ಮಂಗಳವಾರ, ಅಕ್ಟೋಬರ್ 22, 2019
25 °C
238ನೇ ಶರಣ ಸಂಗಮ

ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಬಸವಣ್ಣ: ಚಿಂತಕ ವೆಂಕಟೇಶ ಕೆ. ಜನಾದ್ರಿ

Published:
Updated:
Prajavani

ಬೀದರ್: ‘ಅಸ್ಪಶ್ಯತೆಯ ಆಚರಣೆ ಈ ದೇಶಕ್ಕೆ ಅಂಟಿದ ಮಹಾ ಪಿಡುಗು. ಇದನ್ನು ಹೋಗಲಾಡಿಸಲು ಬಸವಾದಿ ಪ್ರಮಥರು ಕಲ್ಯಾಣ ಕ್ರಾಂತಿಗೈದರು. ಶೂದ್ರ ಮತ್ತು ಪಂಚಮರ ಪರವಾಗಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದವರಲ್ಲಿ ಬಸವಣ್ಣ ಮೊದಲಿಗರು’ ಎಂದು ಕಲಬುರ್ಗಿಯ ಚಿಂತಕ ವೆಂಕಟೇಶ ಕೆ. ಜನಾದ್ರಿ (ಕನಕಗಿರಿ) ಹೇಳಿದರು.

ನಗರದ ಶರಣ ಉದ್ಯಾನದಲ್ಲಿ ನಡೆದ 238ನೇ ಶರಣ ಸಂಗಮದಲ್ಲಿ ‘ಬಹಿರಂಗದಿಂದ ಅಂತರಂಗದೆಡೆಗೆ’ ಕುರಿತು ಮಾತನಾಡಿದರು.

‘ಸ್ವರ್ಗ, ನರಕಗಳು ಇಲ್ಲವೆಂದು ಸಾಧಿಸಿ ತೋರಿ, ದಯಾ ಸಂಸ್ಕೃತಿಯನ್ನು ಹರಡಿದರು. ಇಷ್ಟಲಿಂಗದ ಮೂಲಕ ದೇವನನ್ನು ಖಾಸಗಿಕರಣ ಮಾಡಿ ಜಂಗಮ ಲಿಂಗದ ಮೂಲಕ ಮನುಷ್ಯ ಸಾಮಾಜೀಕರಣ ಮಾಡಿದ ಮಹಾಮಹೀಮ ಬಸವಣ್ಣ. ದೇಹವೇ ದೇವಾಲಯವೆಂದು ಸಾರಿ ದೇವಾಲಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ನಿಲ್ಲಿಸಿದರು. ಹೊರಗಿನ ದೇವನನ್ನು ಅರಸುವುದಕ್ಕಿಂತ ತನ್ನೊಳಗಿನ ದೇವನನ್ನು ಕಂಡುಕೊಂಡರೆ ಜಗತ್ತು ಸುಂದರವಾಗುವುದು’ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಬಸವಣ್ಣನವರು ಸಾರಿದ ಕಳಬೇಡ ಕೊಲಬೇಡ ಮುಂತಾದ ಸಪ್ತ ಶೀಲಗಳನ್ನು ಬಹಿರಂಗದ ಹೇಳಿಕೆಗೆ ಸೀಮಿತಗೊಳಿಸದೇ ಅವುಗಳನ್ನು ನಮ್ಮ ಅಂತರಂಗಕ್ಕೆ ಇಳಿಸಿಕೊಳ್ಳಬೇಕು. ತನ್ಮೂಲಕ ಅಂತರಂಗ ಶುದ್ಧಿಯನ್ನು ಸಾಧಿಸಬೇಕು’ ಎಂದು ತಿಳಿಸಿದರು.

‘ಇಷ್ಟಲಿಂಗ ಯೋಗವು ಸಾಧಕರನ್ನು ಅಂತರಂಗಕ್ಕೆ ಕರೆದೊಯ್ಯುವ ಮಹಾಮಾರ್ಗವಾಗಿದೆ. ಪ್ರತಿ ದಿನವು 15 ರಿಂದ 45 ನಿಮಿಷಗಳ ಇಷ್ಟಲಿಂಗ ಮೇಲೆ ದೃಷ್ಟಿ ಇಡುವುದರಿಂದ ಅಂತರಂಗ ಪ್ರವೇಶ ಸಾಧ್ಯವಾಗುವುದು. ವ್ಯಕ್ತಿಯಲ್ಲಿನ ದೋಷಗಳು ಇಲ್ಲವಾಗುವವು. ಇದು ಸ್ವ-ಅವಲೋಕನಕ್ಕೆ ದಾರಿ ಮಾಡಿಕೊಟ್ಟು ವ್ಯಕ್ತಿತ್ವದಲ್ಲಿನ ಎಲ್ಲ ದೋಷಗಳನ್ನು ಕಳೆದುಕೊಳ್ಳಲು ಅನುವು ಮಾಡಿಕೊಡವವು’ ಎಂದು ಹೇಳಿದರು.

‘ಸ್ವ-ವ್ಯಕ್ತಿತ್ವದ ವಿಕಾಸಗೊಳಿಸಿಕೊಂಡವರು ಸಮಾಜೋಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡರೆ ಉನ್ನತ ಸಾಧನೆಗಳನ್ನು ಮಾಡಬಹುದು. ಉತ್ತಮ ಸಮಾಜ ನಿರ್ಮಾಣ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಗುರುನಾಥ ಕೊಳ್ಳುರು ಮಾತನಾಡಿ, ‘ಶರಣ ಸಂಗಮ ಪವಿತ್ರ ವೇದಿಕೆಯಾಗಿದೆ’ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಗಂಗಾಂಬಿಕೆ ಅಕ್ಕ ಮಾತನಾಡಿ, ‘ಒಳಗೂ ಕಲ್ಯಾಣ, ಹೊರಗೂ ಕಲ್ಯಾಣವೇ ಶರಣರ ಗುರಿಯಾಗಿತ್ತು’ ಎಂದರು.

ಮುಖ್ಯಅತಿಥಿಯಾಗಿ ಪ್ರಥಮ ದರ್ಜೆ ಗುತ್ತಿಗೆದಾರಸೂರ್ಯಕಾಂತ ಅಲಮಾಜೆ ಭಾಗವಹಿಸಿದ್ದರು. ಚಂದ್ರಶೇಖರ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು.

ಕಲಬುರ್ಗಿ ಎ.ಪಿ.ಎಮ್.ಸಿ.ಯ ಉಪಾಧ್ಯಕ್ಷ ರಾಜು ಕೋಟೆ, ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನ ರೇಡಿಯಾಲೋಜಿ ವಿಭಾಗದ ಶರಣಯ್ಯ ಸ್ವಾಮಿ ಮಠಪತಿ ಅವರನ್ನು ಸನ್ಮಾನಿಸಲಾಯಿತು.

ಪೂರ್ಣಚಂದ್ರ ಮೈನಾಳೆ ನಿರ್ದೇಶನದಲ್ಲಿ ನೃತ್ಯಾಂಗನ ನೃತ್ಯಾಲಯದ ಮಕ್ಕಳು ಆಕರ್ಷಕವಾಗಿ ವಚನ ನೃತ್ಯ ಪ್ರದರ್ಶಿಸಿದರು. ಜಯರಾಜ ಖಂಡ್ರೆಯವರು ಸ್ವಾಗತಿಸಿದರು. ಮೀರಾ ಖೇಣಿಯವರು ನಿರೂಪಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)