ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕರಿಗಳಲ್ಲಿ ಕೇಕ್‌ಗಳ ಭರ್ಜರಿ ಮಾರಾಟ

ಹೊಸ ವರ್ಷದ ಸಂಭ್ರಮ ಆಚರಣೆಗೆ ಭರದ ಸಿದ್ಧತೆ
Last Updated 30 ಡಿಸೆಂಬರ್ 2018, 9:06 IST
ಅಕ್ಷರ ಗಾತ್ರ

ಬೀದರ್: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಕುಟುಂಬದೊಂದಿಗೆ ಹೊಸ ವರ್ಷಾಚರಣೆ ಮಾಡುವವರಿಗಾಗಿ ನಗರದ ಪ್ರಮುಖ ಬೇಕರಿಗಳಲ್ಲಿ ಸಿದ್ಧಪಡಿಸಲಾಗಿರುವ ಕೇಕ್‌ಗಳು ಕಾಯುತ್ತಿವೆ.

ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ಮಡಿವಾಳ ವೃತ್ತ, ಹಾರೂರಗೇರಿ ಕಮಾನ್, ಗುಂಪಾ ಸಮೀಪ ಕೇಕ್‌ ಮಾರಾಟ ಮಳಿಗೆಗಳು ತೆರೆದುಕೊಂಡಿವೆ. ಚಿಟ್ಟೆ, ಗಿಟಾರ್, ಚಂದ್ರ, ನಕ್ಷತ್ರ, ಹೃದಯ ಹಾಗೂ 2019 ಸಂಖ್ಯೆ ಇರುವ ವೈವಿಧ್ಯಮಯ ಕೇಕ್‌ಗಳು ಮಾರಾಟಕ್ಕೆ ಸಿದ್ಧವಾಗಿವೆ. ಈ ಬಾರಿ ಹೊಸ ವರ್ಷದ ಸ್ವಾಗತಕ್ಕೆ ಯುವಕರು ಭರದ ಸಿದ್ಧತೆ ಮಾಡಿಕೊಳ್ಳುತ್ತಿರುವುದು
ಕಂಡು ಬರುತ್ತಿದೆ.

ನಗರದ ಬೇಕರಿಗಳಲ್ಲಿ 10 ಕೆ.ಜಿ., 5 ಕೆ.ಜಿ., 4 ಕೆ.ಜಿ., 2 ಕೆ.ಜಿ., 1 ಕೆ.ಜಿ. ಹಾಗೂ ಅರ್ಧ ಕೆ.ಜಿ. ತೂಕದ ನೂರಾರು ಕೇಕ್‌ಗಳು ಸಿದ್ಧಗೊಂಡಿವೆ. ಪ್ರತಿ ಕೆ.ಜಿ.ಗೆ ₹ 130 ರಿಂದ ₹ 400 ವರೆಗೆ ಮಾರಾಟವಾಗುತ್ತಿವೆ. ಕ್ರೀಮ್‌ ಕೇಕ್‌, ಬಟರ್‌ಸ್ಕಾಚ್ ಕೇಕ್, ಬ್ಲ್ಯಾಕ್‌ ಫಾರೆಸ್ಟ್‌, ಪಿಸ್ತಾ, ಬಾದಾಮ್, ಪೈನಾಪಲ್‌ ಕೇಕ್‌ಗಳಿಗೆ ಬೇಡಿಕೆ ಇದೆ. ಬೇಕರಿಗಳ ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

‘ಕೇಕ್‌ ತಯಾರಿಕೆಗೆ ಈ ಬಾರಿ ಎರಡು ಕ್ವಿಂಟಲ್‌ ಮೈದಾ ಹಾಗೂ ನಾಲ್ಕು ಸಾವಿರ ಮೊಟ್ಟೆಗಳನ್ನು ಬಳಸಿದ್ದೇವೆ. ಕಳೆದ ವರ್ಷ 400 ಕೇಕ್‌ ಮಾರಾಟ ಮಾಡಿದ್ದೇವೆ. ಈ ವರ್ಷ ಒಂದು ಕೆ.ಜಿ.ಯ 800 ಕೇಕ್‌ಗಳು ಮಾರಾಟವಾಗುವ ನಿರೀಕ್ಷೆ ಇದೆ. ಈಗಾಗಲೇ ಕೆಲವರು ಮುಂಗಡ ಹಣ ನೀಡಿ ಹೋಗಿದ್ದಾರೆ’ ಎಂದು ಚೌಬಾರಾ ರಸ್ತೆಯ ಕುಸುಂಗಲ್ಲಿರುವ ತವ್ವಕಲ್‌ ಬೇಕರಿ ಮಾಲೀಕ ಅಬ್ದುಲ್‌ ರೆಹಮಾನ್ ಹೇಳುತ್ತಾರೆ.

‘20 ವರ್ಷಗಳಿಂದ ಕೇಕ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ವರ್ಷ ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಕೇಕ್‌ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಎಂಟು ಜನ ಸೇರಿ ಪುರರುಸೊತ್ತಿಲ್ಲದಂತೆ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

ಯುವಕ, ಯುವತಿಯರು ಹಾಗೂ ಮಕ್ಕಳು ತಂಡಗಳಲ್ಲಿ ಬೇಕರಿಗಳಿಗೆ ಬಂದು ಬಣ್ಣ ಬಣ್ಣದ ಕೇಕ್‌ಗಳನ್ನು ಖರೀದಿಸುತ್ತಿದ್ದಾರೆ. ಯುವಕರು ಮಧ್ಯರಾತ್ರಿ ವೇಳೆಗೆ ಸರಿಯಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷ ಬರಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ.

ಕ್ಯಾಂಪ್‌ ಫೈರ್‌:ಜಿಲ್ಲೆಯ ರಾಜಕಾರಣಿಗಳಿಗೆ ಜಾಕ್‌ಪಾಟ್‌ಲಭಿಸಿದ ನಂತರ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಕಾರ್ಯಕರ್ತರು ಅಲ್ಲಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಜಂಗಲ್‌ ರೆಸಾರ್ಟ್ನಲ್ಲಿ ಆಗಲೇ ಕೊಠಡಿಗಳು ಬುಕ್‌ ಆಗಿವೆ. ಹೈದರಾಬಾದ್‌ ಮೂಲದ ಎಂಜಿನಿಯರ್‌ಗಳು ಹಾಗೂ ಉದ್ಯಮಿಗಳು ಕ್ಯಾಂಪ್‌ ಫೈರ್‌ ಹಾಗೂ ಸಂಗೀತದ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ಕೆಲ ಯುವಕರು ಮನೆಯ ತಾರಸಿ, ಹೋಟೆಲ್‌, ಧಾಬಾ ಮತ್ತು ತೋಟಗಳಲ್ಲಿ ಕೇಕ್ ಕತ್ತರಿಸಲು, ಸಂಗೀತಕ್ಕೆ ಹೆಜ್ಜೆ ಹಾಕುತ್ತ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಹಾಗೂ ಮೋಜು ಮಸ್ತಿಗೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.
ಡಿಜೆ, ಸೌಂಡ್ ಸಿಸ್ಟಮ್ ಹಾಗೂ ನಗರದ ಕೆಲ ಹೋಟೆಲ್‌ಗಳಲ್ಲಿ ಸಾಮೂಹಿಕ ಭೋಜನಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಸಂಜೆಯೇ ನಗರಕ್ಕೆ ಒಂದು ಲಾರಿ ಬಿಯರ್‌ ಬಾಟಲಿಗಳು ಬಂದಿದ್ದು, ನಗರದ ಬಾರ್‌ಗಳಲ್ಲಿ ದಾಸ್ತಾನು ಮಾಡಲಾಗಿದೆ. ವೈನ್‌ ಬಾಟಲಿಗಳಿಗೂ ಬೇಡಿಕೆ ಹೆಚ್ಚಿದೆ. ಕತ್ತಲಾಗುತ್ತಲೇ ಮದ್ಯದ ಅಂಗಡಿಗಳಲ್ಲಿ ಬಿಯರ್‌ ಹಾಗೂ ವೈನ್‌ ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಹೊಸ ವರ್ಷಾಚರಣೆಯ ಪ್ರಯುಕ್ತ ನಗರಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹೊಸ ವರ್ಷಾಚರಣೆ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT