ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಡಿಸಿಸಿ ಬ್ಯಾಂಕ್ ಚುನಾವಣೆ ಅ. 4ರಂದು; ನಿಷೇಧಾಜ್ಞೆ ಜಾರಿ

Published 3 ಅಕ್ಟೋಬರ್ 2023, 14:09 IST
Last Updated 3 ಅಕ್ಟೋಬರ್ 2023, 14:09 IST
ಅಕ್ಷರ ಗಾತ್ರ

ಬೀದರ್‌: ಜಿದ್ದಾಜಿದ್ದಿಗೆ ಕಾರಣವಾಗಿರುವ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಆಡಳಿತ ಮಂಡಳಿಗೆ ಬುಧವಾರ (ಅ.4) ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಬ್ಯಾಂಕಿನ ಹಾಲಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಖಂಡ್ರೆಯವರು ಅವರ ಸಹೋದರ ಅಮರ ಖಂಡ್ರೆ ಪೆನಾಲ್‌ ಬೆಂಬಲಿಸಿದರೆ, ಉಮಾಕಾಂತ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಚುನಾವಣೆ ಕಾವು ಹೆಚ್ಚಾಗಿದೆ.

ಒಟ್ಟು 15 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಮೂವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬುಧವಾರ(ಅ.4) ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ನಗರದ ಬಿಡಿಸಿಸಿ ಕಚೇರಿಯಲ್ಲಿ ಮತದಾನ ನಡೆಯಲಿದೆ. ಸಂಜೆ 4.30ಕ್ಕೆ ಮತ ಎಣಿಕೆ ಜರುಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯ 200 ಮೀಟರ್‌ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಬಸವೇಶ್ವರ ವೃತ್ತದಿಂದ ಭಗತ್‌ ಸಿಂಗ್‌ ವೃತ್ತದ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಚುನಾವಣಾಧಿಕಾರಿ ಲವೀಶ್‌ ಒರ್ಡಿಯಾ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರು ನೀರಿನ ಬಾಟಲಿ, ಪೆನ್ನು, ಪೆನ್ಸಿಲ್, ಮೊಬೈಲ್, ಸ್ಮಾರ್ಟ್ ವಾಚ್, ಸ್ಪೈ ಕ್ಯಾಮೆರಾ, ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತದಾನ ಕೇಂದ್ರದೊಳಗೆ ಕೊಂಡೊಯ್ಯುವುದರ ಮೇಲೆ ನಿಷೇಧ ಹೇರಲಾಗಿದೆ. ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಮತದಾರರು ಮತದಾನ ಮಾಡಲು ‘ಡೆಲಿಗೇಟ್‌‘ ಫಾರಂ, ಭಾವಚಿತ್ರವಿರುವ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಮತದಾನ ಕೇಂದ್ರದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್‌ ಮಾಡಲಾಗುವುದು. ನಿರ್ಭಯವಾಗಿ , ಮುಕ್ತವಾಗಿ ಮತ ಚಲಾವಣೆಗೆ ವ್ಯವಸ್ಥೆ ಮಾಡಲಾಗಿದೆ. ಡಿ.ಸಿ.ಸಿ ಬ್ಯಾಂಕಿನ ಕೇಂದ್ರ ಕಚೇರಿಗೆ ಬುಧವಾರ ರಜೆ ಘೋಷಿಸಲಾಗಿದೆ. ಯಾವುದೇ ಬ್ಯಾಂಕಿನ ವ್ಯವಹಾರ ನಡೆಯುವುದಿಲ್ಲ. ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೈಕೋರ್ಟ್‌ ಕಲಬುರಗಿ ವಿಭಾಗೀಯ ಪೀಠವು ಎಂಟು ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಅವರು ಬಂದು ಹಕ್ಕು ಚಲಾಯಿಸಬಹುದು. ಅವರು ಭಾವಚಿತ್ರವಿರುವ ಯಾವುದಾದರೂ ಒಂದು ಗುರುತಿನ ಚೀಟಿಯೊಂದಿಗೆ ಬಂದು ಮತ ಚಲಾಯಿಸಬಹುದಾಗಿದೆ. ಡಿಸಿಸಿ ಬ್ಯಾಂಕಿನ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಸುರಕ್ಷತೆ ದೃಷ್ಟಿಯಿಂದ ಮುಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT