ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹೆಸರಿಗಷ್ಟೇ ಬಿಜೆಪಿ–ಜೆಡಿಎಸ್‌ ಮೈತ್ರಿ!

ಬೀದರ್‌ ಲೋಕಸಭೆ: ಇದುವರೆಗೆ ಮಿತ್ರ ಪಕ್ಷಗಳ ಮಧ್ಯೆ ನಡೆಯದ ಜಂಟಿ ಸಭೆ
Published 19 ಮಾರ್ಚ್ 2024, 4:52 IST
Last Updated 19 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಜಂಟಿಯಾಗಿ ಎದುರಿಸಲು ನಿರ್ಧರಿಸಿದೆ. ಆದರೆ, ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈತ್ರಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಬೆಳವಣಿಗೆಗಳೇ ನಡೆದಿಲ್ಲ.

ಈಗಾಗಲೇ ಬೀದರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಪ್ರಚಾರ ಕಾರ್ಯವೂ ಶುರುವಾಗಿದೆ. ಆದರೆ, ಇದುವರೆಗೆ ಮಿತ್ರ ಪಕ್ಷಗಳಿಂದ ಜಂಟಿ ಪ್ರಚಾರ ನಡೆದಿಲ್ಲ. ಕನಿಷ್ಠ ಪಕ್ಷ ಎರಡೂ ಪಕ್ಷಗಳ ಮುಖಂಡರು ಒಂದು ಕಡೆ ಕುಳಿತು ಸಭೆ ಮಾಡಿ, ಚರ್ಚೆಯೂ ನಡೆಸಿಲ್ಲ. ಇದರಿಂದ ಸಹಜವಾಗಿಯೇ ಸ್ಥಳೀಯ ಜೆಡಿಎಸ್‌ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಮುಖಂಡರು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೂರು ಕೂಡ ನೀಡಿದ್ದಾರೆ.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಬಿ.ವೈ.ವಿಜಯೇಂದ್ರ ಅವರು ಕೆಲ ದಿನಗಳ ಹಿಂದೆ ಬೀದರ್‌ ನಗರಕ್ಕೆ ಬಂದಿದ್ದರು. ದೊಡ್ಡ ಕಾರ್ಯಕ್ರಮ ಕೂಡ ಸಂಘಟಿಸಲಾಗಿತ್ತು. ಆದರೆ, ಆಗಲೂ ಅವರಾಗಲಿ, ಅವರ ಪಕ್ಷದ ಮುಖಂಡರಾಗಲಿ ನಮ್ಮನ್ನು ಸಂಪರ್ಕಿಸಲಿಲ್ಲ. ಅವರು ತಮ್ಮದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಜೆಡಿಎಸ್‌ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಬಿಜೆಪಿಯವರು ಇದುವರೆಗೆ ಪಕ್ಷದ ಯಾವುದೇ ಸಭೆಗಳಿಗೂ ನಮ್ಮನ್ನು ಕರೆದಿಲ್ಲ. ಭಗವಂತ ಖೂಬಾ ಅವರು ಸೋಮವಾರ (ಮಾ.18) ಬೆಳಿಗ್ಗೆ ಕರೆ ಮಾಡಿರುವುದು ಬಿಟ್ಟರೆ ಬೇರೆಯವರು ಮಾತಾಡಿಲ್ಲ. ಮೈತ್ರಿ ಬಗ್ಗೆ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸಭೆ ಕರೆದು ಚರ್ಚಿಸಿಲ್ಲ. ಇದುವರೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿಲ್ಲ. ಬಿ.ವೈ.ವಿಜಯೇಂದ್ರ ಅವರು ಬಂದಾಗ ಪಕ್ಷದ ಹಿರಿಯ ಮುಖಂಡರನ್ನು ಆಹ್ವಾನಿಸಬೇಕಿತ್ತು. ಅದು ಕೂಡ ಮಾಡಲಿಲ್ಲ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿಯಲ್ಲಿ ಬೀದರ್‌, ಕಲಬುರಗಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಅದರ ಬಗ್ಗೆಯೂ ನಮಗೆ ಮಾಹಿತಿ ಕೊಡಲಿಲ್ಲ. ಈ ವಿಷಯ ಎಚ್‌.ಡಿ.ಕುಮಾರಸ್ವಾಮಿಯವರ ಗಮನಕ್ಕೆ ತಂದಿರುವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರನ್ನು ಸಂಪರ್ಕಿಸಿದಾಗ, ‘ಸೀಟು ಹಂಚಿಕೆ ಅಂತಿಮಗೊಂಡ ನಂತರ ಜಂಟಿ ಸಭೆ, ಸಮಾರಂಭಗಳು ನಡೆಯಲಿವೆ’ ಎಂದಷ್ಟೇ ಹೇಳಿದರು.

ಸೋಮನಾಥ ಪಾಟೀಲ 
ಸೋಮನಾಥ ಪಾಟೀಲ 

ನಾವು ಬಿಜೆಪಿ ಪರ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ ಇಲ್ಲಿಯತನಕ ಬಿಜೆಪಿಯವರು ನಮ್ಮನ್ನು ಸಂಪರ್ಕಿಸಿಲ್ಲ.

–ರಮೇಶ ಪಾಟೀಲ ಸೋಲಪೂರ ಜೆಡಿಎಸ್‌ ಜಿಲ್ಲಾಧ್ಯಕ್ಷ

ಜೆಡಿಎಸ್‌ ಜಿಲ್ಲಾಧ್ಯಕ್ಷರನ್ನು ಸಂಪರ್ಕಿಸಿದ್ದೆ. ಅವರ ಪಕ್ಷದ ರಾಜ್ಯ ಸಮಿತಿಯಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ತಿಳಿಸಿದ್ದಾರೆ.

–ಸೋಮನಾಥ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ

ಕುಸಿಯುತ್ತಿರುವ ಜೆಡಿಎಸ್‌ ನೆಲ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಆರಂಭದಿಂದಲೂ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಡುತ್ತ ಬಂದಿದೆ. ಲೋಕಸಭೆ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ಗಟ್ಟಿ ನೆಲೆ ಇಲ್ಲ. ಇಷ್ಟೇ ಅಲ್ಲ ವರ್ಷಗಳು ಕಳೆದಂತೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಅದರ ಬಲ ಕುಗ್ಗುತ್ತ ಹೋಗುತ್ತಿದೆ. ಕಳೆದ ವರ್ಷದ ಏಪ್ರಿಲ್‌–ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್‌ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ಕರಲ್ಲಿ ಎರಡರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಬಂಡೆಪ್ಪ ಕಾಶೆಂಪುರ್‌ ಬಿಟ್ಟರೆ ಜಿಲ್ಲೆಯಲ್ಲಿ ಆ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಮುಖಂಡರು ಕೂಡ ಈಗಿಲ್ಲ. ಹಳೆ ಮೈಸೂರಿನಂತೆ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಾಬಲ್ಯ ಇಲ್ಲ. ಅದು ಕೂಡ ಬಿಜೆಪಿ ಆ ಪಕ್ಷವನ್ನು ಕಡೆಗಣಿಸಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಕಮಲ ಪಕ್ಷದ ನಾಯಕರು ಜೆಡಿಎಸ್‌ನವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT