ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣದಲ್ಲಿ ಸಿಎಂ ಸಿದ್ದರಾಮಯ್ಯ ಸನ್ಮಾನಕ್ಕೆ ಸಿದ್ಧತೆ

ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನ ಪಟ್ಟ ನೀಡಿದ್ದಕ್ಕೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸನ್ಮಾನ
Published 6 ಮಾರ್ಚ್ 2024, 16:12 IST
Last Updated 6 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ಬಸವಕಲ್ಯಾಣ: ಸಮಾನತೆಯ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕಾರಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾರ್ಚ್ 7 ರಂದು ಇಲ್ಲಿ ಸನ್ಮಾನಿಸಲಾಗುತ್ತಿದೆ. ಇದಕ್ಕಾಗಿ ತೇರು ಮೈದಾನದಲ್ಲಿ ಬೃಹತ್ ಮಂಟಪ ಹಾಗೂ ವೇದಿಕೆ ಸಿದ್ಧಪಡಿಸಲಾಗಿದೆ.

ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಈ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮ ಫೆಬ್ರುವರಿ 26ಕ್ಕೆ ನಿಗದಿಯಾಗಿತ್ತು. ಮಂಟಪ ಮತ್ತು ವೇದಿಕೆ ಸಿದ್ಧಪಡಿಸುವ ಕೆಲಸ ಎರಡು ವಾರಗಳ ಹಿಂದೆಯೇ ಆರಂಭ ಆಗಿತ್ತು. ಅನಿವಾರ್ಯ ಕಾರಣಕ್ಕೆ ಸಮಾರಂಭ ಮುಂದೂಡಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ದಿಢೀರನೆ ಮತ್ತೆ ಸಮಾರಂಭ ಹಮ್ಮಿಕೊಳ್ಳುವುದಕ್ಕೆ ನಿರ್ಧರಿಸಿದ್ದರಿಂದ ಎಲ್ಲವೂ ತರಾತುರಿಯಲ್ಲಿ ನಡೆದಿದೆ. ಮೈದಾನದ ಪ್ರವೇಶ ದ್ವಾರದ ಪಕ್ಕದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ತೇರಿನ ಕಟ್ಟೆಯ ಹತ್ತಿರ ಬೃಹತ್ ಮಂಟಪ ನಿರ್ಮಿಸಲಾಗಿದೆ. ಈಗಾಗಲೇ ವಿವಿಧೆಡೆಯಿಂದ ಪೊಲೀಸರು ಬಂದಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.

‘ಮುಖ್ಯಮಂತ್ರಿಯವರು ಪ್ರಥಮವಾಗಿ ಅನುಭವ ಮಂಟಪ ನಿರ್ಮಾಣ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸುತ್ತಾರೆ. ನಂತರ ಅಲ್ಲಿನ ದಾಸೋಹ ಭವನ ಉದ್ಘಾಟಿಸುವರು. ಅದಾದ ಮೇಲೆ ಮುಖ್ಯ ರಸ್ತೆಯ ಮೂಲಕ ತೇರು ಮೈದಾನಕ್ಕೆ ಬರಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಶಾಮನೂರು ಶಿವಶಂಕರಪ್ಪರಿಂದ ಉದ್ಘಾಟನೆ ಗುರುವಾರ (ಮಾ.7) ಬೆಳಿಗ್ಗೆ 11.30ಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ನಾಡಿನ ಮಠಾಧೀಶರು ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸನ್ಮಾನ ನಡೆಯುವುದು. ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಮತ್ತು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿನಂದನಾ ನುಡಿ ನುಡಿಯುವರು. ಪೌರಾಡಳಿತ ಸಚಿವ ರಹೀಂಖಾನ್ ಮಾಜಿ ಸಚಿವ ರಾಜಶೇಖರ ಪಾಟೀಲ ಹಾಗೂ ರಾಜ್ಯದ ಎಲ್ಲ ಸಚಿವರು ಉಪಸ್ಥಿತರಿರುವರು. ಬೀದರ್‌ನ ನೂಪುರ ಕಲಾತಂಡದ ಉಷಾ ಪ್ರಭಾಕರ ವಚನ ನೃತ್ಯ ಮಾಡುವರು. ದೇವರಾಜ ಯರಕಿಹಾಳ ಮತ್ತು ಸುರೇಶ ಹೂಗಾರ ವಚನ ಗಾಯನ ಮಾಡುವರು. ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೈದಾನದ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT