ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ರಾಮನ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ

ಭಕ್ತಿಭಾವದಿಂದ ಎಲ್ಲೆಡೆ ರಾಮನಾಮ ಜಪ; ಲಾಡು ವಿತರಣೆ; ಅನ್ನದಾಸೋಹ ಕಾರ್ಯಕ್ರಮ
Published 23 ಜನವರಿ 2024, 6:08 IST
Last Updated 23 ಜನವರಿ 2024, 6:08 IST
ಅಕ್ಷರ ಗಾತ್ರ

ಬೀದರ್‌: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಜಿಲ್ಲೆಯ ರಾಮಭಕ್ತರಲ್ಲಿ ಭಕ್ತಿಯ ಅಲೆ, ಅಭಿಮಾನ ಉಕ್ಕೇರುವಂತೆ ಮಾಡಿತು.

ಅದಕ್ಕೆ ಸಾಕ್ಷಿಯೆಂಬಂತೆ ಎಲ್ಲೆಡೆ ಭಕ್ತಿಭಾವದಿಂದ ರಾಮನಿಗೆ ವಿಶೇಷ ಪೂಜೆ, ರಾಮನ ಜಪ, ಹನುಮಾನ್‌ ಚಾಲೀಸಾ ಪಠಣ ಕಾರ್ಯಕ್ರಮಗಳು ನಡೆದವು.

ನಗರದ ಗುಂಪಾ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ರಾಮ ಚೌಕ, ಫತ್ತೇ ದರವಾಜ್‌ ಸಂತೋಷಿ ಮಾತಾ ದೇವಸ್ಥಾನ, ಶಹಾಗಂಜ್‌ ಭವಾನಿ ಮಾತಾ ದೇವಸ್ಥಾನ, ರಾಮ ಮಂದಿರ, ಮಂಗಲ್‌ಪೇಟ್‌, ಕುಂಬಾರವಾಡ, ಶಿವನಗರ, ನೌಬಾದ್‌ ಸೇರಿದಂತೆ ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳು ಜರುಗಿದವು.

ವೃತ್ತಗಳಲ್ಲಿ ಕೇಸರಿ ವರ್ಣದ ಧ್ವಜ, ತಳಿರು ತೋರಣಗಳನ್ನು ಕಟ್ಟಲಾಗಿತ್ತು. ರಾಮ ನಿಂತ ಭಂಗಿಯ ಎತ್ತರದ ಫ್ಲೆಕ್ಸ್‌ಗಳನ್ನು ಅಳವಡಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಜೈ ಶ್ರೀರಾಮ’ ಎಂದು ಘೋಷಣೆಗಳನ್ನು ಹಾಕಿದರು. ಯುವಕರು ಬೈಕ್‌ಗಳಿಗೆ ಭಗವಾ ಧ್ವಜ ಕಟ್ಟಿಕೊಂಡು ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಕೆಲ ವಾಣಿಜ್ಯ ಮಳಿಗೆಯವರು ಕೂಡಿಕೊಂಡು ರಾಮನ ಭಾವಚಿತ್ರ ಇರಿಸಿ, ಪೂಜೆ ಸಲ್ಲಿಸಿದರು. ಜನರಿಗೆ ಲಾಡು, ಸಿಹಿ ವಿತರಿಸಿದರು. ಮತ್ತೆ ಕೆಲವೆಡೆ ಅನ್ನದಾಸೋಹಕ್ಕೂ ವ್ಯವಸ್ಥೆ ಮಾಡಲಾಗಿತ್ತು.

ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ 5 ಸಾವಿರ ಲಾಡುಗಳನ್ನು ವಿತರಿಸಲಾಯಿತು
ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ 5 ಸಾವಿರ ಲಾಡುಗಳನ್ನು ವಿತರಿಸಲಾಯಿತು

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ವೇದಿಕೆ ನಿರ್ಮಿಸಿ ರಾಮನಿಗೆ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ 5 ಸಾವಿರ ಲಾಡುಗಳನ್ನು ವಿತರಿಸಿದರು. ನಗರದ ಗುಂಪಾ ಬಳಿ ಯುವಕರು ಸಿಹಿ ವಿತರಿಸಿದರು. ದೀಪಕ್‌ ಸಿನಿಮಾ ಮಂದಿರದ ಬಳಿ ವಾಣಿಜ್ಯ ಮಳಿಗೆಯವರು ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು. ಜತೆಗೆ ರಾಮಚಂದ್ರನ ಗುಣಗಾನ ಮಾಡುವ ಸಂಗೀತವೂ ಹಾಕಿದ್ದರು.

ಬೀದರ್‌ನ ಓಲ್ಡ್‌ ಸಿಟಿ ರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನಿಗೆ ಆರತಿ ಬೆಳಗಿದರು
ಬೀದರ್‌ನ ಓಲ್ಡ್‌ ಸಿಟಿ ರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನಿಗೆ ಆರತಿ ಬೆಳಗಿದರು

ಬಿಜೆಪಿ ಕಚೇರಿಯಲ್ಲೂ ಕಾರ್ಯಕ್ರಮ ಆಚರಿಸಲಾಯಿತು. ಕಚೇರಿ ಪ್ರಭಾರಿ ರಾಜಶೇಖರ ನಾಗಮೂರ್ತಿ ಮಾತನಾಡಿ, ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಲಲ್ಲಾ ಮಂದಿರ ಸ್ಥಾಪನೆ ಒಂದು ಐತಿಹಾಸಿಕ ಘಟನೆಯಾಗಿದೆ. 500 ವರ್ಷಗಳ ಸುದೀರ್ಘ ಸಂಘರ್ಷದ ಫಲ ಇಂದು ಸಿಕ್ಕಿದೆ ಎಂದರು.

ಬೀದರ್‌ನ ಓಲ್ಡ್‌ ಸಿಟಿ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು
ಬೀದರ್‌ನ ಓಲ್ಡ್‌ ಸಿಟಿ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು

ಪ್ರಮುಖರಾದ ರಾಜಕುಮಾರ ಪಾಟೀಲ ನೇಮತಾಬಾದ, ಶ್ರೀನಿವಾಸ ಚೌಧರಿ, ಕಪಿಲ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಸಂಜುಕುಮಾರ ಸಜ್ಜನ, ಗೋಪಾಲಕೃಷ್ಣ ಕುಕಡಾಲ, ಯೋಗೇಶ್ವರಿ, ಸೋನಕಾಂಬಳೆ, ಸಂಗೀತಾ ಅಡಕಾಯಿ, ನಿತಿನ್‌ ಕರ್ಪೂರ, ರವೀಂದ್ರ ವಟ್ಟಗೆ, ವೀರನಾಥ ತೋಗಲೂರ್, ಕಾಶಿನಾಥ ಪಾಟೀಲ ಇತರರಿದ್ದರು.

ರಾಮ ಮಂದಿರದಲ್ಲಿ ಆಯೋಜಿಸಿದ ರಾಮೋತ್ಸವದಲ್ಲಿ ಪ್ರಮುಖರಾದ ಸುನೀಲ ಮಹಾರಾಜ, ಮನೋಹರ ದಂಡೆ, ಸತೀಶ ಮೊಟ್ಟೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಚಿಣ್ಣರು ರಾಮ ಲಕ್ಷ್ಮಣ ಸೀತೆಯ ವೇಷ ಧರಿಸಿ ಕೋಲಾಟವಾಡಿ ಗಮನ ಸೆಳೆದರು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಚಿಣ್ಣರು ರಾಮ ಲಕ್ಷ್ಮಣ ಸೀತೆಯ ವೇಷ ಧರಿಸಿ ಕೋಲಾಟವಾಡಿ ಗಮನ ಸೆಳೆದರು

ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ

ಬೀದರ್‌ನ ರಾಮ ಚೌಕದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕುಣಿದು ಕುಪ್ಪಳಿಸಿದರು. ಸಚಿವರು ಪಂಚೆ ಕೇಸರಿ ಶಲ್ಯ ಧರಿಸಿಕೊಂಡು ರಾಮನಿಗೆ ಜಯವಾಗಲಿ ಎಂದು ಘೋಷಣೆ ಕೂಡ ಹಾಕಿದರು. ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಜಲಾದೆ ಬಾಬುವಾಲಿ ಗುರುನಾಥ ಕೊಳ್ಳೂರ ಸೇರಿ ಇತರರು ಪಾಲ್ಗೊಂಡಿದ್ದರು. ಬಳಿಕ ಬ್ರಹ್ಮಪುರ ಕಾಲೊನಿ ಪ್ರತಾಪನಗರ ವಿದ್ಯಾನಗರ ಸೇರಿದಂತೆ ಹಲವೆಡೆ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಭಕ್ತರಿಗೆ ಪ್ರಸಾದ ವಿತರಿಸಿದರು. ‌ ‘ಐತಿಹಾಸಿಕ ದಿನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಾವೆಲ್ಲರೂ ಪುಣ್ಯವಂತರಾಗಿದ್ದೇವೆ. ಇದಕ್ಕೆ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದು ಸಚಿವರು ಹೇಳಿದರು.

ಬೀದರ್‌ನ ರಾಮಚೌಕದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದರು
ಬೀದರ್‌ನ ರಾಮಚೌಕದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದರು
ಬೀದರ್‌ನ ಜನಸೇವಾ ಸಂಸ್ಥೆಯ ಮಕ್ಕಳು ರಾಮನ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು
ಬೀದರ್‌ನ ಜನಸೇವಾ ಸಂಸ್ಥೆಯ ಮಕ್ಕಳು ರಾಮನ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು

ರಾಮನ ವೇಷಧಾರಿಗಳ ಮೆರವಣಿಗೆ

ಬೀದರ್‌ನಲ್ಲಿ ಸೋಮವಾರ ಜನಸೇವಾ ಶಿಶು ಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ರಾಮ ಲಕ್ಷ್ಮಣ ಸೀತೆ ಹಾಗೂ ಆಂಜನೇಯನ ವೇಷ ಧರಿಸಿ ಗಮನ ಸೆಳೆದರು. ಬಳಿಕ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ತಲೆ ಮೇಲೆ ಕಿರೀಟ ಭುಜಕ್ಕೆ ಬಾಣ ಹಾಕಿಕೊಂಡು ಕೈಯಲ್ಲಿ ಬಿಲ್ಲು ಹಿಡಿದಿದ್ದ ರಾಮ- ಲಕ್ಷಣ ಗದೆ ಹಿಡಿದುಕೊಂಡಿದ್ದ ಹನುಮಂತ ಹಾಗೂ ಸೀತೆ ಪಾತ್ರಧಾರಿಗಳು ಸಾರ್ವಜನಿಕರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT