ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ನೀರಿನ ದಾಹ ತಣಿಸಲು ಅರವಟಿಗೆ ವ್ಯವಸ್ಥೆ

Published 6 ಏಪ್ರಿಲ್ 2024, 16:27 IST
Last Updated 6 ಏಪ್ರಿಲ್ 2024, 16:27 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಗಡಿ ಭಾಗದಲ್ಲಿ ಹೆಚ್ಚುತ್ತಿರುವ ತಾಪದಿಂದ ಜನರ ನೆಮ್ಮದಿ ಬದುಕಿಗೆ ಭಂಗ ಬಂದಿದೆ.
ಬೆಳಿಗ್ಗೆ ಸೂರ್ಯ ಉದಯಿಸುತ್ತಲೇ ಬಿಸಿಲಿನ ಪ್ರಖರತೆಯಿಂದ ಶರೀರ ಬೆವೆತು ನಿತ್ರಾಣವಾಗುತ್ತಿದೆ. ಕಳೆದ ಎರಡು ದಿನಗಳಿಂದ ಇಲ್ಲಿ 39-40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇಂತಹ ರಣ ಬಿಸಿಲಿನ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವುದು, ಕಾರ್ಮಿಕರು ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇವರ ಅನುಕೂಲಕ್ಕಾಗಿ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನವರು ಅರವಟಿಗೆ ವ್ಯವಸ್ಥೆ ಮಾಡಿದ್ದಾರೆ.

‘ಇಲ್ಲಿ ಮಾರ್ಚ್‍ನಿಂದಲೇ ತಣ್ಣನೆ ನೀರಿನ ಅರವಟಿಗೆ ವ್ಯವಸ್ಥೆ ಮಾಡಲಾಗಿದೆ. 30 ಲೀಟರ್ ಸಾಮರ್ಥ್ಯದ ಎರಡು ಅರವಟಿಗೆ ಇಡಲಾಗಿದೆ. ಆರಂಭದಲ್ಲಿ ಎರಡು ಅರವಟಿಗೆಗಳು ಒಂದು ಬಾರಿ ನೀರು ತುಂಬಿದರೆ ಸಾಕಿತ್ತು. ಆದರೆ ಈಗ ಎರಡು ಬಾರಿ ತುಂಬಿದರೂ ಸಾಕಾಗುತ್ತಿಲ್ಲ’ ಎನ್ನುತ್ತಾರೆ ಅರವಟಿಗೆ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಸಂತೋಷ ಮೇತ್ರೆ.

‘ಈ ಅರವಟಿಗೆ ವ್ಯವಸ್ಥೆಯಿಂದ ತುಂಬಾ ಜನರಿಗೆ ಪ್ರಯೋಜನವಾಗುತ್ತಿದೆ. ಸಂತಪುರ ದೊಡ್ಡ ಹೋಬಳಿ ಕೇಂದ್ರವಾಗಿರುವುದರಿಂದ ಇಲ್ಲಿ ಬೇರೆ ಬೇರೆ ಕಡೆಯಿಂದ ಜನ ಬಂದು ಹೋಗುತ್ತಾರೆ. ಇಲ್ಲಿಂದಲೇ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ. ಪರೀಕ್ಷೆ ಬರೆದು ಮನೆಗೆ ಹೋಗುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಬೀದರ್, ಕಲಬುರಗಿ, ಹೈದರಾಬಾದ್‍ನಿಂದ ರಾತ್ರಿ ಇಲ್ಲಿ ಬಂದು ಇಳಿದು ತಮ್ಮ ಊರಿಗೆ ಹೋಗುವವರಿಗೆ ಈ ಅರವಟಿಗೆ ತುಂಬಾನೇ ಅನುಕೂಲವಾಗುತ್ತಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ನಮ್ಮ ಕಾಲೇಜು ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಈ ರೀತಿನ ತಣ್ಣನೆ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ₹ 1,200ಕ್ಕೆ ಒಂದು ಅರವಟಿಗೆ, ಅದರಲ್ಲಿ ನಿತ್ಯ ಶುದ್ಧ ನೀರು ತಂದು ಹಾಕುವ ವ್ಯಕ್ತಿಗೆ ಒಂದಿಷ್ಟು ಕೂಲಿ ಕೊಡುತ್ತಿದ್ದೇವೆ. ಇದರಿಂದ ಸಾಕಷ್ಟು ಜನರಿಗೆ ತೃಪ್ತಿ ಸಿಗುತ್ತಿರುವುದು ನಮಗೆ ದೊಡ್ಡ ಆನಂದ. ಈ ನಮ್ಮ ಕಾರ್ಯಕ್ಕೆ ಭಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರ ಆಶೀರ್ವಾದವೇ ಪ್ರೇರಣೆ’ ಎಂದು ಸಂತಪುರ ಸಿದ್ಧರಾಮೇಶ್ವರ ಕಾಲೇಜು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT