ಶುಕ್ರವಾರ, ಜುಲೈ 30, 2021
23 °C
ಲಾಕ್‌ಡೌನ್‌: ಹಗಲು ತೆರವು, ರಾತ್ರಿ ಬಿಗುವು

ರಸ್ತೆಗಿಳಿದ ಬಸ್‌, ತೆರೆದುಕೊಂಡ ಅಂಗಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಹಗಲಿನ ವೇಳೆ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆಗೊಳಿಸಿದ ನಂತರ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ನಿಧಾನವಾಗಿ ವ್ಯಾಪಾರ ವಹಿವಾಟು ಆರಂಭವಾಗಿದೆ.

ಸೋಮವಾರ ಬೆಳಿಗ್ಗೆ ನಗರದ ಎಲ್ಲ ಅಂಗಡಿಗಳು ತೆರೆದುಕೊಂಡವು. ಬಟ್ಟೆ, ಬಾಂಡೆ, ಅಂಗಡಿಗಳು, ಎಲೆಕ್ಟ್ರಾನಿಕ್ಸ್‌, ಮಾಲ್‌ಗಳಲ್ಲೂ ನಿಧಾನವಾಗಿ ವಹಿವಾಟು ಶುರುವಾಯಿತು. ಜನರು ಖರೀದಿಯತ್ತ ಮುಖ ಮಾಡಿದರು. ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸಿದರು.

ಗಾಂಧಿ ಗಂಜ್‌, ಮೋಹನ್‌ ಮಾರ್ಕೆಟ್‌ ಹಾಗೂ ಓಲ್ಡ್‌ಸಿಟಿಯ ಕಿರಾಣಿ ಅಂಗಡಿಗಳಲ್ಲೇ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಅಂಗಡಿಗಳ ಮುಂದೆ ಅಂತರ ಕಾಯ್ದುಕೊಂಡು ನಿಲ್ಲಲು ಮಾರ್ಕ್‌ ಮಾಡಿದರೂ ಜನ ಅಂತರ ಕಾಯ್ದುಕೊಳ್ಳಲಿಲ್ಲ. ಅಂಗಡಿ ಮಾಲೀಕರ ಮನವಿಗೂ ಕಿವಿಕೊಡಲಿಲ್ಲ.

ನಗರದ ಹೋಟೆಲ್‌ಗಳು ಗ್ರಾಹಕರಿಗೆ ಅವಕಾಶ ಕಲ್ಪಿಸಿದವು. ಶೇಕಡ 50ರಷ್ಟು ಪ್ರಮಾಣದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬೀದಿ ಬದಿ ಚಹಾ ಅಂಗಡಿಗಳು ತೆರೆದುಕೊಂಡಿದ್ದರಿಂದ ಗ್ರಾಹಕರು ಚಹಾ ಸೇವಿಸಿದರು. ಉಪಾಹಾರವನ್ನೂ ಸೇವಿಸಿದರು.

‘ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆಗೊಳಿಸಿರುವುದು ಸಂತಸ ಉಂಟು ಮಾಡಿದೆ. ಪ್ರತಿಯೊಬ್ಬರು ಮಾಸ್ಕ್‌ ಧರಿಸಿ ಮಾರುಕಟ್ಟೆಗೆ ಬಂದರೆ ಎಲ್ಲರಿಗೂ ಒಳ್ಳೆಯದು. ಕೋವಿಡ್‌ ನಿಯಂತ್ರಿಸಲು ಸಾಧ್ಯವಾಗಲಿದೆ ಅಷ್ಟೇ ಅಲ್ಲ, ವ್ಯಾಪಾರಿಗಳು ನಷ್ಟ ಅನುಭವಿಸುವುದೂ ತಪ್ಪಲಿದೆ’ ಎಂದು ವ್ಯಾಪಾರಿ ಶಿವಕುಮಾರ ಪಟಪಳ್ಳಿ ಹೇಳಿದರು.

ಬಸ್ ಸಂಚಾರ ಆರಂಭ: ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೀದರ್‌ ವಿಭಾಗದ ಎಲ್ಲ ನಿಲ್ದಾಣಗಳಿಂದ ಸೋಮವಾರ ಬಸ್ ಸಂಚಾರ ಆರಂಭವಾಗಿದೆ.

ಬೆಳಿಗ್ಗೆ ಆರು ಗಂಟೆಗೆ ಬೀದರ್‌ನಿಂದ ಕಲಬುರ್ಗಿಗೆ ಮೊದಲ ಬಸ್‌ ಸಂಚರಿಸಿತು. ದೈನಂದಿನ ಕೆಲಸಕ್ಕೆ ಹೋಗುವವರು ನಿಲ್ದಾಣಕ್ಕೆ ಬಂದು‌ ಬಸ್‌ಗಳ ಮೂಲಕ ತೆರಳಿದರು. ಬಸ್‌ಗಳಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಕಲಬುರ್ಗಿಗೆ ಹೋಗುತ್ತಿದ್ದ ಬಸ್‌ಗಳಲ್ಲಿ ನಿಗದಿತ ಪ್ರಮಾಣದಲ್ಲಿ ಪ್ರಯಾಣಿಕರು ಭರ್ತಿಯಾದ ನಂತರವೇ ಬಸ್‌ಗಳನ್ನು ಬಿಡಲಾಯಿತು.

ಸಂಜೆಯವರೆಗೂ ಹೆಚ್ಚಿನ ಪ್ರಯಾಣಿಕರು ಕಂಡು ಬರಲಿಲ್ಲ. ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಶೇ 50ರಷ್ಟು ಪ್ರಯಾಣಿಕರು ಬರುವವರೆಗೆ ಕಾಯುತ್ತಿದ್ದರಿಂದ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸಲಿಲ್ಲ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್‌ ನಡೆಸಿದ ಅವರ ಹೆಸರು, ಮೊಬೈಲ್‌ ಸಂಖ್ಯೆ ಬರೆದುಕೊಂಡು ನಂತರ ಬಸ್ಸಿನೊಳಗೆ ಬಿಡಲಾಗುತ್ತಿತ್ತು. ಆದರೆ, ಈ ಬಾರಿ ಪ್ರಯಾಣಿಕರು ನೇರವಾಗಿಯೇ ಬಸ್‌ನಲ್ಲಿ ಏರಿ ಕುಳಿತರು. ಪ್ರಯಾಣಿಕರು ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯಗೊಳಿಸಲಾಗಿದೆ.

ಪ್ರಯಾಣಿಕರ ಕೊರತೆಯಿಂದಾಗಿ ದೂರದ ಊರುಗಳ ಬಸ್‌ಗಳು ಸಂಚರಿಸಲಿಲ್ಲ. ಬೆಂಗಳೂರು, ಬಳ್ಳಾರಿ, ದಾವಣಗೆರೆ, ಮುಂಬೈ, ಪುಣೆ, ಸೊಲ್ಲಾಪುರ, ಶಿರಡಿ ಬಸ್‌ಗಳು ಮಂಗಳವಾರದಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಹಾಗೂ ತೆಲಂಗಾಣದ ಸಾರಿಗೆ ಬಸ್‌ಗಳು ಜಿಲ್ಲೆಯಲ್ಲಿ ಸಂಚರಿಸಿದವು. ಖಾಸಗಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಿರಲಿಲ್ಲ. ಗ್ರಾಮೀಣ ಹಾಗೂ ನಗರ ಸಾರಿಗೆ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಟಂಟಂ ಹಾಗೂ ಅಟೊರಿಕ್ಷಾಗಳು ಕೋವಿಡ್‌ ನಿಯಮ ಪಾಲನೆ ಮಾಡದೆ ಮನಬಂದಂತೆ ಪ್ರಯಾಣಿಕರನ್ನು ಕೂರಿಸಿಕೊಂಡು ಸಾಗಿದವು. ಗಡಿ ಗ್ರಾಮಗಳಲ್ಲಿ ಟ್ರ್ಯಾಕ್ಸ್‌, ಕ್ರೂಸರ್ ಒಳಗಡೆ ಹಾಗೂ ವಾಹನದ ಮೇಲೆ ಕುಳಿತು ಪ್ರಯಾಣ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು