣಿಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಒಟ್ಟು ಪ್ರಕರಣಗಳಲ್ಲಿ ನೂರಕ್ಕೂ ಹೆಚ್ಚು ತಗ್ಗಿತು. ಆದರೆ, 2021–22ರಲ್ಲಿ ಪುನಃ ಏರಿಕೆ ಕಂಡಿತು. ಆ ವರ್ಷ 224 ಪ್ರಕರಣಗಳು ವರದಿಯಾದವು. 2022–23ರಲ್ಲಿ ಪುನಃ ಹೆಚ್ಚಾಗಿ 280 ತಲುಪಿತು. 2023–24ರಲ್ಲಿ ಅಕ್ಟೋಬರ್‌ ವರೆಗೆ 202 ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಪ್ರಸಕ್ತ ವರ್ಷ ಮುಗಿಯಲು ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಇದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಕರಣಗಳಲ್ಲಿ ಏರಿಳಿತವಾಗುತ್ತಿದೆ ಹೊರತು ನಿಯಂತ್ರಣಕ್ಕೆ ಬರುತ್ತಿಲ್ಲ.

ಕಾರಣವೇನು:?

ಜಿಲ್ಲಾ ಏಡ್ಸ್‌ ನಿಯಂತ್ರಣ ತಡೆಗಟ್ಟುವ ವಿಭಾಗದ ಪ್ರಕಾರ, ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಬಸವಕಲ್ಯಾಣ, ಹುಮನಾಬಾದ್‌ ಹಾಗೂ ಬೀದರ್‌ ತಾಲ್ಲೂಕಿನಲ್ಲಿ. ಚಿಟಗುಪ್ಪ, ಔರಾದ್‌, ಹುಲಸೂರ, ಕಮಲನಗರ, ಭಾಲ್ಕಿಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಬಸವಕಲ್ಯಾಣ ಹಾಗೂ ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿ ಮೇಲೆ ಇವೆ. ನೆರೆಯ ತೆಲಂಗಾಣ, ಮಹಾರಾಷ್ಟ್ರದ ಜೊತೆಗೆ ಗಡಿ ಹಂಚಿಕೊಂಡಿವೆ. ಸಹಜವಾಗಿಯೇ ವ್ಯಾಪಾರ ವಹಿವಾಟು, ಜನರ ವಲಸೆ ಹೆಚ್ಚಿದೆ. ಅದರಲ್ಲೂ ಲಾರಿ ಚಾಲಕರು, ವಲಸೆ ಕಾರ್ಮಿಕರಲ್ಲಿ ಈ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಇನ್ನು, ಬೀದರ್‌ ಜಿಲ್ಲಾ ಕೇಂದ್ರವಾಗಿರುವುದರಿಂದ ಸ್ಥಳೀಯರು ಅನ್ಯ ಭಾಗಗಳಿಗೆ ಬೇರೆಡೆ ಹೋಗಿ ಬರುವುದು ಹೆಚ್ಚಿದೆ. ಈ ಕಾರಣಕ್ಕಾಗಿ ಈ ಮೂರು ತಾಲ್ಲೂಕುಗಳಲ್ಲಿ ಪ್ರತಿವರ್ಷ ಹೆಚ್ಚು ಪ್ರಕರಣ ವರದಿಯಾಗುತ್ತಿವೆ.

ಹೇಗಿದೆ ಚಿಕಿತ್ಸೆ:

ಎಚ್‌ಐವಿ ಏಡ್ಸ್‌ ಪೀಡಿತರಿಗೆ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಔಷಧಿ, ಸಮಾಲೋಚನೆಯೂ ನಡೆಸಲಾಗುತ್ತಿದೆ. ಆದರೆ, ಹೆಚ್ಚಿನವರು ಚಿಕಿತ್ಸೆಗೆ, ಆಪ್ತ ಸಮಾಲೋಚನೆಗೆ ಹಿಂಜರಿಯುತ್ತಿರುವುದು ಗೊತ್ತಾಗಿದೆ. ಎಚ್‌ಐವಿ ಇರುವುದು ಸಮಾಜಕ್ಕೆ ಗೊತ್ತಾದರೆ ಅವರು ನೋಡುವ ದೃಷ್ಟಿ ಸರಿ ಇರುವುದಿಲ್ಲ ಎಂಬ ಭಾವನೆ ಅವರಲ್ಲಿ ಮನೆ ಮಾಡಿದೆ. ಇನ್ನು, ಆರೋಗ್ಯ ಇಲಾಖೆಯಿಂದ ಈ ಕುರಿತು ಸಾಕಷ್ಟು ಪ್ರಚಾರ ಕೂಡ ಕೈಗೊಳ್ಳಲಾಗುತ್ತಿದೆ. ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ರೇಷನ್‌, ಉಚಿತ ಕಾನೂನು ನೆರವು, ತಾಂತ್ರಿಕ ಶಿಕ್ಷಣ, ಉಚಿತ ಪರೀಕ್ಷೆ, ಮನೆ ನಿರ್ಮಾಣ ಪ್ರಮುಖವಾದವುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT