ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ’

ಫೆ. 17ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿದ್ಯುಕ್ತ ಚಾಲನೆ
Published 17 ಫೆಬ್ರುವರಿ 2024, 6:12 IST
Last Updated 17 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಬೀದರ್‌: ‘ಸಮಾಜ ಸುಧಾರಕ ಬಸವೇಶ್ವರರನ್ನು ರಾಜ್ಯ ಸರ್ಕಾರವು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವುದರಿಂದ ಶನಿವಾರ (ಫೆ.17) ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ–ಕಾಲೇಜುಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಭಾವಚಿತ್ರಗಳನ್ನು ಹಾಕಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರರ ಭಾವಚಿತ್ರದ ಅಡಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಬರಹ ಹೊಂದಿರಬೇಕು. ಜಿಲ್ಲಾಡಳಿತದಿಂದ ಶನಿವಾರ ಬೆಳಿಗ್ಗೆ 11ಕ್ಕೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭಾವಚಿತ್ರ ಅನಾವರಣಗೊಳಿಸುವರು ಎಂದು ಹೇಳಿದರು.

ಇದಕ್ಕೂ ಮುನ್ನ ಅಂದರೆ ಬೆಳಿಗ್ಗೆ 9.30ಕ್ಕೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಮೂರ್ತಿಗೆ ಪುಷ್ಪ ಗೌರವ ಸಲ್ಲಿಸಿ, ಅಲ್ಲಿಂದ ರಂಗಮಂದಿರದವರೆಗೆ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರ್‌, ಶಾಸಕರ ಅಧ್ಯಕ್ಷತೆಯಲ್ಲಿ ಈ ಕಾರ‍್ಯಕ್ರಮ ನಡೆಯಲಿದೆ. 12ನೇ ಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣನವರು ಜಾತಿ, ವರ್ಗ ರಹಿತ ಸಮಾಜ, ಕಾಯಕದ ಮಹತ್ವದಂತಹ ವಿಚಾರಗಳನ್ನು ಪ್ರತಿಪಾದಿಸಿದ್ದರು. ಸಮಾಜದಲ್ಲಿ ಮಹಿಳಾ ಅಸಮಾನತೆ, ಮೂಢನಂಬಿಕೆಗಳನ್ನು ವಿರೋಧಿಸಿ ಕಲ್ಯಾಣ ರಾಜ್ಯ ಕಟ್ಟಲು ಮುಂದಾಗಿದ್ದರು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್, ಸಿದ್ದರಾಮ ಶರಣರು ಬೆಲ್ದಾಳ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಧನ್ನೂರ, ರಾಜ್ಯ ಲಿಂಗಾಯತ ಯುವ ಒಕ್ಕೂಟದ ಅಧ್ಯಕ್ಷ ಆನಂದ ದೇವಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂಧಗೆ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ವಚನ ಚಾರಿಟಬಲ್‌ ಸೊಸೈಟಿ ಅಧ್ಯಕ್ಷೆ ಲಿಂಗಾರತಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಾರ್ವತಿ ಸೋನಾರೆ, ಸುರೇಶ ಸ್ವಾಮಿ, ಕುಶಾಲ ಪಾಟೀಲ, ಶಿವಶಂಕರ ಟೋಕರೆ, ವಿರೂಪಾಕ್ಷ ಗಾದಗಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT