ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಲಭೇದ ಮಾಡುವವರ ದೂರವಿಟ್ಟಿದ್ದ ಬಸವಣ್ಣ: ಎಂ.ವಿ. ತ್ಯಾಗರಾಜ್

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ವಿ. ತ್ಯಾಗರಾಜ್
Published 1 ಜನವರಿ 2024, 16:13 IST
Last Updated 1 ಜನವರಿ 2024, 16:13 IST
ಅಕ್ಷರ ಗಾತ್ರ

ಬೀದರ್‌: ‘ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಕುಲಭೇದ ಮಾಡುವವರನ್ನು ದೂರವಿಟ್ಟಿದ್ದ. ಎಲ್ಲರ ಮನಸ್ಸುಗಳನ್ನು ಒಂದುಗೂಡಿಸಿದ ಜಾತ್ಯಾತೀತ ವ್ಯಕ್ತಿ ಬಸವಣ್ಣ’ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ. ತ್ಯಾಗರಾಜ್ ಹೇಳಿದರು.

ನಗರದಲ್ಲಿ ಸೋಮವಾರ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಮತ್ತು ಮಂದಾರ ಕಲಾವಿದರ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 

ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಿದವನು ಬಸವಣ್ಣ. ಬ್ರಾಹ್ಮಣರು ಮತ್ತು ದಲಿತರನ್ನು ಒಂದುಗೂಡಿಸಿ ಸೌಹಾರ್ದಕ್ಕೆ ನಾಂದಿ ಹಾಡಿದನು. ತನ್ನ ವಚನಗಳಿಂದ ಜನರ ಮನಸ್ಸುಗಳನ್ನು ತಿದ್ದಿದನು. ಮೌಢ್ಯತೆಗೆ ಕತ್ತರಿ ಹಾಕಿದನು. ಅದೇ ಪರಂಪರೆಯನ್ನು, ಆದರ್ಶಗಳನ್ನು ವಚನ ಸಾಹಿತ್ಯ ಪರಿಷತ್ತು ತನ್ನ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಬಸವಣ್ಣ ಮತ್ತು ಶರಣರ ವಚನಗಳನ್ನು ಆಧಾರವಾಗಿಟ್ಟುಕೊಂಡು ಇಡೀ ರಾಜ್ಯದಲ್ಲಿ ಜಾತ್ಯಾತೀತ ಮೌಲ್ಯಗಳನ್ನು ಬೆಳೆಸುವ ಕೆಲಸ ಪರಿಷತ್ತು ಮಾಡುತ್ತಿದೆ. ಶರಣರ ದಾರಿಯಲ್ಲಿ ಸಾಗುತ್ತಿರುವವರಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲಿ ಶರಣ ಸಮ್ಮೇಳನಗಳನ್ನು, ಸಮಾರಂಭಗಳನ್ನು ಏರ್ಪಡಿಸಿ ಶರಣರ ತತ್ವಗಳನ್ನು ಪ್ರಚುರಪಡಿಸಲಾಗುತ್ತಿದೆ ಎಂದರು.

ಸುನಿತಾ ಮಾತನಾಡಿ, ಶರಣರ ವಚನಗಳಲ್ಲಿ ಮಾನವೀಯತೆ ಎದ್ದು ಕಾಣುತ್ತದೆ. ಉತ್ತಮ ಬದುಕಿಗೆ ಶರಣರ ವಚನಗಳು ದಾರಿ ದೀಪವಾಗಿವೆ ಎಂದರು.

‘ಸದ್ಗುರು ಚರಿತ್ರೆ’ ಗ್ರಂಥವನ್ನು ಬಿಡುಗಡೆಗೊಳಿಸಿದ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಾಳೆ ಮಾತನಾಡಿ, ಸಂತರ ಬದುಕು ನಮ್ಮ ಜೀವನಕ್ಕೆ ಆಧಾರ ಸ್ತಂಭ ಎಂದರು.

ಸಾಹಿತಿ ಸಂಜೀವಕುಮಾರ್ ಅತಿವಾಳೆ ಮಾತನಾಡಿ, ಸಮಕಾಲಿನ ಕಾವ್ಯ ಓದುವುದರಿಂದ ಗಟ್ಟಿ ಕಾವ್ಯಗಳನ್ನು ಕೊಡಲು ಸಾಧ್ಯ. ಕವಿಗಳು ಗ್ರಂಥಗಳನ್ನು ಪ್ರಕಟಿಸುವಾಗ ಶಬ್ದ ದೋಷಗಳು ಆಗದಂತೆ ಎಚ್ಚರ ವಹಿಸಬೇಕು. ನಮ್ಮ ಪೂರ್ವಜರ ಕವಿತೆಗಳನ್ನು ಅಧ್ಯಯನ ಮಾಡಬೇಕೆಂದು ಕಿವಿಮಾತು ಹೇಳಿದರು.

ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಬಹಳ ಕೆಲಸ ಮಾಡುತಿದೆ. ಸಮಾಜದಲ್ಲಿ ಅನೇಕ ಗ್ರಂಥಗಳು ಪ್ರಕಟಗೊಂಡು ಎಲ್ಲ ಕಡೆಗೆ ಚರ್ಚೆಯಾಗುತ್ತಿದೆ. ಜೊತೆಗೆ ಇವತ್ತಿನ ಜನಾಂಗ ತಂತ್ರಜ್ಞಾನಕ್ಕೆ ಒಪ್ಪಿಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸುವ ಮನೋಭಾವನೆ ಜನರಲ್ಲಿ ಮೂಡಿ ಬರಬೇಕು. ಕವಿಗಳು ಸಾಹಿತ್ಯ, ಕವಿತೆಗಳನ್ನು ವ್ಯಾಸಂಗ ಮಾಡಿ ಕೃಷಿ ಮಾಡಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ,  ಸಾಹಿತಿಗಳಾದ ಜಗನ್ನಾಥ ಕರಂಜಿ, ನಿಜಲಿಂಗ ರಗಟೆ, ಧರ್ಮೇಂದ್ರ ಪೂಜಾರಿ ಬಗ್ದೂರಿ, ಶೇಷಪ್ಪ ಚಿಟ್ಟಾ, ಜಗದೇವಿ ದುಬಲಗುಂಡೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಭಾಗದ ಕವಿಗಳು ಕವನ ವಾಚನ ಮಾಡಿದರು. 

ಪ್ರೊ. ಅಶೋಕ ಬೂದಿಹಾಳ, ಸಾಹಿತಿ ಎಂ.ಜಿ. ದೇಶಪಾಂಡೆ, ಧನರಾಜ್ ನಿಡೋದೆ, ಬಾಬು ಗುಂಡ, ರಮೇಶ್ ಇಟಗಿಕರ್, ಅಡೆಪ್ಪ ಹೊಸಮನಿ, ಶಂಕರ್ ಬಲ್ಲೂರ್, ಪ್ರಕಾಶ್ ಕುಲಕರ್ಣಿ ಸಂಗಮೇಶ್ವರ ಜ್ಯಾಂತೆ, ಕಲ್ಯಾಣರಾವ ಮರಕುಂದ ಕಾಡವಾದ, ಜಗನ್ನಾಥ ಯರನಳ್ಳಿ, ಭೀಮರಾವ್ ತೂಗಾಂವ, ವಿಜಯಕುಮಾರ ಪಾಪನಾಶ, ಶಂಭುಲಿಂಗ ವಾಲ್ದೊಡ್ಡಿ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಶಿಲ್ಪಾ ಮಜಗೆ, ಸ್ವರೂಪರಾಣಿ ಎಸ್.ಕೆ., ಜಗದೇವಿ ತಿಬಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT