ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಜಕೀಯಕ್ಕೆ ಹೊಸಬ, ಜನಸೇವೆ ಹೊಸತಲ್ಲ: ಸಾಗರ್‌ ಖಂಡ್ರೆ

Published 24 ಏಪ್ರಿಲ್ 2024, 23:18 IST
Last Updated 24 ಏಪ್ರಿಲ್ 2024, 23:18 IST
ಅಕ್ಷರ ಗಾತ್ರ
‘ರಾಜಕೀಯಕ್ಕೆ ನಾನು ಹೊಸಬ ಇರಬಹುದು. ಆದರೆ, ಜನಸೇವೆ ಹೊಸತಲ್ಲ. ಮೊದಲಿನಿಂದಲೂ ಜನರ ಸೇವೆ ಮಾಡುತ್ತ ಬಂದಿದ್ದೇನೆ. ರಾಜಕೀಯ ಹಾಗೂ ಜನಸೇವೆ ಎರಡೂ ಒಂದೇ. ಹೊಸ ಅನುಭವ ಬೇಕಿಲ್ಲ’ – ಇದು ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರ ಮಾತುಗಳು. 26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆ ಅವರು ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಅತಿ ಕಿರಿಯ ವಯಸ್ಸಿನವರು. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ಪ್ರ

ಚುನಾವಣೆ ಪ್ರಚಾರ ಹೇಗೆ ನಡೆಯುತ್ತಿದೆ? ಮತದಾರರ ಪ್ರತಿಕ್ರಿಯೆ ಹೇಗಿದೆ?

ಎಲ್ಲ ಕಡೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲರೂ ಬದಲಾವಣೆ ಬಯಸುತ್ತಿದ್ದಾರೆ. ಯುವಕರಿದ್ದೀರಿ ನಿಮ್ಮನ್ನೇ ಬೆಂಬಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಜನರನ್ನು ಭೇಟಿಯಾದಾಗ, ಸಂಸದರನ್ನು ನೋಡಿದ್ದೀರಾ ಎಂದು ಪ್ರಶ್ನಿಸುತ್ತೇನೆ. ಶೇ 90ರಷ್ಟು ಜನ ಅವರ ಮುಖವನ್ನೇ ನೋಡಿಲ್ಲ ಎಂದು ಹೇಳಿದ್ದಾರೆ. ಒಂದು ಸಲವೂ ನಮ್ಮೂರಿಗೆ ಸಂಸದರೇ ಬಂದಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ.

ಪ್ರ

ಸಾಗರ್‌ ಖಂಡ್ರೆ ಹೊಸಬರು. ಇನ್ನೂ ಚಿಗುರು ಮೀಸೆ ಬಂದಿಲ್ಲ. ರಾಜಕಾರಣದ ಆಳ–ಅಗಲ ಗೊತ್ತಿಲ್ಲ. ಅವರಿಗೆ ಅನುಭವ ಇಲ್ಲ ಎಂದು ನಿಮ್ಮ ವಿರೋಧಿಗಳು ಹೇಳುತ್ತಿದ್ದಾರೆ. ಅದರ ಬಗ್ಗೆ ಏನು ಹೇಳುವಿರಿ?

ರಾಜಕೀಯಕ್ಕೆ ನಾನು ಹೊಸಬ ಇರಬಹುದು. ಆದರೆ, ಜನಸೇವೆ ಹೊಸತಲ್ಲ. ಮೊದಲಿನಿಂದಲೂ ಜನರ ಸೇವೆ ಮಾಡುತ್ತ ಬಂದಿದ್ದೇನೆ. ರಾಜಕೀಯ ಹಾಗೂ ಜನಸೇವೆ ಎರಡೂ ಒಂದೇ. ಹೀಗಾಗಿ ಹೊಸ ಅನುಭವ ಬೇಕಿಲ್ಲ. ಜನಸೇವೆಯಿಂದ ಅನುಭವ ಸಿಕ್ಕಿದೆ. ಜನರ ಸಮಸ್ಯೆಗೆ ಯಾವ ರೀತಿ ಸ್ಪಂದಿಸಬೇಕು ಎನ್ನುವುದು ಗೊತ್ತಿದೆ. ಮನಸ್ಸು, ಇಚ್ಛಾಶಕ್ತಿಯಿದ್ದರೆ ಏನು ಬೇಕಾದರೂ ಕಲಿಯಬಹುದು.

ಪ್ರ

ರಾಜಕೀಯ ಪ್ರವೇಶಕ್ಕೆ ಏನಾದರೂ ಒತ್ತಡ ಇತ್ತಾ?

ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇರಲಿಲ್ಲ. ನಾನು ಸ್ವಯಂಪ್ರೇರಣೆಯಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಬೆಂಗಳೂರಿನ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ಐದು ವರ್ಷಗಳ ಬಿಬಿಎ, ಎಲ್‌ಎಲ್‌ಬಿ ಇಂಟಿಗ್ರೇಟೆಡ್‌ ಕೋರ್ಸ್‌ ಮುಗಿಸಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ನಾನು ಇಂಟರ್ನಶಿಪ್‌ ಮಾಡಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ನಾನು ಭಾಲ್ಕಿಗೆ ಬಂದೆ. ಆಗ ನಮ್ಮ ತಂದೆ ಈಶ್ವರ ಖಂಡ್ರೆಯವರಿಗೆ ಕೊರೊನಾ ಬಂದಿತ್ತು. ಅವರ ಪರ ನಾನೇ ಕಿಟ್‌ ಕೊಡುವುದು, ಆಕ್ಸಿಜನ್‌ ಪೂರೈಸುವ ಕೆಲಸ ಮಾಡಿದ್ದೆ. ಆನಂತರ ನನಗೆ ಗೊತ್ತಿಲ್ಲದೆ ರಾಜಕೀಯ ಕ್ಷೇತ್ರಕ್ಕೂ ಬಂದೆ.

ಪ್ರ

ಮತದಾರರು ನಿಮಗೇಕೆ ಮತ ಹಾಕಬೇಕು?

ಕಳೆದ ಹತ್ತು ವರ್ಷಗಳಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕಿತ್ತೋ ಆಗಿಲ್ಲ. ಯಾವುದೇ ಬದಲಾವಣೆ ಆಗಿಲ್ಲ. ಭಗವಂತ ಖೂಬಾ ಅವರು ಕೇಂದ್ರ ಸಚಿವರಾಗಿ ಐದು ವರ್ಷಗಳಲ್ಲಿ ಬಹಳ ಕೆಲಸ ಮಾಡಬೇಕಿತ್ತು. ಆದರೆ, ಅವರಿಂದ ಆಗಲಿಲ್ಲ. ಜನರ ಬೇಡಿಕೆಗಳನ್ನು ಈಡೇರಿಸಿಲ್ಲ. ರೈತರು ಬೆಳೆ ವಿಮೆ ಕಟ್ಟಿದರೂ ಅವರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಕೊಡಿಸಿಲ್ಲ. ಅನೇಕ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನಪ್ರತಿನಿಧಿಯಾದವರು ಜನರ ಕೈಗೆ ಸಿಗಬೇಕು. ಆದರೆ, ಖೂಬಾ ಅವರು ಜನರ ಕೈಗೆ ಸಿಗಲ್ಲ. ಜನರೊಂದಿಗೆ ಅವರ ಸಂಪರ್ಕ ಕಡಿದು ಹೋಗಿದೆ. ಆ ಗ್ಯಾಪ್‌ ತುಂಬುವ ಕೆಲಸ ಮಾಡುತ್ತೇನೆ. ಅದಕ್ಕಾಗಿ ಜನ ಮತ ಕೊಡುತ್ತಾರೆ ಎಂಬ ಭರವಸೆ ಇದೆ.

ಪ್ರ

ಯಾವ ವಿಷಯಗಳು ಚುನಾವಣೆಯಲ್ಲಿ ನಿಮಗೆ ಅನುಕೂಲಕರವಾಗಿವೆ?

ಕಾಂಗ್ರೆಸ್‌ ಪಕ್ಷ ಕೊಟ್ಟಿರುವ ಗ್ಯಾರಂಟಿಗಳು. ಅದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ. ಪ್ರತಿ ಕುಟುಂಬಕ್ಕೂ ಸಹಾಯವಾಗುತ್ತಿದೆ. ನನ್ನ ಅಜ್ಜ, ದೊಡ್ಡಪ್ಪ, ತಂದೆಯವರು ಐದು ದಶಕಗಳಿಂದ ಜನಸೇವೆ ಮಾಡುತ್ತ ಬಂದಿದ್ದಾರೆ. ಅದು ಕೂಡ ನನಗೆ ಸಹಾಯವಾಗಲಿದೆ. ಚುನಾವಣೆಯಲ್ಲಿ ಗೆದ್ದ ನಂತರ ಇವರು ಎಲ್ಲಿಯೂ ಹೋಗಿ, ಕೂರಲ್ಲ ಎಂಬುದು ಜನರಿಗೆ ಗೊತ್ತಿದೆ. ಭಾಲ್ಕಿ ಕ್ಷೇತ್ರದ ಜನ ನಮ್ಮ ಕುಟುಂಬಕ್ಕೆ ಹತ್ತು ಸಲ ಆಶೀರ್ವಾದ ಮಾಡಿದ್ದಾರೆ. ಜನರ ಪ್ರೀತಿ ಎಷ್ಟೆಂಬುದು ಇದರಿಂದ ಗೊತ್ತಾಗುತ್ತದೆ. ನಾವು ಸಮಾಜಕ್ಕೆ ಏನಾದರೂ ಮಾಡಿದಾಗಲೇ ಇದು ಸಾಧ್ಯವಲ್ಲವೇ?

ಪ್ರ

ನಿಮ್ಮ ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿಯ ಭಗವಂತ ಖೂಬಾ ಅವರು ಒಂದು ಸಲ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ನಿಮ್ಮ ತಂದೆ (ಈಶ್ವರ ಬಿ. ಖಂಡ್ರೆ) ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಬೇಕೆಂದಾಗ ಒತ್ತಡ ಅನಿಸಿತೆ?

ನನ್ನ ಮೇಲೆ ಆ ತರಹದ ಯಾವುದೇ ಒತ್ತಡ ಇಲ್ಲ. 2014ರಲ್ಲಿ ಮೊದಲ ಸಲ ಭಗವಂತ ಖೂಬಾ ಅವರು ಗೆದ್ದಾಗ ಅವರು ಕೂಡ ಈ ಕ್ಷೇತ್ರಕ್ಕೆ ಹೊಸಬರಾಗಿದ್ದರು. ಅವರದು ಹೊಸ ಮುಖ ಆಗಿತ್ತು. ಎರಡನೇ ಸಲ ಅವರು ಮೋದಿ ಅಲೆಯಲ್ಲಿ ಗೆದ್ದರು. ನಮಗೆ ಸಿದ್ಧತೆಗೆ ಸಮಯಾವಕಾಶ ಇದ್ದಿರಲಿಲ್ಲ. ಆದಕಾರಣ ಅವರು ಗೆದ್ದಿದ್ದರು. ಈ ಸಲ ನಾವು ಸಿದ್ಧರಿದ್ದೇವೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಜನ ಹೊಸ ಮುಖ ಬಯಸುತ್ತಿದ್ದಾರೆ.

ಪ್ರ

ಕಾಂಗ್ರೆಸ್‌ ಐದು ಗ್ಯಾರಂಟಿಗಳ ಬಗ್ಗೆ ಹೇಳುತ್ತಿದೆ. ಆದರೆ, ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರೇ ಗ್ಯಾರಂಟಿ ಎನ್ನುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುವಿರಿ?

ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳು ಪ್ರತಿಯೊಂದು ಮನೆಗೂ ತಲುಪುತ್ತಿವೆ. ಜನ ನಮ್ಮನ್ನು ಸ್ವೀಕರಿಸಿದ್ದಾರೆ. ಎಲ್ಲರೂ ಸಂತೋಷವಾಗಿದ್ದಾರೆ. ಎಲ್ಲರೂ ಬೆಂಬಲಿಸುತ್ತಿದ್ದಾರೆ.

ಪ್ರ

ಗೆದ್ದರೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಏನು ಮಾಡುವ ಕನಸಿದೆ?

ಜಿಲ್ಲೆಯಲ್ಲಿ ಒಂದು ಸೋಲಾರ್‌ ಪಾರ್ಕ್‌ ಮಾಡುವ ಮಹದಾಸೆ ಇದೆ. ಇದರಿಂದ ರೈತರಿಗೆ ನಿರಂತರವಾಗಿ ವಿದ್ಯುತ್‌ ಸಿಗುತ್ತದೆ. ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಪ್ರಯೋಜನ ತಲುಪಿಸುವೆ. ಯುವಕರಿಗೆ ಉದ್ಯೋಗ ಕೊಡಬೇಕು. ಶುದ್ಧ ಕುಡಿವ ನೀರು ಪೂರೈಸಬೇಕಿದೆ. ಬೀದರ್‌ ಜಿಲ್ಲೆಯನ್ನು ಪ್ರವಾಸೋದ್ಯಮದ ಹಬ್‌ ಮಾಡಬೇಕು. ಇವೆಲ್ಲ ನನ್ನ ಕನಸಿನ ಯೋಜನೆಗಳು. ಪ್ರವಾಸೋದ್ಯಮ ಬೆಳೆದರೆ ಜಿಲ್ಲೆಯ ಆರ್ಥಿಕತೆ ಕೂಡ ಬೆಳೆಯುತ್ತದೆ.

ಪ್ರ

ಖಂಡ್ರೆ ಪರಿವಾರದವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಅದಕ್ಕೇನು ಹೇಳುವಿರಿ?

ಯಾರು ನಮ್ಮನ್ನು ನಾಮಿನೇಟ್‌ ಮಾಡಿ ಕುರ್ಚಿ ಮೇಲೆ ಕೂರಿಸುತ್ತಿಲ್ಲ. ಜನ ನಮ್ಮನ್ನು ಆಶೀರ್ವದಿಸಿ ಕಳಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿಯಲ್ಲಿ ಒಂದು ಲಕ್ಷ ಜನ ಬೆಂಬಲಿಸಿದ್ದಾರೆ. ಈಗಲೂ ಜನ ತೀರ್ಮಾನಿಸುತ್ತಾರೆ. ಜನರ ಸೇವೆ ಮಾಡುತ್ತಾರೆ ಎಂಬ ಭರವಸೆಯಿಂದ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಜನರ ಆಶೀರ್ವಾದದಿಂದಲೇ ಗೆದ್ದು ಬರುತ್ತಿದ್ದೇವೆ. ಜನಸೇವೆಯೇ ಮುಖ್ಯ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT